More

    ಕೈಗೆಟುಕುತ್ತಿದೆಯೇ ಕೋವಿಡ್ ವಿಮೆ?; ಇಲ್ಲಿದೆ ಕರೊನಾ ಕವಚ್​-ರಕ್ಷಕ್ ಕುರಿತ ವಿವರ

    ಕಳೆದ ವರ್ಷ ವಿಮಾ ಕಂಪನಿಗಳ ನಿಯಂತ್ರಕ ಸಂಸ್ಥೆ ಐಆರ್​ಡಿಎ ಕಡಿಮೆ ಪ್ರೀಮಿಯಂನ ‘ಕರೊನಾ ಕವಚ್’ ಮತ್ತು ‘ಕರೊನಾ ರಕ್ಷಕ್’ ವಿಮೆ ಪರಿಚಯಿಸುವಂತೆ ನಿರ್ದೇಶಿಸಿತ್ತು. ಬಹಳಷ್ಟು ಜನ ಇವನ್ನು ಖರೀದಿಸಿದ್ದರು. ಆದರೆ, ಕರೊನಾ 2ನೇ ಅಲೆಯ ಅಬ್ಬರಕ್ಕೆ ಇವುಗಳಿಂದ ರಕ್ಷಣೆ ಒದಗುತ್ತಿದೆಯೇ?

    | ಉಮೇಶ್​ಕುಮಾರ್ ಶಿಮ್ಲಡ್ಕ

    ಕೋವಿಡ್ 19 ಎರಡನೇ ಅಲೆ ದೇಶಾದ್ಯಂತ ಸಾಕಷ್ಟು ತಲ್ಲಣವನ್ನೇ ಸೃಷ್ಟಿಸಿದೆ. ಕೋವಿಡ್ ಸೋಂಕಿತರ ಪೈಕಿ ಬಹುತೇಕರ ಭವಿಷ್ಯ ನಿಧಿ ಪಿಂಚಣಿ ಉಳಿತಾಯ ಮತ್ತು ಇತರೆ ಉಳಿತಾಯದ ಹಣವೂ ಕರಗಿದೆ. ಈ ಪೈಕಿ ಒಂದಷ್ಟು ಜನ ಅಲ್ಪಾವಧಿಯ ‘ಕರೊನಾ ಕವಚ್’, ‘ಕರೊನಾ ರಕ್ಷಕ್’ ಮುಂತಾದ ನಿಶ್ಚಿತ ಉದ್ದೇಶದ ವಿಮೆಯನ್ನೂ ಮಾಡಿಸಿಕೊಂಡಿದ್ದರು. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾರಣ ಈ ಪೈಕಿ ಅನೇಕರು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದುಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ವಿಮೆ ಕ್ಲೇಮು ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಸಹಜ. ಕರೊನಾ ವಿಮೆಯ ಕುರಿತ ಇತ್ತೀಚಿನ ದತ್ತಾಂಶ ಮತ್ತು ಈ ಕುರಿತ ಆರೋಗ್ಯ ವಿಮಾ ಕ್ಷೇತ್ರದ ಪರಿಣತರ ಅಭಿಪ್ರಾಯಗಳು ಕೂಡ ಪ್ರಕಟವಾಗಿವೆ. ಮನೆಯಲ್ಲೇ ಚಿಕಿತ್ಸೆ ಪಡೆದರೂ ಕರೊನಾ ವಿಮೆ ಸಿಗುತ್ತೆ, ಆದರೆ…?: ಕರೊನಾ ಕವಚ್, ಕರೊನಾ ರಕ್ಷಕ್ ಹಳೆಯ ಪಾಲಿಸಿಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆದುದಕ್ಕೆ ವಿಮಾ ಸುರಕ್ಷೆಯ ಸೌಲಭ್ಯ ಇರಲಿಲ್ಲ. ಆದರೆ, ಹೊಸದರಲ್ಲಿ ನಿಯಮ ಪರಿಷ್ಕರಿಸಲಾಗಿದ್ದು, ಮನೆಯಲ್ಲೇ ಕೋವಿಡ್ ಚಿಕಿತ್ಸೆ ಪಡೆದರೂ ಬಹುತೇಕ ಕರೊನಾ ಕವಚ್, ಕರೊನಾ ರಕ್ಷಕ್ ಯೋಜನೆ ಪ್ರಕಾರ ವಿಮಾ ಸುರಕ್ಷೆ ಸಿಗುತ್ತದೆ. ಎಲ್ಲ ಕಂಪನಿಗಳ ಕರೊನಾ ವಿಮೆಯಲ್ಲೂ ಈ ಸೌಲಭ್ಯ ಇದೆ ಎಂದರ್ಥವಲ್ಲ. ವಿಮಾ ಪಾಲಿಸಿ ಪಡೆಯುವಾಗ ಇದನ್ನೆಲ್ಲ ಗಮನಿಸಬೇಕಾದ್ದು ಅವಶ್ಯ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ವಿಮಾ ಕಂಪನಿಗೆ ತಡಮಾಡದೇ ಈ ವಿಚಾರ ತಿಳಿಸಬೇಕು ಎನ್ನುತ್ತಾರೆ ಆರೋಗ್ಯ ವಿಮಾ ಕ್ಷೇತ್ರದ ಪರಿಣತರು.

    ಐಆರ್​ಡಿಎ ಸೂಚನೆ ಏನು?: ಕೆಲವು ವಿಮಾ ಕಂಪನಿಗಳು ಕರೊನಾ ಕವಚ್ ಮತ್ತು ಕರೊನಾ ರಕ್ಷಕ್ ಪಾಲಿಸಿಯನ್ನು ಗ್ರಾಹಕರಿಗೆ ಒದಗಿಸುವುದನ್ನು ನಿಲ್ಲಿಸಿವೆ. ಇನ್ನು ಕೆಲವು ಕಂಪನಿಗಳು ಈ ಪಾಲಿಸಿಗಳ ನವೀಕರಣವನ್ನು ನಿರಾಕರಿಸುತ್ತಿವೆ ಎಂಬ ಅಂಶ ಗಮನಕ್ಕೆ ಬಂದಿದೆ. ಕೋವಿಡ್ 19 ಎರಡನೇ ಅಲೆ ತೀವ್ರಗೊಂಡಿರುವ ಕಾರಣ ಇಂತಹ ಸಂಕಷ್ಟ ಸಮಯದಲ್ಲಿ ಸಾರ್ವಜನಿಕರಿಗೆ ವಿಮಾ ರಕ್ಷಣೆಯನ್ನು ಒದಗಿಸಲು ನಿರಾಕರಿಸುವುದು ನ್ಯಾಯಯುತ ನಡೆಯಲ್ಲ ಎಂದು ವಿಮಾ ಕಂಪನಿ ನಿಯಂತ್ರಕ ಸಂಸ್ಥೆ ಐಆರ್​ಡಿಎ ಎಚ್ಚರಿಸಿದೆ. ಕಂಪನಿಗಳು ಕ್ಲೇಮ್ ನಿರಾಕರಿಸಿದರೆ ಲಿಖಿತ ರೂಪದಲ್ಲಿ ನಿರಾಕರಣೆ ಪತ್ರ ತೆಗೆದುಕೊಂಡು ಐಆರ್​ಡಿಎಗೆ ವಿಮಾ ಕಂಪನಿ ವಿರುದ್ಧ ದೂರು ದಾಖಲಿಸಬಹುದು.

    ಕೈಗೆಟುಕುತ್ತಿದೆಯೇ ಕೋವಿಡ್ ವಿಮೆ?; ಇಲ್ಲಿದೆ ಕರೊನಾ ಕವಚ್​-ರಕ್ಷಕ್ ಕುರಿತ ವಿವರ

    ವಿಮೆ ಕ್ಲೇಮ್ ಮಾಡಲು ಏನೇನು ಬೇಕು?: ಕೋವಿಡ್ ವಿಮೆ ಕ್ಲೇಮ್ ಮಾಡಲು ಬೇಕಾದ ದಾಖಲೆಗಳ ಪಟ್ಟಿಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮೊದಲನೆಯದಾಗಿ ಆರ್​ಟಿಪಿಸಿಆರ್ ಟೆಸ್ಟ್​ನಲ್ಲಿ ಕೋವಿಡ್ 19 ಪಾಸಿಟಿವ್ ಎಂದು ನಮೂದಿಸಿರುವ ಸ್ಪೆಸಿಮನ್ ರೆಫರಲ್ ಫಾಮ್ರ್ (ಎಸ್​ಆರ್​ಎಫ್) ಐಡಿ ಇರುವಂತಹ ವರದಿಯ ಪ್ರತಿ ಬೇಕು. ಇದನ್ನು ಐಸಿಎಂಆರ್ ಮಾನ್ಯತೆ ಹೊಂದಿದ ಲ್ಯಾಬ್​ನಿಂದಲೇ ಪಡೆದಿರಬೇಕು. ಹೋಮ್ ಐಸೋಲೇಶನ್​ನಲ್ಲಿ ಇರುವುದಕ್ಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿ ಡಾಕ್ಟರ್ ನೀಡಿರುವ ಪ್ರಿಸ್ಕ್ರಿಪ್ಶನ್ ಬೇಕು. ವಿಮಾ ಪಾಲಿಸಿಯನ್ನು ಎಲ್ಲಿಂದ ಖರೀದಿಸಿದ್ದು ಎಂಬುದರ ದಾಖಲೆಯೂ ಅಗತ್ಯ.

    ವಿಮೆ ವ್ಯಾಪ್ತಿಯಲ್ಲಿ ಏನೇನು ಬರುತ್ತದೆ?: ಕೋವಿಡ್ 19 ಸೋಂಕಿತ ರೋಗಿಗೆ ನೀಡುವ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ವಿಮಾ ಸೌಲಭ್ಯದ ಪ್ರಕಾರ ಆಸ್ಪತ್ರೆಗೆ ಪಾವತಿಸಲಾಗುವುದಿಲ್ಲ ಅಥವಾ ರೋಗಿಗೆ ಮರುಪಾವತಿ ಮಾಡಲಾಗುವುದಿಲ್ಲ. ವೈದ್ಯಕೀಯ ವೆಚ್ಚ (ಔಷಧ ವೆಚ್ಚ ಸೇರಿ) ಡಾಕ್ಟರ್ ಶುಲ್ಕ, ಸಿಟಿ ಸ್ಕಾ್ಯನ್ (ಅವಶ್ಯವಾದರೆ), ಎಕ್ಸ್-ರೇ ಮತ್ತು ಇತರೆ ನಿಶ್ಚಿತ ಟೆಸ್ಟ್​ಗಳ ವೆಚ್ಚವನ್ನಷ್ಟೇ ವಿಮೆ ಭರಿಸುತ್ತದೆ. ವೈದ್ಯಕೀಯೇತರ ವೆಚ್ಚಗಳಾದ ಪಿಪಿಇ ಕಿಟ್, ಮಾಸ್ಕ್, ಇಂಜೆಕ್ಷನ್ ಸಿರಿಂಜ್, ರೋಗಿಯ ಆಹಾರದ ವೆಚ್ಚ ಮುಂತಾದವುಗಳನ್ನು ಇದರಲ್ಲಿ ಭರಿಸಲಾಗುವುದಿಲ್ಲ.

    ಕೈಗೆಟುಕುತ್ತಿದೆಯೇ ಕೋವಿಡ್ ವಿಮೆ?; ಇಲ್ಲಿದೆ ಕರೊನಾ ಕವಚ್​-ರಕ್ಷಕ್ ಕುರಿತ ವಿವರ

    ಪಿಎಂಜೆಜೆಬಿವೈ ಕ್ಲೇಮ್ ಪ್ರಕ್ರಿಯೆ ಹೇಗೆ?: ಬ್ಯಾಂಕ್ ಪಾಸ್ ಪುಸ್ತಕ ಗಮನಿಸಿದರೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)ಗೆ ಎಂದು ಪ್ರತಿ ವರ್ಷ 330 ರೂ. ಕಡಿತವಾಗುವುದು ಕಾಣಬಹುದು. ಇದು ಬ್ಯಾಂಕ್ ಖಾತೆದಾರ ಮೃತಪಟ್ಟಾಗ ಅವರ ನಾಮಿನಿಗೆ 2 ಲಕ್ಷ ರೂ. ವಿಮೆಯ ಹಣವನ್ನು ಒದಗಿಸುತ್ತದೆ. ಈ ಕೋವಿಡ್​ನ ಸಂಕಷ್ಟದ ಸಮಯದಲ್ಲಿ ಯಾರಾದರೂ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅವರ ವಾರಸುದಾರರು ಈ ವಿಮೆಯ ಹಣವನ್ನು ಪಡೆಯಬಹುದು. ಇದಕ್ಕಾಗಿ ಅವರು ಮೃತರ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಶಾಖೆಯ ಮ್ಯಾನೇಜರನ್ನು ಸಂಪರ್ಕಿಸಬೇಕು.

    ನಟಿ ವಿಜಯಲಕ್ಷ್ಮೀಗೆ ಮತ್ತೊಂದು ಸಂಕಷ್ಟ; ಸಹೋದರಿಗಾಗಿ ಶಿವಣ್ಣನ ಸಹಾಯ ಯಾಚನೆ..

    ಆಪರೇಷನ್​ ಕೋಬ್ರಾ: ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಜನರು; ಬುಸುಗುಟ್ಟುತ್ತಲೇ ಮೇಲೆ ಬಂದ ಸರ್ಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts