More

    545 ಪಿಎಸ್​ಐ ನೇಮಕಾತಿ ಅಕ್ರಮ; ಆಯ್ಕೆಯಾದ ಎಲ್ಲ ಅಭ್ಯರ್ಥಿಗಳ ತನಿಖೆ: ಡಿಜಿಪಿ ಪ್ರವೀಣ್ ಸೂದ್

    ಬೆಂಗಳೂರು: ರಾಜ್ಯದಲ್ಲಿ ಬಾರಿ ಸದ್ದು ಮಾಡಿರುವ 545 ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯ ಪೂರ್ವಾಪರ ಪರಿಶೀಲನೆ ನಡೆಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ.

    545 ಎಸ್‌ಐ ನೇಮಕಾತಿಯಲ್ಲಿ ಅಕ್ರಮ ಸಂಬಂಧ ಸಿಐಡಿ ತನಿಖೆ ಕುರಿತು ಭಾನುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 545 ಎಸ್‌ಐ ನೇಮಕಾತಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇರುವ ಪ್ರತಿಯೊಬ್ಬ ಅಭ್ಯರ್ಥಿಯ ಪೂರ್ವಾಪರ ಪರಿಶೀಲನೆ ನಡೆಸಲಾಗುತ್ತದೆ. ಈ ಅಕ್ರಮದಲ್ಲಿ ತೊಡಗಿರುವ ಸರ್ಕಾರಿ ನೌಕರರ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಅಭ್ಯರ್ಥಿ ಮತ್ತು ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನೈಜ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಭರವಸೆ ನೀಡಿದ್ದಾರೆ.

    2021ರ ಅಕ್ಟೋಬರ್ 3ರಂದು ನಡೆದ 545 ಎಸ್‌ಐ ನೇಮಕಾತಿಗೆ ರಾಜ್ಯದಲ್ಲಿ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದೆ. ಲಿಖಿತ ಪರೀಕ್ಷೆ ಬಳಿಕ ಅಕ್ರಮ ನಡೆದಿರುವ ಕುರಿತು ದೂರುಗಳು ಬಂದಿವೆ. ಈ ಕುರಿತು ಆಂತರಿಕ ತನಿಖೆ ನಡೆಸಲಾಗಿದೆ.

    ಇದರ ನಡುವೆ ಅಕ್ರಮ ನಡೆದಿರುವ ಕುರಿತು ಏಪ್ರಿಲ್ 7ರಂದು ಸಿಕ್ಕ ಖಚಿತ ಮಾಹಿತಿ ಮೇರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಕುರಿತು ಸಿಐಡಿ ತನಿಖೆಗೆ ಆದೇಶಿಸಿದರು. ಈ ಆಧಾರದ ಮೇಲೆ ಏ.9ರಂದು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ನಾಲ್ವರು ಅಭ್ಯರ್ಥಿಗಳು ಮತ್ತು ಮೂವರನ್ನು ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತ್ತು ಸರ್ಕಾರಿ ನೌಕರರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಸಿಐಡಿ ಕಾರ್ಯಾಚರಣೆ ಮುಂದುವರಿಸಿದೆ.

    ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವರು ಪ್ರತಿಯೊಬ್ಬ ಅಭ್ಯರ್ಥಿಯ ಪೂರ್ವಾಪರ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಈ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಂಡು ಸಿಐಡಿ ಅಂತಿಮ ವರದಿ ನೀಡುವವರೆಗೂ 545 ಎಸ್‌ಐ ನೇಮಕಾತಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನೈಜ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

    ಸದ್ಯಕ್ಕಿಲ್ಲ 402 ಎಸ್‌ಐ ನೇಮಕಾತಿ: ದೇಹದಾರ್ಢ್ಯ ಪರೀಕ್ಷೆ ಮುಗಿಸಿ ಲಿಖಿತ ಪರೀಕ್ಷೆಗೆ ಕಾಯುತ್ತಿರುವ 402 ಎಸ್‌ಐ ಹುದ್ದೆಗಳ ನೇಮಕಾತಿ ಸದ್ಯಕ್ಕೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. 545 ಎಸ್‌ಐ ನೇಮಕಾತಿ ಅಕ್ರಮ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ಆ ತನಿಖೆ ಪೂರ್ಣಗೊಂಡ ಮೇಲೆಯೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

    ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾಯ್ತು 90 ಜನರಿದ್ದ ಬಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts