

ಇತ್ತೀಚೆಗಷ್ಟೇ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರವನ್ನು ಸ್ವತಃ ಧ್ರುವ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೀಗ ಧ್ರುವ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ.
ಈ ವಿಚಾರವನ್ನು ಹೇಳುವುದರ ಸಲುವಾಗಿಯೇ ಇನ್ಸ್ಟಾಗ್ರಾಂ ಲೈವ್ ಬಂದಿದ್ದ ಧ್ರುವ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡಿದರು. ಟ್ರೆಡ್ ಮಿಲ್ ಮೇಲೆ ವಾಕಿಂಗ್ ಮಾಡುತ್ತಲೇ ಮಾತನಾಡಿದ ಧ್ರುವ, ‘ಯಾರೂ ಭಯ ಬೀಳುವ ಅವಶ್ಯಕತೆ ಇಲ್ಲ. ನಾನು ಮತ್ತು ಪತ್ನಿ ಪ್ರೇರಣಾ ಇಬ್ಬರೂ ಆರೋಗ್ಯವಾಗಿದ್ದೇವೆ. ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಿದ್ದೇವೆ ಎಂದರು.
ಅದೇ ರೀತಿ ಅಭಿಮಾನಿಗಳಿಗೂ ಕರೊನಾ ಬಗ್ಗೆ ಜಾಗೃತಿ ವಹಿಸಿ, ಬಿಸಿನೀರನ್ನೇ ಸೇವಿಸಿ, ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮನೆಯಲ್ಲಿಯೇ ಒಂದಷ್ಟು ವರ್ಕೌಟ್ ಮಾಡಿ ಎಂದೂ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸರ್ಜಾ ಕುಟುಂಬದ ಆಪ್ತರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರಗೆ ದಾಖಲಿಸಲು ಧ್ರುವ ತೆರಳಿದ್ದರು. ಆ ವೇಳೆಯಲ್ಲಿ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.