More

    ರಸ್ತೆ ದುರಸ್ತಿ ಒತ್ತಾಯಿಸಿ ಚುನಾವಣೆ ಬಹಿಷ್ಕಾರ: ಸ್ಥಳೀಯರಿಂದ ಬ್ಯಾನರ್ ಅಳವಡಿಕೆ

    ಗುರುಪುರ: ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಕಿಲೆಂಜಾರು ಅರಮನೆಯಿಂದ ಕಾಪಿಕಾಡುವರೆಗಿನ ಅರಮನೆ ಬಂಡಿ ರಸ್ತೆ ನಾದುರಸ್ತಿ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸ್ಥಳೀಯ ನಾಗರಿಕರು ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದು, ಕಿಲೆಂಜಾರು ಅರಮನೆ ಬಳಿ ಬ್ಯಾನರ್ ಅಳವಡಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರು ಅಳವಡಿಸಲಾಗಿತ್ತು. ಕಳಪೆ ಕಾಮಗಾರಿ ಫಲವಾಗಿ ಡಾಂಬರು ಒಂದೆರಡು ತಿಂಗಳಲ್ಲೇ ಎದ್ದು ಹೋಗಿದ್ದು, ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿವೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಕಷ್ಟಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರ ತೆಗೆದುಕೊಂಡಿರುವ ಸ್ಥಳೀಯ ನಾಗರಿಕರು, ಪಂಚಾಯಿತಿಗೆ ಸಾರ್ವಜನಿಕರ ಸಹಿ ಇರುವ ಮನವಿ ಸಲ್ಲಿಸಿದ್ದಾರೆ.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಕೊಳವೆ ಅಳವಡಿಸುವ ಸಂದರ್ಭ ರಸ್ತೆಯ ಅಲ್ಲಲ್ಲಿ ಅಗೆಯಲಾಗಿದೆ. ಇದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಮಣ್ಣು ಕೊರೆಯಲಾದ ಜಾಗದಲ್ಲಿ ಹೊಂಡಗಳ ಸಹಿತ ತೋಡುಗಳು ಸೃಷ್ಟಿಯಾಗಿವೆ. ಇಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ. ಈಗಾಗಲೇ ಕೆಲವು ಸಣ್ಣಪುಟ್ಟ ವಾಹನ ಅಪಘಾತಗಳು ಸಂಭವಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೊಡ್ಡ ಮಟ್ಟದ ಅಪಾಯ ತಪ್ಪಿದ್ದಲ್ಲ ಎಂದು ನಾಗರಿಕರು ಭೀತಿ ವ್ಯಕ್ತಪಡಿಸಿದ್ದಾರೆ.

    ಚುನಾವಣೆ ಬಹಿಷ್ಕರಿಸಿ ಕಿಲೆಂಜಾರು ಪ್ರದೇಶದಲ್ಲಿ ಬ್ಯಾನರ್ ಅಳವಡಿಸಲಾದ ಸಂಗತಿ ಈಗಷ್ಟೇ ಗಮನಕ್ಕೆ ಬಂದಿದೆ. ಗ್ರಾಮಸ್ಥರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

    -ಸವಿತಾ ಮಂದೋಳಿಕರ್
    ಅಭಿವೃದ್ಧಿ ಅಧಿಕಾರಿ ಕುಪ್ಪೆಪದವು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts