More

    ಸಿನಿಸ್ಟಾರ್‌ಗಳ ರಾಜ‘ಕಾರಣ’: ಜನಪ್ರಿಯತೆಯೇ ಬಂಡವಾಳ!

    ಸಿನಿಮಾ ನಟ-ನಟಿಯರಿಗೆ ಪರ್ಯಾಯ ವೃತ್ತಿ ಅಂತ ಇದ್ದರೆ ಅದು ರಾಜಕೀಯ ಎಂಬಂತಾಗಿಬಿಟ್ಟಿದೆ. ಅದಕ್ಕೆ ಉದಾಹರಣೆಯಾಗಿ, ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನೂರಾರು ಸಿನಿಸೆಲೆಬ್ರಿಟಿಗಳು ಸಿಗುತ್ತಾರೆ. ಇಷ್ಟಕ್ಕೂ ಕೆಲವು ಸಿನಿಮಾದವರಿಗೆ ರಾಜಕೀಯ ಅನಿವಾರ್ಯವೇಕೆ? ಆ ‘ರಾಜ’ಕಾರಣಕ್ಕೆ ಕಾರಣ ಇಲ್ಲಿದೆ.

    – ಚೇತನ್ ನಾಡಿಗೇರ್

    ರಾಜಕೀಯ ಎನ್ನುವುದು ಒಂದು ಪರ್ಯಾಯ ವೃತ್ತಿ ಎಂಬ ಮಾತಿದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳುವುದು ಕಷ್ಟವಾದರೂ, ಸಿನಿಮಾದವರಿಗೆ, ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ, ಒಟ್ಟಾರೆಯಾಗಿ ಸೆಲೆಬ್ರಿಟಿ ಸ್ಟೇಟಸ್ ಸಿಕ್ಕವರಿಗೆ ರಾಜಕೀಯ ಎನ್ನುವುದು ಒಂದು ಪರ್ಯಾಯ ವೃತ್ತಿಯಾಗಿಬಿಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಕಾರಣ, ಸಿನಿಮಾ ಕ್ಷೇತ್ರದ ಸಾಕಷ್ಟು ಸೆಲೆಬ್ರಿಟಿಗಳು ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು. ಸಿನಿಮಾ ಮತ್ತು ರಾಜಕೀಯ ರಂಗದ ನಡುವಿನ ನಂಟು ಇಂದು ನಿನ್ನೆಯದಲ್ಲ.

    ಈಗ ಮತ್ತೆ ಚುನಾವಣೆಗಳು ಹತ್ತಿರ ಬರುತ್ತಿವೆ. ಈ ವರ್ಷ ರಾಜ್ಯದಲ್ಲಿ, ಮುಂದಿನ ವರ್ಷ ಕೇಂದ್ರದಲ್ಲಿ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಜಿಗಿಯುವ ಸಿನಿಮಾ ಸೆಲೆಬ್ರಿಟಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತದೆ. ಯಾವುದೋ ಒಂದು ರಾಜಕೀಯ ಪಕ್ಷ ಸೇರುವುದರಿಂದ ಹಿಡಿದು ಚುನಾವಣೆಗೆ ಸ್ಪರ್ಧಿಸುವವರೆಗೂ ಹಲವು ನಟ-ನಟಿಯರು ಸುದ್ದಿಯಲ್ಲಿರುತ್ತಾರೆ. ಇದು ಹೊಸ ಸಂಪ್ರದಾಯವೇನಲ್ಲ. ಹಲವು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ಈಗಲೂ ಮುಂದುವರೆದಿದೆ. ಮುಂದೆಯೂ ಇರಲಿದೆ.

    ಇಷ್ಟಕ್ಕೂ ಸಿನಿಮಾ ತಾರೆಯರಿಗೆ ರಾಜಕೀಯದಲ್ಲಿ ಅಷ್ಟೊಂದು ಡಿಮ್ಯಾಂಡ್ ಯಾಕೆ? ಸಿನಿಮಾ ನಟ-ನಟಿಯರು ಸಹ ರಾಜಕೀಯವನ್ನು ಒಂದು ಪರ್ಯಾಯ ಕರಿಯರ್ ಆಗಿ ಪರಿಗಣಿಸುವುದೇಕೆ? ರಾಜಕೀಯಕ್ಕೂ ಸಿನಿಮಾ ಮಂದಿ ಅನಿವಾರ್ಯವಾಗುವುದೇಕೆ? ಸಿನಿಮಾದಲ್ಲಿ ಯಶಸ್ವಿಯಾದಂತೆ ರಾಜಕೀಯದಲ್ಲೂ ನಟ-ನಟಿಯರು ಯಶಸ್ವಿಯಾಗುವುದಕ್ಕೆ ಸಾಧ್ಯವಾ? ಇಂಥ ಹಲವು ಪ್ರಶ್ನೆಗಳು ಕಾಡುವುದು ಸಹಜ.

    ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ಮುಗಿಸಿದರು ರಕ್ಷಿತ್​ ಶೆಟ್ಟಿ

    ರಾಜಕೀಯದ ಮೂಲಕ ಸಮಾಜ ಸೇವೆ:
    ಮೊದಲಿಗೆ, ಒಂದು ವಿಷಯವನ್ನು ಹೇಳಬೇಕು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಸಮಾಜ ಸೇವೆ ಮಾಡಬೇಕು, ನಾಲ್ಕು ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು ಎಂಬ ಆಸೆ ಮೊಳಕೆ ಒಡೆಯುತ್ತದೆ. ಸಿನಿಮಾ ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿರುತ್ತದೆ. ಅವರನ್ನು ಪ್ರೀತಿಸುವ, ಆರಾಧಿಸುವ ಜನರಿರುತ್ತಾರೆ. ಹಾಗಾಗಿ, ಅಂಥವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಹಲವರಿಗಿರುತ್ತದೆ. ಆದರೆ, ರಾಜಕೀಯ ಸೇರದೆ, ಯಾವುದೇ ರಾಜಕೀಯ ಪಕ್ಷದ ಭಾಗವಾಗದೆ ಸಮಾಜ ಸೇವೆ ಮಾಡುವುದು ಅಷ್ಟು ಸುಲಭವಲ್ಲ ಎಂಬ ಭಾವನೆ ಅವರದು. ಯಾವುದಾದರೂ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡರೆ, ಕೆಲಸಗಳು ಸುಲಭವಾಗುತ್ತವೆ. ಹಾಗಾಗಿ, ಸಿನಿಮಾ ನಟ-ನಟಿಯರಿಗೆ ರಾಜಕೀಯ ಸೇರುವುದು ಅನಿವಾರ್ಯವಾಗುತ್ತದೆ.

    ಜನಪ್ರಿಯತೆ ಜತೆಗೆ ಪವರ್ ಸಹ ಬೇಕು:
    ಇಲ್ಲಿ ಇನ್ನೂ ಒಂದು ವಿಷಯವಿದೆ. ಪ್ರಮುಖವಾಗಿ, ಸಿನಿಮಾ ಸೆಲೆಬ್ರಿಟಿಗಳಿಗೆ ಸಾಕಷ್ಟು ಜನಪ್ರಿಯತೆ ಇರುತ್ತದೆ. ಆದರೆ, ರಾಜಕೀಯ ಅಥವಾ ಸಮಾಜಸೇವೆ ಮಾಡುವುದಕ್ಕೆ ಬರೀ ಜನಪ್ರಿಯತೆ ಮಾತ್ರ ಸಾಲದು. ಜನಪ್ರಿಯತೆ ಜತೆಗೆ ಪವರ್ ಅಥವಾ ಅಧಿಕಾರ ಸಹ ಬಹಳ ಮುಖ್ಯ. ಸರ್ಕಾರದ ಹಂತದಲ್ಲಿ ಸಾಕಷ್ಟು ಇಲಾಖೆಗಳು ಇರುತ್ತವೆ. ಹಲವು ಅನುಮತಿಗಳು ಬೇಕಾಗುತ್ತವೆ. ಜನಪ್ರಿಯತೆ ಇದೆ ಎಂದ ಮಾತ್ರಕ್ಕೆ ಅವೆಲ್ಲವೂ ಕಾರ್ಯರೂಪಕ್ಕೆ ಬರುವುದಿಲ್ಲ. ಅದಕ್ಕೆ ಅಧಿಕಾರ ಬೇಕು. ಆ ಅಧಿಕಾರ ರಾಜಕೀಯದಲ್ಲಿ ಗುರುತಿಸಿಕೊಂಡರೆ ಮಾತ್ರ ಸಿಗುವುದಕ್ಕೆ ಸಾಧ್ಯ. ಸಾಮಾನ್ಯವಾಗಿ, ಎಲ್ಲ ಸೆಲೆಬ್ರಿಟಿಗಳಿಗೂ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಜತೆಗೆ ನಂಟು, ಒಡನಾಟವಿರುತ್ತದೆ. ಆದರೆ, ಪರಿಚಯ ಇದೆ ಅಥವಾ ವಶೀಲಿ ಇದೆ ಎಂದ ಮಾತ್ರಕ್ಕೆ ಅಧಿಕಾರ ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸ್ವತಃ ತಾವೇ ಅಧಿಕಾರವನ್ನು ಪಡೆಯಬೇಕಾಗುತ್ತದೆ.

    ಸುಸ್ತಾದಾಗ ರಾಜಕೀಯದತ್ತ:
    ಇನ್ನು, ಬಹಳಷ್ಟು ಸೆಲೆಬ್ರಿಟಿಗಳಿಗೆ ಒಂದಲ್ಲ ಒಂದು ಹಂತದಲ್ಲಿ ಚಿತ್ರರಂಗದಲ್ಲಿ ಏಕತಾನತೆ ಕಾಡತೊಡಗುತ್ತದೆ. ಒಂದೇ ತರಹದ ಪಾತ್ರಗಳನ್ನು ಮಾಡಿಯೋ, ದಿನ ಬೆಳಗಾದರೆ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿಯೋ ಸುಸ್ತಾಗಿರುತ್ತದೆ. ಅವರು ಪರ್ಯಾಯವಾಗಿ ಏನಾದರೂ ಮಾಡಬೇಕೆಂಬ ಹಪಾಹಪಿಯಲ್ಲಿರುತ್ತಾರೆ. ಒಂದು ಹಂತಕ್ಕೆ ಬೆಳೆದ ಮೇಲೆ ಅವರಿಗೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಸಿನಿಮಾದವರಿಗೆ ಆಯ್ಕೆಗಳು ಇನ್ನೂ ಕಡಿಮೆಯೇ. ರಾಜಕೀಯಕ್ಕೆ ಹೋಗಬೇಕು, ಇಲ್ಲವಾದರೆ ಬಿಜಿನೆಸ್‌ನಲ್ಲಿ ತೊಡಗಿಸಿಕೊಳ್ಳಬೇಕು. ಸಿನಿಮಾದಲ್ಲಿರುವಾಗ ಸೆಲೆಬ್ರಿಟಿಗಳನ್ನು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಸದಾ ಸುತ್ತುವರೆದಿರುತ್ತಾರೆ. ಸಿನಿಮಾದಲ್ಲಿ ಸದಾ ಜನರ ಸಂಪರ್ಕ ಮತ್ತು ಒಡನಾಟವಿರುತ್ತದೆ. ಅದೇ ತರಹದ ಸಂಪರ್ಕ ಮತ್ತು ಒಡನಾಟವಿರುವ ಇನ್ನೊಂದು ಕ್ಷೇತ್ರವೆಂದರೆ ಅದು ರಾಜಕೀಯ ಮಾತ್ರ. ಬಿಜಿನೆಸ್‌ನಲ್ಲಿ ಅಂತಹ ಸಾಧ್ಯತೆಗಳು ಬಹಳ ಕಡಿಮೆಯೆಂದೇ ಹೇಳಬಹುದು. ಹಾಗಾಗಿ, ಬಹಳಷ್ಟು ಸೆಲೆಬ್ರಿಟಿಗಳು ಒಂದು ಹಂತದಲ್ಲಿ ಕ್ರಮೇಣ ರಾಜಕೀಯವನ್ನು ಪರ್ಯಾಯ ವೃತ್ತಿಯನ್ನಾಗಿ ತೆಗೆದುಕೊಳ್ಳುತ್ತಾರೆ. ಬರೀ ಏಕತಾನತೆಯಿಂದ ಬಳಲುವವರು ಮಾತ್ರವಲ್ಲ, ಚಿತ್ರರಂಗದ ವೃತ್ತಿ ಅಂಚಿಗೆ ಬಂದಾಗ, ಹೆಚ್ಚು ಕೆಲಸಗಳು ಸಿಗದಿದ್ದಾಗ ಸಹಜವಾಗಿಯೇ ರಾಜಕೀಯ ಸುಲಭದ ಆಯ್ಕೆಯಾಗುತ್ತದೆ.

    ಇದನ್ನೂ ಓದಿ: ‘ಜವಾನ್​’ ಜತೆಗೆ ಸಂಜಯ್​ ದತ್​; ಶಾರುಖ್​ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟನೆ

    ಜನಪ್ರಿಯತೆ ಎನ್‌ಕ್ಯಾಶ್ ಮಾಡಿಕೊಳ್ಳುವ ತಂತ್ರ:
    ಒಬ್ಬ ಸೆಲೆಬ್ರಿಟಿ ರಾಜಕೀಯಕ್ಕೆ ಬರುವುದು ಬರೀ ಆತನ ಅಥವಾ ಆಕೆಯ ಇಷ್ಟವಾಗಿರುವುದಿಲ್ಲ. ಇದರಲ್ಲಿ ರಾಜಕೀಯ ಪಕ್ಷದ ಒತ್ತಾಸೆ, ಒತ್ತಡ ಮತ್ತು ಕಾರ್ಯತಂತ್ರವೂ ಇರುತ್ತದೆ. ಯಾವುದೇ ಪಕ್ಷವಾಗಲಿ ಒಂದು ಜಾತಿ, ಸಮುದಾಯ ಅಥವಾ ಒಂದು ವರ್ಗದವರನ್ನು ಸೆಳೆಯುವುದಕ್ಕೆ ಸೂಕ್ತವಾದ ಮುಖಗಳನ್ನು ಹುಡುಕುತ್ತಿರುತ್ತವೆ. ಈ ನಿಟ್ಟಿನಲ್ಲಿ ಸಿನಿಮಾದವರು ಮತ್ತು ಕ್ರೀಡಾಪಟುಗಳಿಗೆ ಮೊದಲ ಪ್ರಾಶಸ್ತ್ಯ. ಅದರಲ್ಲೂ ಸಿನಿಮಾದವರಿಗೆ ದೊಡ್ಡ ಅಭಿಮಾನಿ ವೃಂದವಿರುತ್ತದೆ. ಹಾಗಾಗಿ, ಆ ಸೆಲೆಬ್ರಿಟಿಗಳ ಪ್ರಾಬಲ್ಯ ಅಥವಾ ಅವರ ಜಾತಿ ಬಲ ಎಲ್ಲಿರುತ್ತದೋ, ಅಂತಹ ಕಡೆ ಸೆಲೆಬ್ರಿಟಿಗಳನ್ನು ಕಣಕ್ಕಿಳಿಸುವ ಮತ್ತು ಅವರ ಮೂಲಕ ಆ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ಕಾರ್ಯತಂತ್ರ ಹಲವು ಪಕ್ಷಗಳದ್ದಾಗಿರುತ್ತದೆ. ಹಾಗಾಗಿ, ಹಲವು ಪಕ್ಷಗಳು ಸೆಲೆಬ್ರಿಟಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡುತ್ತಿರುತ್ತವೆ. ಕಣಕ್ಕೆ ಇಳಿಯದಿದ್ದರೂ, ತಮ್ಮ ಪರವಾಗಿ ಪ್ರಚಾರ ಮಾಡಲಿ ಎಂಬ ಕಾರಣಕ್ಕೆ ರಾಜಕಾರಣಿಗಳು ಸಿನಿಮಾದವರ ನಂಟು ಬಯಸುತ್ತಾರೆ.

    ಬರೀ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದಲ್ಲಿ, ಹಲವು ರಾಜ್ಯಗಳಲ್ಲಿ ಆಯಾ ಭಾಷೆಯ ನಟ-ನಟಿಯರು ರಾಜಕೀಯದತ್ತ ಯಾವುದೋ ಒಂದು ಕಾರಣಕ್ಕೆ ಆಕರ್ಷಿತರಾಗಿ, ರಾಜಕಾರಣಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಸಿನಿಮಾದಲ್ಲಿ ಯಶಸ್ವಿಯಾದಂತೆ, ರಾಜಕೀಯದಲ್ಲೂ ಎಷ್ಟು ಜನ ಯಶಸ್ವಿಯಾಗಿದ್ದಾರೆ ಎಂದು ಹುಡುಕಹೊರಟರೆ ಉತ್ತರ ಸಿಗುವುದು ಬೆರಳಣಿಕೆಯಷ್ಟು. ಕೆಲವರು ಒಂದೋ ಎರಡೋ ಬಾರಿ ಶಾಸಕರೋ, ಸಂಸದರಾಗಿಯೋ ಆಯ್ಕೆಯಾಗಿದ್ದು ಬಿಟ್ಟರೆ, ಕೆಲವರು ಒಮ್ಮೆ, ಎರಡು ಬಾರಿ ಮಂತ್ರಿ ಪದವಿ ನೋಡಿದ್ದು ಬಿಟ್ಟರೆ, ಮಿಕ್ಕಂತೆ ಬಹಳಷ್ಟು ಜನ ರಾಜಕೀಯವನ್ನು ಒಂದು ವೃತ್ತಿಯಾಗಿ ಸ್ವೀಕರಿಸಿದ್ದು ಕಡಿಮೆಯೇ. ಒಂದು ಸೋಲಿನ ನಂತರ ರಾಜಕೀಯದಿಂದ ಮಾಯವಾದ ಹಲವರಿದ್ದಾರೆ. ಜವಾಬ್ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ದೂರಾದವರಿದ್ದಾರೆ. ರಾಜಕೀಯದಿಂದ ಭ್ರಮನಿರಸನಗೊಂಡು ಅದರ ಸಹವಾಸವೇ ಬೇಡ ಎಂದು ನಂಟು ಕಡಿದುಕೊಂಡವರೂ ಇದ್ದಾರೆ. ಕಾರಣಗಳೇನಾದರೂ ಇರಲಿ, ಒಟ್ಟಾರೆ ರಾಜಕಾರಣಿಗಳು ರಾಜಕಾರಣವನ್ನು ಗಂಭೀರವಾಗಿ ಸ್ವೀಕರಿಸಿದಂತೆ, ಸಿನಿಮಾದವರು ಗಂಭೀರವಾಗಿ ಸ್ವೀಕರಿಸಿದ್ದು ಕಡಿಮೆಯೇ. ಮುಂದಾದರೂ ಈ ಸ್ಥಿತಿ ಬದಲಾಗುತ್ತದಾ? ಅಥವಾ ರಾಜಕಾರಣವೆನ್ನುವುದು ಸಿನಿಮಾದವರಿಗೆ ಬರೀ ಇನ್ನೊಂದು ಆಯ್ಕೆಯಾಗಿ ಉಳಿದು ಬಿಡುತ್ತದಾ ಎಂಬುದನ್ನು ನೋಡಬೇಕು.

    ದೊಡ್ಡದಿದೆ ಸಿನಿ-ರಾಜಕಾರಣಿಗಳ ಪಟ್ಟಿ: ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಹಲವು ಸೆಲೆಬ್ರಿಟಿಗಳು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ಚುನಾವಣೆಗಳನ್ನು ಎದುರಿಸಿ ಮಂತ್ರಿ ಪದವಿಯನ್ನು ಅಲಂಕರಿಸಿದರೆ, ಇನ್ನೂ ಕೆಲವರು ಏನೂ ಆಗದೆಯೇ ಮಾಯವಾದ ಉದಾಹರಣೆಗಳೂ ಇವೆ. ಅನಂತ್ ನಾಗ್, ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಕುಮಾರ್ ಬಂಗಾರಪ್ಪ, ಬಿ.ಸಿ. ಪಾಟೀಲ್, ಶಶಿಕುಮಾರ್, ತಾರಾ, ಶ್ರುತಿ, ಮಾಳವಿಕಾ ಅವಿನಾಶ್, ಬಿ. ಜಯಶ್ರೀ, ಪ್ರಕಾಶ್ ರೈ, ರಮ್ಯಾ, ರಕ್ಷಿತಾ, ಪೂಜಾ ಗಾಂಧಿ, ಉಮಾಶ್ರೀ, ಡಾ. ಜಯಮಾಲಾ, ಉಪೇಂದ್ರ, ಸುಮಲತಾ, ಎಸ್. ನಾರಾಯಣ್, ಸಿ.ಪಿ. ಯೋಗೇಶ್ವರ್, ಜಯಂತಿ, ದ್ವಾರಕೀಶ್ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ರಾಜಕೀಯಕ್ಕೆ ಬಂದು ಹೋಗಿದ್ದಾರೆ. ಈ ಪೈಕಿ ಅನಂತ್ ನಾಗ್, ಅಂಬರೀಶ್, ಕುಮಾರ್ ಬಂಗಾರಪ್ಪ, ಬಿ.ಸಿ. ಪಾಟೀಲ್, ಡಾ. ಜಯಮಾಲಾ, ಉಮಾಶ್ರೀ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ: ಧನುಷ್​ ಜತೆ ಮೀನಾ ಮದುವೆಯಂತೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಮಿಳು ನಟ…

    ಖಾಯಂ ಮುಖ್ಯಮಂತ್ರಿ!: ಇಷ್ಟೆಲ್ಲಾ ನಟ-ನಟಿಯರ ನಡುವೆ ಅತಿ ಹೆಚ್ಚು ಕಾಲ ರಾಜಕೀಯದಲ್ಲಿ ಗುರುತಿಸಿಕೊಂಡವರೆಂದರೆ ಮುಖ್ಯಮಂತ್ರಿ ಚಂದ್ರು. ಮಿಕ್ಕವರೆಲ್ಲ ಯಾವುದೋ ಒಂದು ಕಾಲಘಟ್ಟದಲ್ಲಿ ಸಕ್ರಿಯರಾಗಿದ್ದರೆ, ಚಂದ್ರು ಕಳೆದ ಮೂರೂವರೆ ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನ ಶುರು ಮಾಡಿ, ನಂತರ ಬಿಜೆಪಿ, ಕಾಂಗ್ರೆಸ್‌ಗೆ ಸೇರಿ ಈಗ ಆಪ್‌ನಲ್ಲಿದ್ದಾರೆ. ಅವರು ಯಾವುದೇ ಪಕ್ಷದಲ್ಲಿರಲಿ ಅಥವಾ ಯಾವುದೇ ಹುದ್ದೆ ನಿರ್ವಹಿಸಲಿ, ಕರ್ನಾಟಕದ ಜನತೆಯ ಮಟ್ಟಿಗೆ ಅವರು ‘ಖಾಯಂ ಮುಖ್ಯಮಂತ್ರಿ’ಯಾಗಿದ್ದಾರೆ ಎಂದರೆ ತಪ್ಪಿಲ್ಲ.

    ಹಿಂದಿ, ತೆಲುಗು, ತಮಿಳಿನಲ್ಲಿ…: ಭಾರತದಲ್ಲಿ ಸುದೀರ್ಘ ರಾಜಕಾರಣ ಮಾಡಿದ ಸಿನಿಮಾದವರೆಂದರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ. 1960ರ ದಶಕದಲ್ಲಿ ರಾಜಕಾರಣಕ್ಕೆ ಬಂದ ಅವರು ಐದು ದಶಕಗಳ ಕಾಲ ರಾಜಕಾರಣ ಮಾಡಿದರು. ಆನಂತರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಹ ಮೂರು ದಶಕಗಳ ಕಾಲ ರಾಜಕಾರಣದಲ್ಲಿದ್ದರು. ಎನ್.ಟಿ.ಆರ್., ಎಂ.ಜಿ.ಆರ್ ಸಹ ಹಲವು ವರ್ಷಗಳ ಕಾಲ ರಾಜಕೀಯದಲ್ಲಿ ಇರುವುದರ ಜತೆಗೆ ದೊಡ್ಡ ಪದವಿಗೆ ಏರಿದರು.

    ಆದರೆ, ಹಿಂದಿ ಚಿತ್ರರಂಗದಲ್ಲಿ ಚಿತ್ರಣವೇ ಬೇರೆ. ಅಲ್ಲಿ ಬಹಳಷ್ಟು ಸಿನಿಮಾ ನಟ-ನಟಿಯರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ರಾಜ್ ಬಬ್ಬರ್, ಜಯಪ್ರದಾ ಹೊರತುಪಡಿಸಿದರೆ ಮಿಕ್ಕಂತೆ ಯಾರೂ ಸುದೀರ್ಘ ಸಮಯ ರಾಜಕೀಯದಲ್ಲಿರಲಿಲ್ಲ. ನರ್ಗಿಸ್ ದತ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ದೇವ್ ಆನಂದ್, ಧರ್ಮೇಂದ್ರ, ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಸುನೀಲ್ ದತ್, ಸಂಜಯ್ ದತ್, ಗೋವಿಂದ, ಮಿಥುನ್ ಚಕ್ರವರ್ತಿ, ವಿನೋದ್ ಖನ್ನಾ, ಅನುಪಮ್ ಖೇರ್, ಕಿರಣ್ ಖೇರ್, ಪರೇಶ್ ರಾವಲ್, ಊರ್ಮಿಳಾ ಮಾತೋಂಡ್ಕರ್, ದಾರಾ ಸಿಂಗ್, ವೈಜಯಂತಿ ಮಾಲಾ ಬಾಲಿ, ಶಬಾನಾ ಆಜ್ಮಿ ಮುಂತಾದವರು ರಾಜಕೀಯದಲ್ಲಿ ಕೆಲವು ವರ್ಷಗಳ ಕಾಲ ಮಿಂಚಿ ಮರೆಯಾದರು.

    ಇದನ್ನೂ ಓದಿ: ಮಿನುಗುತಾರೆಯೊಂದಕ್ಕೆ ಅಪ್ಪು ಹೆಸರು; ನಕ್ಷತ್ರವಾದ ಪುನೀತ್​

    ದಕ್ಷಿಣದಲ್ಲಿ ನಂಟು ಜೋರು: ಹಾಗೆ ನೋಡಿದರೆ, ಸಿನಿಮಾ ಮತ್ತು ರಾಜಕೀಯದ ನಂಟು ಉತ್ತರಕ್ಕಿಂತ ದಕ್ಷಿಣ ಭಾರತದಲ್ಲೇ ಹೆಚ್ಚು. ಅದರಲ್ಲೂ ತಮಿಳು ಮತ್ತು ತೆಲುಗಿನಲ್ಲಿ ಹಲವು ಸಿನಿಮಾ ನಟ-ನಟಿಯರು ಒಂದು ಹಂತದ ನಂತರ ಚಿತ್ರರಂಗದಿಂದ ಸೀದಾ ಬಂದಿದ್ದು ರಾಜಕೀಯಕ್ಕೆ. ಅದರಲ್ಲೂ ತಮಿಳಿನಲ್ಲಿ ಸಿನಿಮಾಗೆ ಸಂಬಂಧಿಸಿದ ಐವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಸಿ.ಎನ್. ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ, ಜಾನಕಿ ರಾಮಚಂದ್ರನ್ ಮತ್ತು ಜೆ. ಜಯಲಲಿತಾ. ಇವರೆಲ್ಲ ಚಿತ್ರರಂಗಕ್ಕೆ ಸಂಬಂಧಪಟ್ಟವರೇ. ಇದಲ್ಲದೆ ತಮಿಳುನಾಡಿನ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಶಿವಾಜಿ ಗಣೇಶನ್, ಟಿ. ರಾಜೇಂದರ್, ಶರತ್ ಕುಮಾರ್ ಎಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ಹಂತದಲ್ಲಿ ಗುರುತಿಸಿಕೊಂಡವರೇ. ತೆಲುಗಿನ ಚಿತ್ರಣ ಇದಕ್ಕಿಂತ ಭಿನ್ನವೇನಲ್ಲ. ಅಲ್ಲಿ ಎನ್.ಟಿ. ರಾಮರಾವ್ ಮುಖ್ಯಮಂತ್ರಿಯಾಗಿದ್ದರು. ಆನಂತರ ಚಿರಂಜೀವಿ, ಪವನ್ ಕಲ್ಯಾಣ್, ನಂದಮೂರಿ ಬಾಲಕೃಷ್ಣ, ನಂದಮೂರಿ ಹರಿಕೃಷ್ಣ, ಜಮುನಾ, ಜಯಸುಧಾ, ಕೃಷ್ಣಂರಾಜು, ದಾಸರಿ ನಾರಾಯಣ ರಾವ್, ರೋಜಾ, ವಿಜಯಶಾಂತಿ ಮುಂತಾದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.

    ಸಮಾಜ ಸೇವೆಯೇ ಉದ್ದೇಶ: ತಾವೊಬ್ಬ ನಟ-ನಿರ್ದೇಶಕರಾಗಿದ್ದರೂ, ತಮ್ಮ ಮೂಲ ಉದ್ದೇಶ ಇದ್ದಿದ್ದು ಸಮಾಜ ಸೇವೆ ಎಂದು ಉಪೇಂದ್ರ ಹೇಳಿಕೊಳ್ಳುತ್ತಿದ್ದರು. ತಮ್ಮ ಕಲ್ಪನೆಯ ಸಮಾಜ ಹೇಗಿರಬೇಕು ಎಂದು ಅವರು ಬಣ್ಣಿಸುತ್ತಿದ್ದರು. ಹಾಗಾಗಿ, ಬೇರೆ ರಾಜಕೀಯ ಪಕ್ಷಗಳ ಜತೆ ಸೇರದೆ ಸ್ವತಂತ್ರವಾಗಿ ಪಕ್ಷ ಕಟ್ಟಿ ಬೆಳೆಸಿದರು. ಬರೀ ಉಪೇಂದ್ರ ಮಾತ್ರವಲ್ಲ, ಬೇರೆಬೇರೆ ಕಡೆ ಹಲವು ಸಿನಿಮಾ ಸೆಲೆಬ್ರಿಟಿಗಳು ಸ್ವಂತ ಪಕ್ಷ ಕಟ್ಟಿಕೊಂಡು, ತಮ್ಮ ಕಲ್ಪನೆಯ ರಾಜಕೀಯ ಮತ್ತು ಸಮಾಜ ಸೇವೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ತಮಿಳಿನಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಉಪೇಂದ್ರರ ತರಹ ಸ್ವಂತ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, ತಮಿಳುನಾಡು ಚುನಾವಣೆ ಹತ್ತಿರ ಬರುತ್ತಿದ್ದಂತೆ, ರಜನಿಕಾಂತ್ ರಾಜಕೀಯದಿಂದ ದೂರ ಇರುವುದಾಗಿ ಹೇಳಿದರೆ, ಚುನಾವಣೆ ಮುಗಿದ ನಂತರ ಕಮಲ್ ಹಾಸನ್ ಪಕ್ಷದ ಸುದ್ದಿಯೇ ಇಲ್ಲ. ಅದೇ ರೀತಿ ತೆಲುಗು ನಟ ಚಿರಂಜೀವಿ, ಪ್ರಜಾ ರಾಜ್ಯಂ ಎಂಬ ಪಕ್ಷ ಕಟ್ಟಿ, ಕೊನೆಗೆ ಅದನ್ನು ಕಾಂಗ್ರೆಸ್ ಜತೆಗೆ ವಿಲೀನಗೊಳಿಸಿದರು. ಅವರ ಸಹೋದರ ಪವನ್ ಕಲ್ಯಾಣ್ ಈಗ ಜನಸೇನಾ ಎಂಬ ಸ್ವಂತ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಹೀಗೆ ಹಲವು ಹೀರೋಗಳು ತಮ್ಮ ಪರಿಕಲ್ಪನೆಯ ಪಕ್ಷವನ್ನು ಕಟ್ಟಿದ್ದಾರಾದರೂ, ಅದರಲ್ಲಿ ಯಶಸ್ವಿಯಾದವರು ಕಡಿಮೆಯೇ.

    ರಾಜಕಾರಣದಿಂದ ದೂರವೇ ಉಳಿದವರು: ಸಿನಿಮಾ ಜತೆಗೆ ಅಥವಾ ನಂತರ ರಾಜಕೀಯ ಎಂಬ ಕಲ್ಪನೆಯನ್ನು ಸುಳ್ಳು ಮಾಡಿದವರು ಡಾ. ರಾಜಕುಮಾರ್. ಅವರಿಗೆ ರಾಜಕೀಯ ಸೇರುವುದಕ್ಕೆ ಸಾಕಷ್ಟು ಒತ್ತಡವಿತ್ತು. ಅವರು ಮನಸ್ಸು ಮಾಡಿದ್ದರೆ ಏನು ಬೇಕಾದರೂ ಆಗಬಹುದಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ರಾಜಕುಮಾರ್ ಅದ್ಯಾವುದನ್ನೂ ಮಾಡಲಿಲ್ಲ. ರಾಜಕೀಯದಿಂದ ದೂರವೇ ಉಳಿದು ಬಿಟ್ಟರು. ತಾವು ನಂಬಿರುವುದು ಚಿತ್ರರಂಗವನ್ನೇ ಹೊರತು, ರಾಜಕೀಯವನ್ನಲ್ಲ ಎಂದುಬಿಟ್ಟರು. ಅವರ ಬೀಗರಾದ ಎಸ್. ಬಂಗಾರಪ್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಡಾ. ರಾಜ್ ಮನಸ್ಸು ರಾಜಕೀಯದತ್ತ ವಾಲಲಿಲ್ಲ. ಅದೇ ರೀತಿ ವಿಷ್ಣುವರ್ಧನ್ ಸಹ ರಾಜಕೀಯ ಸೇರಲಿಲ್ಲ. ಯಾವೊಂದು ಪಕ್ಷದೊಂದಿಗೂ ಗುರುತಿಸಿಕೊಳ್ಳಲಿಲ್ಲ. ಅವರಿಗೆ ಎಲ್ಲ ಪಕ್ಷಗಳಲ್ಲಿಯೂ ಸ್ನೇಹಿತರಿದ್ದರು. ಆದರೂ ಅವರು ರಾಜಕೀಯಕ್ಕೆ ಬರಲಿಲ್ಲ. ಅದೇ ರೀತಿ ಶಿವರಾಜಕುಮಾರ್, ಸುದೀಪ್ ಮುಂತಾದವರಿಗೆ ಈಗಲೂ ಪಕ್ಷಗಳಿಂದ ಆರ್ ಇದ್ದೇ ಇದೆ. ಆದರೆ, ಎಲ್ಲರೂ ಅಂತರ ಕಾಯ್ದುಕೊಂಡಿದ್ದಾರೆ. ಅದೇ ರೀತಿ ಹಿಂದಿಯ ಖ್ಯಾತ ನಟ ರಾಜ್ ಕಪೂರ್, ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್, ಮಲಯಾಳಂನ ಪ್ರೇಮ್ ನಜೀರ್ ಮುಂತಾದವರು ರಾಜಕೀಯದಿಂದ ದೂರವೇ ಇದ್ದರು.

    (2023ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ಲೇಖನ)

    ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ರವಿಚಂದ್ರನ್​; ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts