More

    ಆರ್ಥಿಕ ದುರ್ಬಲ ಆಟೋ ಚಾಲಕರಿಗೆ ಜೀವ ವಿಮೆ ಸೌಲಭ್ಯ

    ಸುಂಟಿಕೊಪ್ಪ: ಆರ್ಥಿಕವಾಗಿ ದುರ್ಬಲರಾಗಿರುವ ಆಟೋ ಚಾಲಕರಿಗೆ ಜೀವವಿಮಾ ಸೌಲಭ್ಯವನ್ನು ವೈಯಕ್ತಿಕವಾಗಿ ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಹೇಳಿದರು.


    ಸುಂಟಿಕೊಪ್ಪ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ರಜತ ಮಹೋತ್ಸವ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಡಾನ್ಸ್‌ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಆಟೋ ಚಾಲಕರು ಮತ್ತು ಮಾಲೀಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಆಟೋ ಚಾಲಕರು ಮತ್ತು ಮಾಲೀಕರು ಸಂಕಷ್ಟ ಎದುರಾದಾಗ ಯಾವುದೇ ಸಂದರ್ಭದಲ್ಲಿ ನೆರವು ಕೇಳಬಹುದು ಎಂದು ತಿಳಿಸಿದರು.


    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಂಡಿಸಿದ ಮನವಿ ಪತ್ರಕ್ಕೆ ಉತ್ತರಿಸಿದ ಶಾಸಕರು, ಬಸವನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಪ್ರಾರಂಭಕ್ಕೆ ಭೂಮಿಪೂಜೆ ನೆರವೇರಿದ್ದು, ಡಿಪೋ ಆರಂಭದ ಬಳಿಕ ಕನಿಷ್ಠ 100 ಮಾರ್ಗಗಳು ಹೆಚ್ಚಾಗುತ್ತವೆ. ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.


    ಸದ್ಯದ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳು ಪರೀಕ್ಷೆಗಳಿಗೆ ಹಾಜರಾಗುವ ನಿಟ್ಟಿನಲ್ಲಿ ವಿಶೇಷ ಬಸ್ ವ್ಯವಸ್ಥೆಗೆ ಶನಿವಾರವೇ ಡಿಪೋ ವ್ಯವಸ್ಥಾಪಕರಿಗೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಜನಸಂಖ್ಯೆ ಆಧಾರದ ಮೇರೆಗೆ ಕಾನೂನು ಚೌಕಟ್ಟಿನಲ್ಲಿ ಪುರಸಭೆ ಮಾಡುವ ಬಗ್ಗೆ ಸರ್ಕಾರದೊಂದಿಗೆ ವ್ಯವಹರಿಸಲಾಗುವುದು ಎಂದು ತಿಳಿಸಿದರು.


    ಸುಂಟಿಕೊಪ್ಪ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬದಲು ಒಳ್ಳೆಯ ವೈದ್ಯರನ್ನು ನೇಮಕ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಸುಂಟಿಕೊಪ್ಪ ಪಟ್ಟಣ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜಲಜೀವನ ಮಿಷನ್ ಯೋಜನೆಯಡಿ ಪರಿಹಾರ ಕಂಡುಕೊಳ್ಳಲಾಗುವುದು . ಕಸ ವಿಲೇವಾರಿಗೆ ಟ್ರಾೃಕ್ಟರ್ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ 2 ಪಿಕಪ್ ವಾಹನಗಳನ್ನು ಪೂರೈಸುವ ಬಗ್ಗೆ ಪರಿಶೀಲಿಸಲಾಗುವುದೆಂದು ಭರವಸೆ ನೀಡಿದರು.


    ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಸಾದ್‌ಕುಟ್ಟಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ವಿ.ಪಿ.ಶಶಿಧರ್, ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಮಾತನಾಡಿದರು.


    ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಶಾಸಕ ಮಂತರ್‌ಗೌಡ ಅವರನ್ನು ಸನ್ಮಾನಿಸಲಾಯಿತು. 60 ವರ್ಷ ಮೇಲ್ಪಟ್ಟ ಹಿರಿಯ ಆಟೋ ಚಾಲಕರು ಮತ್ತು ಮಾಲೀಕರಾದ ಸಂಜೀವ, ಕುಂಞ ಮಹ್ಮದ್, ಮೊಣ್ಣು, ಹಮೀದ್ ಹಾಗೂ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಸ್ಥಾಪಕ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಹಾಲಿ ಅಧ್ಯಕ್ಷ ಎ.ಎಂ.ಶರೀಫ್ ಅವರನ್ನು ಸನ್ಮಾನಿಸಲಾಯಿತು.


    ಗ್ರಾ.ಪಂ.ಉಪಾಧ್ಯಕ್ಷ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಬಿ.ಎಂ.ಸುರೇಶ್, ಐ.ಸೋಮನಾಥ್, ಆಲಿಕುಟ್ಟಿ, ರಫೀಕ್‌ಖಾನ್, ಮಂಜುಳಾ, ವಸಂತಿ, ಶಾಂತಿ, ನಾಗರತ್ನಾ, ಮಂಗಳಾ, ಗೀತಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಇ.ಕರೀಂ, ತಾ.ಪಂ.ಮಾಜಿ ಸದಸ್ಯೆ ಒಡಿಯಪ್ಪನ ವಿಮಲಾವತಿ ಸುಧೀಶ್, ಭಾರತೀಯ ಹಾಕಿ ತರಬೇತುದಾರೆ ಅಂಕಿತಾ ಸುರೇಶ್, ಆಟೋ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಹಾಲಿ ಅಧ್ಯಕ್ಷ ಎ.ಎಂ.ಶರೀಫ್, ಪ್ರಧಾನ ಕಾರ್ಯದರ್ಶಿ ಸಿ.ಎ. ಸಚಿನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts