More

    ಅಪಘಾತದಿಂದ ಹೊರಬಿತ್ತು ಗಾಂಜಾ ಸಾಗಾಣಿಕೆ ಜಾಲ!

    ಚಿತ್ರದುರ್ಗ: ಹೊಳಲ್ಕೆರೆ ಬಳಿ ನಡೆದ ರಸ್ತೆ ಅಪಘಾತದಿಂದ ರಾಜ್ಯ, ಅಂತಾರಾಜ್ಯ ಪೊಲೀಸರನ್ನು ಯಾಮಾರಿಸಿ ನಡೆಯುತ್ತಿದ್ದ ಗಾಂಜಾ ಅಕ್ರಮ ಸಾಗಾಣಿಕೆ ಪ್ರಕರಣವೊಂದು ಬಯಲಾಗಿದೆ.

    ಕೇರಳ ಆರೋಪಿಗಳು ಆಂಧ್ರಪ್ರದೇಶದ ಕಾಕಿನಾಡಿನಲ್ಲಿ ಗಾಂಜಾ ಖರೀದಿಸಿ, ಬೆಂಗಳೂರು ಮೂಲಕ ಭದ್ರಾವತಿಯಲ್ಲಿ ದಾಸ್ತಾನಿಟ್ಟು ಅಲ್ಲಿಂದ ಕೇರಳಕ್ಕೆ ಸಾಗಿಸುತ್ತಿದ್ದರು. ಅನೇಕ ವರ್ಷಗಳಿಂದ ನಿರಂತರವಾಗಿ ಈ ಕೃತ್ಯ ನಡೆದು ಬಂದಿರಬಹುದೆಂದು ಶಂಕಿಸಲಾಗಿದೆ. ತರಕಾರಿ ಕ್ರೇಟ್​ಗಳ ನಡುವೆ ಗಾಂಜಾ ಸಾಗಿಸುತ್ತಿದ್ದ ಕುತೂಹಲಕಾರಿ ಅಂಶ ತನಿಖೆ ವೇಳೆ ತಿಳಿದು ಬಂದಿದೆ.

    ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೂ ಅವಸರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆಟೋದಲ್ಲೇ ಅಪಘಾತ ಸ್ಥಳಕ್ಕೆ ಧಾವಿಸಿದ್ದ ಆರೋಪಿಯ ಸಂಶಯಾತ್ಮಕ ನಡೆ, ಹೊಳಲ್ಕೆರೆ ಪೊಲೀಸರ ಸಮಯಪ್ರಜ್ಞೆಯಿಂದ ಗಾಂಜಾ ಸಾಗಾಣಿಕೆಯ ವ್ಯವಸ್ಥಿತ ಜಾಲ ಬಲೆಗೆ ಬಿದ್ದಿದೆ. ಇನ್ನಷ್ಟು ತನಿಖೆ ಮೂಲಕ ಖದೀಮರು ಎಸಗುತ್ತಿದ್ದ ಕೃತ್ಯದ ಆಳ-ಅಗಲದ ವಿವರಗಳು ಗೊತ್ತಾಗಬೇಕಿದೆ.

    ಏನಿದು ಪ್ರಕರಣ?: ಹೊಳಲ್ಕೆರೆ ಬಳಿ ಅರೇಹಳ್ಳಿ ರೈಲ್ವೇಸ್ಟೇಷನ್ ಹಾಗೂ ಬಸಾಪುರ ಗೇಟ್ ಮಧ್ಯೆ ಜು.12ರಂದು ಬೆಳಗ್ಗೆ ಅಪಘಾತಕ್ಕೀಡಾದ ಮಿನಿ ಲಾರಿ ಪರಿಶೀಲನೆ ವೇಳೆ ಗಾಂಜಾ ಸಾಗಾಣಿಕೆ ಪ್ರಕರಣ ಬಯಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಹರೀಶ್, ಕ್ಲೀನರ್ ನೌಶದ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹರೀಶ್ ವಾಹನ ಅಪಘಾತಕ್ಕೀಡಾಗುತ್ತಿದ್ದಂತೆ ಒಣ ಗಾಂಜಾವಿದ್ದ (12.88 ಕೆಜಿ) ಬ್ಯಾಗನ್ನು ರಸ್ತೆ ಬದಿ ಎಸೆದಿದ್ದ. ಅದನ್ನು ಪಡೆಯಲು ಅವಸರದಲ್ಲಿ ಆಸ್ಪತ್ರೆಯಿಂದ ಸ್ಥಳಕ್ಕೆ ಮರಳಿದ್ದನು. ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದರಿಂದ ಭದ್ರಾವತಿಯಲ್ಲಿದ್ದ ಈತನ ಸಹಚರರಾದ ಕೇರಳದ ಎಂ.ಸುಬೀಷ್, ಅನೂಪ್, ಎ.ಪಿ.ಸಂಜಯ್ ಅವರನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಅಲ್ಲಿಯ ಮನೆಯೊಂದರಲ್ಲಿ (28.62 ಕೆಜಿ) ಹಾಗೂ ಬಸಾಪುರ ಗೇಟ್ ಬಳಿಯಿಂದ ಅಂದಾಜು 10.50 ಲಕ್ಷ ರೂ. ಮೌಲ್ಯದ 41.50 ಕೆಜಿ ಗಾಂಜಾ ಹಾಗೂ ಅಂದಾಜು 4.50 ಲಕ್ಷ ರೂ. ಮೌಲ್ಯದ 2 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

    ಆಸ್ಪತ್ರೆಯಲ್ಲಿರುವ ನೌಶಾದ್​ನನ್ನು ಬಂಧಿಸಿಲ್ಲ. ಹೆಚ್ಚಿನ ತನಿಖೆಗೆ ಪೊಲೀಸರ ತಂಡವೊಂದು ಕೇರಳಕ್ಕೆ ತೆರಳಲಿದೆ ಎಂದರು. ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿ ಪಾಂಡುರಂಗ, ಹೊಳಲ್ಕೆರೆ ಸರ್ಕಲ್ ಇನ್ಸ್​ಪೆಕ್ಟರ್ ಕೆ.ಎನ್.ರವೀಶ್, ಪಿಎಸ್​ಐ ವಿಶ್ವನಾಥ ಇದ್ದರು.

    ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

    ಚಿಕ್ಕಮ್ಮನ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದ ಬಾಲಕನ ಪ್ರಾಣವನ್ನೇ ಹೊತ್ತೊಯ್ದ ಜವರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts