More

    ಬಾಹ್ಯಾಕಾಶ ಪ್ರವಾಸ ಸಕ್ಸಸ್: ತೊಂಬತ್ತೇ ನಿಮಿಷದಲ್ಲಿ ಅಂತರಿಕ್ಷಯಾನ; ಸ್ಪೇಸ್ ರೇಸ್ ಗೆದ್ದ ಬ್ರಾನ್ಸನ್

    ನ್ಯೂ ಮೆಕ್ಸಿಕೊ: ಅಂತರಿಕ್ಷ ಕ್ಷೇತ್ರದಲ್ಲಿ ಭಾನುವಾರ ಐತಿಹಾಸಿಕ ದಿನವಾಗಿ ದಾಖಲಾಯಿತು. ಬ್ರಿಟನ್​ನ ಕನಸುಗಾರ ಉದ್ಯಮಿ ರಿಚರ್ಡ್ ಬ್ರಾನ್ಸನ್ ಒಡೆತನದ ವಿಎಸ್​ಎಸ್ ಯುನಿಟಿ ನೌಕೆ ಭಾನುವಾರ ಇಲ್ಲಿನ ನೆಲೆಯಿಂದ ನಭೋಮಂಡಲಕ್ಕೆ ಪಯಣಿಸಿ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಈ 90 ನಿಮಿಷಗಳ ಸ್ಪೇಸ್ ರೇಸ್ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲೂ ಹೊಸ ಮೈಲಿಗಲ್ಲು ನೆಟ್ಟಿದೆ. ಅಮೆರಿಕದ ನಾಸಾ ದಶಕಗಳ ಹಿಂದೆಯೇ ಬಾಹ್ಯಾಕಾಶ ಯಾನ ಮಾಡಿತ್ತಾದರೂ ಖಾಸಗಿ ಸಂಸ್ಥೆಯೊಂದು ಈ ಸಾಧನೆ ಮೆರೆದಿರುವುದು ವಿಶೇಷ. ಈ ಯಶಸ್ವಿಯಾನದಲ್ಲಿ ಭಾರತೀಯ ಮೂಲದ ಯುವತಿ ಕೂಡ ಇದ್ದದ್ದು ಭಾರತದ ಪಾಲಿಗೂ ಹೆಮ್ಮೆ.

    ಆರು ಜನ ಭಾಗಿ: ಬ್ರಾನ್ಸನ್​ರ ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯ ವಿಎಸ್​ಎಸ್ ಯುನಿಟಿ ವಿಮಾನದಲ್ಲಿ ಅದರ ಸಂಸ್ಥಾಪಕ ಬ್ರಾನ್ಸನ್ ಹಾಗೂ ಭಾರತ ಮೂಲದ ಗಗನಯಾನಿ ಸಿರೀಷಾ ಬಂಡ್ಲಾ ಸಹಿತ ಆರು ಜನರು ಪಯಣಿಸಿ ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಶಕೆಗೆ ಸಾಕ್ಷೀಭೂತರಾದರು.

    ವಿಮಾನದಲ್ಲಿದ್ದವರು: ಉದ್ಯಮಿ ರಿಚರ್ಡ್ ಬ್ರಾನ್ಸನ್, ಸಿರೀಷಾ ಬಂಡ್ಲಾ, ಮೈಕಲ್ ಮಾಸುಕ್ಕಿ, ಬೆತ್ ಮೋಸೆಸ್, ಕೊಲಿನ್ ಬೆನೆಟ್, ಡೇವ್ ಮ್ಯಾಕೆ ನೌಕೆಯಲ್ಲಿದ್ದ ಇಬ್ಬರು ಪೈಲಟ್​ಗಳು ಹಾಗೂ ನಾಲ್ವರು ಪ್ರಯಾಣಿಕರು.

    ಪಯಣ ಹೀಗಿತ್ತು: ಮೂಲ ನೌಕೆ (ಮದರ್​ಶಿಪ್) ರಾಕೆಟ್​ಚಾಲಿತ ವಿಎಸ್​ಎಸ್ ಯುನಿಟಿ ನಾಮಾಂಕಿತ ಸ್ಪೇಸ್​ಪ್ಲೇನ್ ಅನ್ನು ಬೇರ್ಪಡಿಸಿತು. ಅದರ ಇಂಜಿನ್ ಚಾಲನೆಗೊಂಡು ಮ್ಯಾಕ್ 3 ಹಂತವಾದ 80 ಕಿ.ಮೀ.ಆಚೆ ಅದು ಪಯಣಿಸಿ ಭೂಮಿಯನ್ನು ಸುತ್ತು ಹಾಕಿದೆ. ರಾಕೆಟ್ ಎಂಜಿನ್ ಬೇರ್ಪಟ್ಟ ನಂತರ, ಪ್ರಯಾಣಿಕರು ಸೊಂಟ ಪಟ್ಟಿ ತೆಗೆದುಕೊಂಡು ಭಾರ ರಾಹಿತ್ಯತೆಯನ್ನು ಅನುಭವಿಸಿದರು. ಅದೇ ವೇಳೆ ಅವರು ನೌಕೆಯ 17 ಕಿಟಕಿಗಳ ಮೂಲಕ ಭೂಮಿಯ ತಿರುವಿನ (ಕರ್ವೆಚರ್) ಭಾಗದ ನಯನಮನೋಹರ ದೃಶ್ಯವನ್ನು ಕಂಡು ಪುಳಕಗೊಂಡರು.

    ಮಾನವ ಸಹಿತ 4ನೇ ಹಾರಾಟ: ಭೂಮಿಯ ವಾತಾವರಣದಾಚೆ ತೆರಳುವ ಯೋಜನೆಯ ನಾಲ್ಕನೇ ಮಾನವಸಹಿತ ಪಯಣ ಇದಾಗಿದೆ. ಬಾಹ್ಯಾಕಾಶದ ಅಂಚಿಗೆ ತೆರಳಿದ ಪ್ರಪ್ರಥಮ ಸಂಪೂರ್ಣ ಮಾನವಸಹಿತ ಯಾನವೂ ಇದಾಗಿದೆ.

    ನವಯುಗಕ್ಕೆ ಮುನ್ನುಡಿ: ಈ ಹಾರಾಟ ಬಾಹ್ಯಾಕಾಶ ಪ್ರವಾಸೋ ದ್ಯಮದಲ್ಲಿ ನವ ಯುಗವೊಂದಕ್ಕೆ ಮುನ್ನುಡಿಯಾಗಲಿದೆ ಎಂದು ಬ್ರಾನ್ಸನ್ ವರ್ಣಿಸಿದ್ದಾರೆ. ಅವರು ಸ್ಥಾಪಿಸಿದ ಕಂಪನಿ, ಮುಂದಿನ ವರ್ಷ ವಾಣಿಜ್ಯಿಕ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ರಾಕೆಟ್ ಏರಲು ಬ್ರಾನ್ಸನ್ ತಮ್ಮ ಬೈಕ್​ನಲ್ಲಿ ಆಗಮಿಸಿದ್ದರು.

    ಯುಗಳ ಸ್ಪರ್ಧೆ: ಬ್ರಾನ್ಸನ್ ಮತ್ತು ಜೆಫ್ ಬಿಜೋಸ್ ನಡುವಿನ ಸ್ಪರ್ಧೆ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿದೆ. ತಾವೇ ಪ್ರಥಮ ಬಾಹ್ಯಾಕಾಶ ಪ್ರಯಾಣಿಕರಗಬೇಕೆಂಬುದು ಜೆಫ್ ಬಿಜೋಸ್ ಕನಸಾಗಿತ್ತು. ಆದರೆ, ಅವರ ಮೇಲೆ ಸ್ಪರ್ಧೆಗಿಳಿದ ಬ್ರಾನ್ಸನ್ ತಮ್ಮ ಗುರಿಯನ್ನು ತಲುಪಿದರು. ಯೂನಿಟಿ-22 ಗಗಗನೌಕೆ ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಅವಳಿ ಫ್ಯೂಸ್ಲೇಜ್ ಕ್ಯಾರಿಯರ್ ಜೆಟ್​ನಿಂದ ತಳ್ಳಲ್ಪಟ್ಟು ಮೇಲ್ಮುಖವಾಗಿ ಚಿಮ್ಮಿತು. ಜೆಟ್​ಗೆ ವಿಎಂಎಸ್ ಈವ್ (ರಿಚರ್ಡ್ ತಾಯಿ) ಹೆಸರಿಡಲಾಗಿದೆ.

    ಭಾರತ ಪ್ರವಾಸ ವೇಳೆ ಸುಳಿವು ನೀಡಿದ್ದ ಬ್ರಾನ್ಸನ್: ರಿಚರ್ಡ್ 2019ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗಲೇ ತಮ್ಮ ಗಗನಯಾನ ಯೋಜನೆಯ ಸುಳಿವು ನೀಡಿದ್ದರು.

    ಗುಂಟೂರಿನಿಂದ ಗಗನದವರೆಗೆ: ಏರೋನಾಟಿಕಲ್ ಇಂಜಿನಿಯರ್ ಆಗಿರುವ ಭಾರತೀಯ ಮೂಲದ ಸಿರೀಷಾ ಬಂಡ್ಲಾ, ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಮೂಲದ 3ನೇ ಮಹಿಳೆೆ. ಬಂಡ್ಲಾ ಆಂಧ್ರಪ್ರದೇಶದ ಗುಂಟೂರಿನವರು. ಬಾಹ್ಯಾಕಾಶ ಉದ್ಯಮದ ಅಧಿಕಾರಿಗಳು, ಭಾವಿ ಗ್ರಾಹಕರು ಅಂದರೆ ಬಾಹ್ಯಾಕಾಶ ಪಯಣಿಗರು ಮತ್ತು ಹಿತೈಷಿಗಳು ಉಡಾವಣಾ ನೆಲೆಯಲ್ಲಿ ನೆರೆದು ಬಾಹ್ಯಾಕಾಶ ಪ್ರವಾಸಿಗಳನ್ನು ಸಂಭ್ರಮದಿಂದ ಬೀಳ್ಕೊಟ್ಟರು.

    • ಇದು ಸ್ಪೇಸ್​ಶಿಪ್ ಟು ವ್ಯವಸ್ಥೆಯ 22ನೇ ಪ್ರಯೋಗಾರ್ಥ ಹಾರಾಟವಾಗಿದೆ. ಇದರ ಹಾರಾಟದಿಂದ ತನ್ನ ನೂತನ ಬಾಹ್ಯಾಕಾಶ ಪ್ರವಾಸೋದ್ಯಮ ಉದ್ಯಮಕ್ಕೆ ಚಾಲನೆ ಸಿಗಬಹುದೆಂಬುದು ಬ್ರಿಟನ್​ನ ಆಶಯವಾಗಿದೆ.
    • ಹವಾಮಾನ ವೈಪರೀತ್ಯದಿಂದ ಪ್ರಯಾಣದ ಮುಹೂರ್ತ 90 ನಿಮಿಷ ವಿಳಂಬವಾಗಿತ್ತು.
    • ಸ್ಪೇಸ್ ಪೋರ್ಟ್ ನೆಲೆಯಿಂದ ಮೌಂಟೇನ್ ಟೈಮ್ ಬೆಳಗ್ಗೆ 8.40ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.10) ನೌಕೆ ಟೇಕ್​ಆಫ್ ಆಯಿತು.
    • 90 ನಿಮಿಷ ಪಯಣ: ಅಂತರಿಕ್ಷದಲ್ಲಿ ಒಟ್ಟು 90 ನಿಮಿಷ ವಿಹರಿಸಿ ವಿಎಸ್​ಎಸ್ ಯುನಿಟಿ ಭೂಮಿಗೆ ವಾಪಸಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts