ಚೆನ್ನೈ: ನಟಿ ತ್ರಿಷಾ ಕುರಿತಾದ ವಿವಾದಾತ್ಮಕ ಹೇಳಿಕೆಗೆ ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ.
ಕ್ಷಮೆ ಕೋರುವಂತೆ ನಾಡಿಗರ್ ಸಂಘಂ (ದಕ್ಷಿಣ ಭಾರತದ ಕಲಾವಿದರ ಸಂಘ) ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮನ್ಸೂರ್, ನನ್ನಿಂದ ಯಾವುದೇ ವಿವರಣೆಯನ್ನು ಕೇಳದೆ ಕ್ಷಮೆಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೇವಲ ನಾಲ್ಕು ಗಂಟೆಗಳಲ್ಲಿ ನೋಟಿಸ್ ಹಿಂಪಡೆಯದೇ ಇದ್ದರೆ ಸಂಘದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಮನ್ಸೂರ್ ಎಚ್ಚರಿಕೆ ನೀಡಿದ್ದಾರೆ.
ಸಿನಿಮಾದಲ್ಲಿ ಪ್ರದರ್ಶಿಸುವ ಅತ್ಯಾಚಾರದ ದೃಶ್ಯಗಳು ನಿಜವೇ? ನಾನು ನೀಡಿದ ಹಾಸ್ಯಾಸ್ಪದ ಹೇಳಿಕೆಯನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ ಮತ್ತು ಅದನ್ನು ದೊಡ್ಡ ವಿಷಯವನ್ನಾಗಿ ಪರಿವರ್ತಿಸುತ್ತಿದ್ದಾರೆ. ನನ್ನಿಂದ ಯಾವುದೇ ವಿವರಣೆಯನ್ನು ಕೇಳದೆ, ಕೇವಲ ಏಕ ಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ಕಲಾವಿದರ ಸಂಘ, ನನ್ನ ವಿರುದ್ಧ ಕೇಸು ಹಿಂಪಡೆಯಲಿಲ್ಲ ಅಂದರೆ, ನಾನೂ ಕೂಡ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ವಿವಾದಾತ್ಮಕ ಹೇಳಿಕೆ ಏನು?
ಇತ್ತೀಚೆಗಷ್ಟೇ ಬಿಡುಗಡೆಯಾದ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜು ನಿರ್ದೇಶನದ ಹಾಗೂ ಇಳಯದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದೆ. ಈ ಸಿನಿಮಾದಲ್ಲಿ ತ್ರಿಷಾ ಸಹ ನಟಿಸಿದ್ದಾರೆ. ಮನ್ಸೂರ್ ಅಲಿ ಖಾನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಗ್ಗೆ ಮಾತನಾಡುವಾಗ ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ನಾಯಕಿಯರಾದ ಖುಷ್ಬೂ, ರೋಜಾ ಸೇರಿದಂತೆ ಹಲವರೊಂದಿಗೆ ರೇಪ್ ಸೀಕ್ವೆನ್ಸ್ ಮಾಡಿದ್ದೇನೆ. ಆದರೆ ನನಗೆ ಲಿಯೋ ಪಾತ್ರದ ಆಫರ್ ಬಂದಾಗ, ನಾನು ತ್ರಿಷಾ ಜೊತೆ ರೇಪ್ ಸೀಕ್ವೆನ್ಸ್ ಮಾಡುತ್ತೇನೆ ಎಂದು ಭಾವಿಸಿದೆ. ದುರದೃಷ್ಟವಶಾತ್ ಸಿನಿಮಾದಲ್ಲಿ ಅಂತಹ ಸೀಕ್ವೆನ್ಸ್ ಇಲ್ಲ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮನ್ಸೂರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
The context ….😡😡pic.twitter.com/n0ge3Qkzer
— Aryan (@chinchat09) November 18, 2023
ತ್ರಿಷಾ ಖಂಡನೆ
ಮನ್ಸೂರ್ ಅವರ ಆಕ್ಷೇಪಾರ್ಹ ಹೇಳಿಕೆಗಳು ನಟಿ ತ್ರಿಷಾ ಅವರ ಗಮನಕ್ಕೂ ಬಂದಿದ್ದು, ಬೇಸರದ ಜತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ತ್ರಿಷಾ, ಇತ್ತೀಚಿನ ವಿಡಿಯೋದಲ್ಲಿ ನನ್ನ ಬಗ್ಗೆ ಮನ್ಸೂರ್ ಅಲಿ ಖಾನ್ ಅವರು ಕೆಟ್ಟ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಆಡಿರುವ ಮಾತುಗಳು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ ಮತ್ತು ಅವರ ಕೆಟ್ಟ ಅಭಿರುಚಿಯನ್ನು ತೋರುತ್ತದೆ. ಇನ್ನೆಂದಿಗೂ ಅವರೊಂದಿಗೆ ನಾನು ತೆರೆ ಹಂಚಿಕೊಳ್ಳುವುದಿಲ್ಲ. ಇವರಂತಹ ಜನರು ಮಾನವ ಕುಲಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ತ್ರಿಷಾ ಟೀಕಾ ಪ್ರಹಾರ ನಡೆಸಿದ್ದಾರೆ.
A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…
— Trish (@trishtrashers) November 18, 2023
ಮನ್ಸೂರ್ ಅಲಿ ವಿರುದ್ಧ ಕೇಸ್ ದಾಖಲು
‘ಲಿಯೋ’ ಚಿತ್ರದಲ್ಲಿ ರೇಪ್ ಸೀನ್ ಇರಬೇಕಿತ್ತು, ನಟಿ ತ್ರಿಷಾ ಜೊತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಮನ್ಸೂರ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚನೆ ನೀಡಿದೆ. ಅದರಂತೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಚೆನ್ನೈ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), ಸೆಕ್ಷನ್ 509 (ಮಹಿಳೆಯರ ಘನತೆಗೆ ಧಕ್ಕೆ ತರುವ ಮಾತು, ಹಾವಭಾವ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮನ್ಸೂರ್ಗೆ ವಿವಾದ ಹೊಸದೇನಲ್ಲ
ಈ ಹಿಂದೆ ಮನ್ಸೂರ್ ಅಲಿಖಾನ್ ಜೈಲರ್ ಚಿತ್ರದ ಕವಲಯ್ಯಾ.. ಹಾಡಿಗೆ ಅನುಚಿತ ಕಾಮೆಂಟ್ ಮಾಡಿದ್ದರು. ಇದೊಂದು ಕೊಳಕು ಹಾಡು ಎಂದು ಜರಿದಿದ್ದರು. ಕಾವಲಯ್ಯ ಹಾಡಿನಲ್ಲಿ ತಮನ್ನಾ ಹೆಜ್ಜೆ ತುಂಬಾ ಕೊಳಕಾಗಿದೆ. ಬೇಕು ಎಂದು ತಾಳ್ಮೆಯಿಂದ ಕೈ ಬೀಸುವುದು ನೋಡಲು ತುಂಬಾ ಅಸಹ್ಯಕರ. ಇಂತಹ ಹಾಡುಗಳು ಮತ್ತು ಸ್ಟೆಪ್ಗಳಿಗೆ ಸೆನ್ಸಾರ್ ಅಧಿಕಾರಿಗಳು ಏಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಮನ್ಸೂರ್ ಪ್ರಶ್ನಿಸಿದ್ದರು. ತಾವು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸರಕು ಚಿತ್ರದ ಕೆಲವು ದೃಶ್ಯಗಳನ್ನು ಸೆನ್ಸಾರ್ ಬೋರ್ಡ್ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಕಾವಲಯ್ಯ ಹಾಡನ್ನು ಉಲ್ಲೇಖಿಸಿ ಸೆನ್ಸಾರ್ ಮಂಡಳಿಯ ನಡೆಯನ್ನು ಟೀಕಿಸಿದ್ದರು. (ಏಜೆನ್ಸೀಸ್)
ತ್ರಿಷಾ ಜತೆ ಬೆಡ್ರೂಮ್ ಸೀನ್: ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದ ಮನ್ಸೂರ್ ಅಲಿ ಖಾನ್
‘ಲಿಯೋದಲ್ಲಿ ರೇಪ್ ಸೀನ್ ಇರಬೇಕಿತ್ತು’ ಎಂದ ಮನ್ಸೂರ್ ಅಲಿ…’ಇಂತಹ ನೀಚನೊಂದಿಗೆ ಮತ್ತೆ ನಟಿಸಲ್ಲ’ ಎಂದ ತ್ರಿಷಾ…