More

    ಪ್ರಶಸ್ತಿಗೆ ಮುತ್ತಿಟ್ಟ ಅಮ್ಮತ್ತಿರ ತಂಡ

    ಗೊಣಿಕೊಪ್ಪ : ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಗೋಣಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ಸೋಮವಾರ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರೀಡೋತ್ಸವದ ಅಂಗವಾಗಿ 24 ತಂಡಗಳು ಕ್ರಿಕೆಟ್ ತಂಡಗಳಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅಮ್ಮತ್ತಿರ ಕುಟುಂಬ ತಂಡ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಪಡೆಯಿತು. ಅಚ್ಚಿಯಂಡ ಕ್ರಿಕೆಟ್ ಕಪ್-2024 ತನ್ನದಾಗಿಸಿಕೊಂಡಿತು.


    ಬಾನಂಡ ಕುಟುಂಬ ತಂಡವು ರನ್ನರ್ ಆಪ್‌ಗೆ ತೃಪ್ತಿ ಪಟ್ಟುಕೊಂಡಿತ್ತು. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾನಂಡ ತಂಡವು ಮೈದಾನಕ್ಕಿಳಿದು ಪ್ರದರ್ಶನ ನೀಡಿದರು. ಕೇವಲ 6 ಓವರ್‌ನಲ್ಲಿ 28 ರನ್‌ಗಳನ್ನು ಮಾತ್ರ ಗಳಿಸಿತ್ತು. ಅಮ್ಮತ್ತಿರ ತಂಡವು ತನ್ನ ಬಿಗಿ ಬೌಲಿಂಗ್ ಪ್ರದರ್ಶನ ನೀಡಿದವು. ನಂತರ ಅಮ್ಮತ್ತಿರ ತಂಡವು ಇನ್ನು 2 ಓವರ್‌ಗಳು ಉಳಿದಿರುವಂತೆಯೇ 28 ರನ್‌ಗಳನ್ನು ಬಾರಿಸಿ ವಿಜೇತ ತಂಡವಾಗಿ ಹೊರ ಹೊಮ್ಮಿತ್ತು.
    ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 24 ತಂಡಗಳು ಉತ್ತಮ ಪ್ರದರ್ಶನ ನೀಡಿದವು. ವಿಜೇತ ತಂಡಕ್ಕೆ 30 ಸಾವಿರ ರೂ. ನಗದು, ರನ್ನರ್ ಆಫ್ ತಂಡಕ್ಕೆ 20 ಸಾವಿರ ರೂ. ಹಾಗೂ ತೃತೀಯ ಹಾಗೂ 4ನೇ ತಂಡಕ್ಕೆ ತಲಾ 5 ಸಾವಿರ ರೂ. ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ತೃತೀಯ ಸ್ಥಾನವನ್ನು ಕೊಂಡಿಂಜಮ್ಮನ ಹಾಗೂ 4ನೇ ಸ್ಥಾನವನ್ನು ಪುತ್ತಾಮನೆ ಕಟುಂಬವು ಪಡೆದವು. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.


    ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಕೊಡಗಿನಲ್ಲಿರುವ ಅಮ್ಮ ಕೊಡವ ಸಮುದಾಯಗಳ ಜನಸಂಖ್ಯೆ ಕಡಿಮೆಯಿದ್ದರೂ ಅನಾಧಿ ಕಾಲದಿಂದಲೂ ಹಿರಿಯರು ಆಚರಿಸಿಕೊಂಡು ಬಂದಿರುವ ನಮ್ಮಲ್ಲಿರುವ ತಮ್ಮ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದೇವೆ ಎಂದರು.


    ಯಾವುದೇ ಸಮಸ್ಯೆ ಎದುರಾದರೂ ವಾರ್ಷಿಕವಾಗಿ ನಡೆಸುವ ಕ್ರಿಡೋತ್ಸವವನ್ನು ತಪ್ಪದೆ ವಿಶೇಷವಾಗಿ ಪ್ರತಿ ವರ್ಷವೂ ನಡೆಸಬೇಕು. ಕ್ರೀಡೆಯ ಮೂಲಕ ವಾರ್ಷಿಕವಾಗಿ ಎಲ್ಲರೂ ಒಂದೆಡೆ ಸೇರುವ ಪ್ರಯತ್ನ ವರ್ಷದಿಂದ ವರ್ಷಕ್ಕೆ ಇಮ್ಮಡಿಯಾಗುತ್ತಿದೆ. ಇನ್ನು ಮುಂದೆಯೂ ಇನ್ನಷ್ಟು ಒಗ್ಗಟ್ಟು ಪ್ರದರ್ಶನವಾಗಲಿ, ಸರ್ಕಾರದಿಂದ ಮಂಜೂರಾಗಿರುವ 5 ಲಕ್ಷ ರೂ. ಅನುದಾನ ಉತ್ತಮ ರೀತಿಯಲ್ಲಿ ಸದ್ಬಳಕೆಯಾಗಲಿ ಎಂದರು.


    ಅಖಿಲ ಅಮ್ಮಕೊಡವ ಸಮಾಜ ಅಚ್ಚಿಯಂಡ ಕುಟುಂಬಸ್ಥರು, ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘ, ಅಖಿಲ ಅಮ್ಮಕೊಡವ ಸಮಾಜ ಬೆಂಗಳೂರು, ಶ್ರೀಕೃಷ್ಣ ಅಮ್ಮಕೊಡವ ಸಂಘ ಕೋತೂರು, ಕಾವೇರಿ ಅಮ್ಮಕೊಡವ ಮಹಿಳಾ ಸಂಘ ಕೊಡಗು, ಕಂಗಳತನಾಡ್ ಅಮ್ಮಕೊಡವ ಸಂಘ ಮಾಯಮುಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಕೋತೂರು ಹಾಗೂ ಕಾವೇರಿ ಅಮ್ಮಕೊಡವ ಸಾಂಸ್ಕೃತಿಕ ಸಂಘ ಮಡಿಕೇರಿ, ಪದಾಧಿಕಾರಿಗಳು ಭಾಗವಹಿಸಿದ್ದರು.
    ಅಚ್ಚಿಯಂಡ ಕುಟುಂಬಸ್ಥರ ಅಧ್ಯಕ್ಷ ಬೋಸ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಳಿಮಂಡ ಉಮೇಶ್ ಕೇಚಮಯ್ಯ, ಪಾಡಿಯಮ್ಮಂಡ ಜಾಲಿ, ಅಚ್ಚಿಯಂಡ ಚಂದ್ರಶೇಖರ್, ಅಮ್ಮಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಪುತ್ತಮನೆ ಅನಿಲ್ ಪ್ರಸಾದ್, ಅಚ್ಚಿಯಂಡ ಕುಟುಂಬದ ವ್ಯವಸ್ಥಾಪಕ ವೇಣುಗೋಪಾಲ್, ಕಾರ್ಯದರ್ಶಿಗಳಾದ ಅಚ್ಚಿಯಂಡ ಅಜಿತ್ ಹಾಗೂ ಅಚ್ಚಿಯಂಡ ಕುಟುಂಬಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts