More

    ಅಕ್ಷರ್ ಪಟೇಲ್ ಚಚ್ಚಿದ್ದು ಜಡೇಜಾಗೆ, ಸೇಡು ತೀರಿಸಿದ್ದು ಧೋನಿ ವಿರುದ್ಧ!

    ಶಾರ್ಜಾ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ಆರಂಭಿಕ ಶಿಖರ್ ಧವನ್ ಭರ್ಜರಿ ಶತಕ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ತಂದರು. ಆದರೆ ಡೆಲ್ಲಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಕೊನೇ ಓವರ್‌ನಲ್ಲಿ ಸ್ಫೋಟಕ ಆಟವಾಡಿದ ಆಲ್ರೌಂಡರ್ ಅಕ್ಷರ್ ಪಟೇಲ್. ಅವರು 3 ಸಿಕ್ಸರ್ ಸಿಡಿಸುವ ಮೂಲಕ ರವೀಂದ್ರ ಜಡೇಜಾ ಅವರನ್ನು ದಂಡಿಸಿದ್ದಾದರೂ, ಅವರು ಸೇಡು ತೀರಿಸಿಕೊಂಡಿರುವುದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ವಿರುದ್ಧ ಎಂಬುದು ಗಮನಾರ್ಹ.

    180 ರನ್ ಸವಾಲು ಪಡೆದ ಡೆಲ್ಲಿ ತಂಡ ಪೃಥ್ವಿ ಷಾ (0), ಅಜಿಂಕ್ಯ ರಹಾನೆ (8) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದ್ದರೂ, ಶಿಖರ್ ಧವನ್ (101*ರನ್, 58 ಎಸೆತ, 14 ಬೌಂಡರಿ, 1 ಸಿಕ್ಸರ್) ಟಿ20 ಕ್ರಿಕೆಟ್‌ನಲ್ಲಿ ದಾಖಲಿಸಿದ ಚೊಚ್ಚಲ ಶತಕದ ನೆರವಿನಿಂದ ಗೆಲುವಿನತ್ತ ಮುನ್ನಡೆಯಿತು. ನಾಯಕ ಶ್ರೇಯಸ್ ಅಯ್ಯರ್ (23) ಮತ್ತು ಸ್ಟೋಯಿನಿಸ್ (24) ಧವನ್‌ಗೆ ಬೆಂಬಲ ಒದಗಿಸಿದರು. ಆದರೂ ಕೊನೇ ಓವರ್‌ನಲ್ಲಿ 17 ರನ್ ಗಳಿಸುವ ಕಠಿಣ ಸವಾಲು ಎದುರಾಗಿತ್ತು. ಜಡೇಜಾರ ಮೊದಲ ಎಸೆತ ವೈಡ್ ಆಗಿದ್ದರೆ, ಬಳಿಕ ಧವನ್ 1 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಅಕ್ಷರ್ ನಂತರ 4 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 20 ರನ್ ಸಿಡಿಸಿ ಡೆಲ್ಲಿಗೆ ಗೆಲುವು ತಂದರು.

    2016ರಲ್ಲಿ ಅಕ್ಷರ್ ಪಟೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದಾಗ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಕೊನೇ ಓವರ್‌ನಲ್ಲಿ 23 ರನ್ ಅಗತ್ಯವಿತ್ತು. ಆಗ ಅಕ್ಷರ್ ಪಟೇಲ್ ಎಸೆದಿದ್ದ ಕೊನೇ ಓವರ್‌ನಲ್ಲಿ ಆಗ ಪುಣೆ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದ ಧೋನಿ 3 ಸಿಕ್ಸರ್ ಸಹಿತ 22 ರನ್ ಸಿಡಿಸಿದ್ದರು. ಅಕ್ಷರ್ 1 ರನ್ ವೈಡ್ ಮೂಲಕ ಬಿಟ್ಟುಕೊಟ್ಟಿದ್ದರು. ಆಗ ಎದುರಿಸಿದ್ದ ನೋವಿಗೆ ಈಗ ಅಕ್ಷರ್ ಪಟೇಲ್, ಧೋನಿ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಸೇಡು ತೀರಿಸಿಕೊಂಡಂತಾಗಿದೆ.

    ವೇಗದ ಬೌಲಿಂಗ್ ಆಲ್ರೌಂಡರ್ ಡ್ವೇನ್ ಬ್ರಾವೊ ಗಾಯಗೊಂಡು ಹೊರನಡೆದಿದ್ದ ಕಾರಣ ಕೊನೇ ಓವರ್ ಎಸೆಯುವುದಿಲ್ಲ ಎಂದು ಗೊತ್ತಿತ್ತು. ಹೀಗಾಗಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೊನೇ ಓವರ್ ಎಸೆಯುವುದನ್ನು ನಿರೀಕ್ಷಿಸಿದ್ದೆವು. ಕ್ರೀಸ್‌ನಲ್ಲಿ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳೇ ಇದ್ದುದರಿಂದ ಜಡೇಜಾ ಬೌಲಿಂಗ್‌ನಿಂದ ಲಾಭ ಪಡೆದುಕೊಂಡೆವು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶತಕವೀರ ಶಿಖರ್ ಧವನ್, ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ರೋಚಕ ಗೆಲುವಿನ ಬಳಿಕ ತಿಳಿಸಿದರು.

    ಅಕ್ಷರ್ ಪಟೇಲ್ ಕೂಡ ಡೆಲ್ಲಿ ತಂಡದ ಆಸ್ತಿ ಎಂದು ಪ್ರಶಂಸಿಸಿದ ಧವನ್, ನಿಯಂತ್ರಿತ ಬೌಲಿಂಗ್ ಪ್ರದರ್ಶಿಸುವ ಅಕ್ಷರ್ ಅವರಂಥ ಆಲ್ರೌಂಡರ್‌ಗಳು ದೊಡ್ಡ ವ್ಯತ್ಯಾಸ ತರುತ್ತಾರೆ ಎಂದರು. ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ ಯಶಸ್ವಿ ಚೇಸಿಂಗ್ ವೇಳೆ ಕೊನೇ ಓವರ್‌ನಲ್ಲಿ 2ನೇ ಅತ್ಯಧಿಕ ರನ್ ಬಾರಿಸಿದರು. ಧೋನಿ ಮತ್ತು ರೋಹಿತ್ ಶರ್ಮ ತಲಾ 22 ರನ್ ಬಾರಿಸಿರುವುದು ದಾಖಲೆಯಾಗಿದೆ.

    ಡೆಲ್ಲಿಗೆ ಕೊನೇ 2 ಓವರ್‌ಗಳಲ್ಲಿ 21 ರನ್ ಬೇಕಾಗಿದ್ದಾಗ ಸ್ಯಾಮ್ ಕರ‌್ರನ್ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟರು. ‘ಬ್ರಾವೊ ಗಾಯಗೊಂಡಿದ್ದ ಕಾರಣ ನನ್ನ ಮುಂದೆ ಜಡೇಜಾ ಮತ್ತು ಕರ್ಣ್ ಶರ್ಮಗೆ ಬೌಲಿಂಗ್ ನೀಡುವ ಆಯ್ಕೆಯಷ್ಟೇ ಇತ್ತು. ನಾನು ಜಡೇಜಾರನ್ನು ಆರಿಸಿಕೊಂಡೆ’ ಎಂದು ಧೋನಿ ಕೂಡ ಪಂದ್ಯದ ಬಳಿಕ ತಿಳಿಸಿದರು.

    ಶಿಖರ್ ಧವನ್ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಲು ಅತಿ ಹೆಚ್ಚು ಇನಿಂಗ್ಸ್ (167) ಕಾಯಬೇಕಾಯಿತು. ವಿರಾಟ್ ಕೊಹ್ಲಿ 120ನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದು ಹಿಂದಿನ ಸುದೀರ್ಘ ಅವಧಿ. ಶ್ರೇಯಸ್ ಅಯ್ಯರ್ ಡೆಲ್ಲಿ ಪರ 2 ಸಾವಿರ ರನ್ ಬಾರಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿದರು. ವೀರೇಂದ್ರ ಸೆಹ್ವಾಗ್ ಮೊದಲಿಗರು.

    ಶಿಖರ್ ಧವನ್ ಡೆಲ್ಲಿ ಪರ ಶತಕ ಸಿಡಿಸಿದ 9ನೇ ಬ್ಯಾಟ್ಸ್‌ಮನ್ ಎನಿಸಿದರು. ಶಿಖರ್ ಧವನ್ ಐಪಿಎಲ್‌ನಲ್ಲಿ 13 ವರ್ಷ, 168 ಪಂದ್ಯ, 4900 ರನ್ ಮತ್ತು 39 ಅರ್ಧಶತಕಗಳ ಬಳಿಕ ಚೊಚ್ಚಲ ಶತಕದ ಸವಿ ಕಂಡರು.

    ಅರುಣ್ ಜೇಟ್ಲಿ ಪುತ್ರ ರೋಹನ್ ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts