More

    ರಾಮನಗರ ಎಸ್​ಪಿ ಮನೆ ಸಮೀಪದಲ್ಲೇ ಇತ್ತು ಕೋಟ್ಯಂತರ ಮೌಲ್ಯದ ಹೈಡ್ರೋ ಗಾಂಜಾ! ಸಿಸಿಬಿ ಪೊಲೀಸರೇ ಶಾಕ್​

    ರಾಮನಗರ: ಬಿಡದಿಯ ಈಗಲ್​ಟನ್ ರೆಸಾರ್ಟ್​ನಲ್ಲಿ ವಿಲ್ಲಾ ಬಾಡಿಗೆಗೆ ಪಡೆದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹೈಡ್ರೋಫೋನಿಕ್ ಗಾಂಜಾ ಬೆಳೆದು ಆನ್​ಲೈನ್​ನಲ್ಲೇ ಡೀಲ್ ಕುದುರಿಸುತ್ತಿದ್ದ ಇರಾನಿಯನ್ ಪ್ರಜೆ ಜಾವಿದ್ ರುಸ್ತುಂಪುರ್ (37) ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರುಸ್ತುಂ ಒಂದೂವರೆ ವರ್ಷದ ಹಿಂದೆ ಬಿಡದಿಯ ಈಗಲ್​ಟನ್ ರೆಸಾರ್ಟ್​ಗೆನ ವಿಲ್ಲಾದಲ್ಲಿ ನೆಲೆಸಿ ಹೈಟೆಕ್ ಮಾದರಿಯಲ್ಲಿ ಗಾಂಜಾ ಬೆಳೆಯುತ್ತಿದ್ದರೂ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇಲ್ಲಿ ಸುಮಾರು 130 ಗಿಡಗಳನ್ನು ಬೆಳೆಯಲಾಗಿದ್ದು, ರುಸ್ತುಂ ಇದ್ದ ವಿಲ್ಲಾ ಮಾಜಿ ಸೈನಿಕರೊಬ್ಬರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ನಿವಾಸದಿಂದ 200 ಮೀಟರ್ ದೂರದಲ್ಲಿ ರುಸ್ತುಂ ವಿಲ್ಲಾ ಇದೆ ಎಂಬುದು ಪೊಲೀಸರಲ್ಲಿ ಅಚ್ಚರಿ ಉಂಟು ಮಾಡಿದೆ.

    ಕೆಲ ದಿನಗಳ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಡ್ರಗ್ಸ್ ಕೇಸ್​ನಲ್ಲಿ ಬಂಧಿತರಾಗಿದ್ದ ಇರಾನಿ ಪ್ರಜೆಗಳಿಬ್ಬರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಜಾವಿದ್ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಬೆಂಗಳೂರಿನ ಸಿಸಿಬಿ ಪೊಲೀಸರು ಹಾಗೂ ಬಿಡದಿ ಪೊಲೀಸರು ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿ ರುಸ್ತುಂಪುರ್​ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ನಡೆಸುತ್ತಿದ್ದ ಅಕ್ರಮಗಳು ಬೆಳಕಿಗೆ ಬಂದಿವೆ.

    ಜಾವಿದ್ ಇರಾನ್​ನಲ್ಲಿ ಜೊರಾಸ್ಟ್ರಿಯನ್ ಧರ್ಮಕ್ಕೆ ಮತಾಂತರಗೊಂಡ ಹಿನ್ನೆಲೆಯಲ್ಲಿ ಅಲ್ಲಿ ತನ್ನ ಪ್ರಾಣಕ್ಕೆ ಕಂಟಕ ಎದುರಾಗುವ ಭೀತಿಯಿಂದ ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಆದರೆ, ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ರುಸ್ತಂಪುರ್ ಇದಕ್ಕಾಗಿ ಮರಿಜುವಾನದಲ್ಲಿ ದೊರೆಯುವ ಸಿವಿಡಿ ಎಂಬ ಔಷಧ ಪಡೆದುಕೊಳ್ಳುವ ಸಂಬಂಧ ಇದರ ಬಗ್ಗೆ ಅಧ್ಯಯನ ನಡೆಸಿದ್ದ. ಇದಕ್ಕಾಗಿ ಮರಿಜುವಾನಾ ಬೈಬಲ್ ಎನ್ನುವ ಪುಸ್ತಕವನ್ನು ಖರೀದಿಸಿ ಇದನ್ನು ಅಧ್ಯಯನ ನಡೆಸುವ ಜತೆಗೆ, ಗೋವಿಡ್ ಈಸೀ ಡಾಟ್ ಕಾಂನಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ತನ್ನ ಅನಾರೋಗ್ಯ ಗುಣಪಡಿಸಲು ಬೇಕಾದ ಔಷಧವನ್ನು ರುಸ್ತುಂಪುರ್ ತಾನೇ ಬೆಳೆಯಲು ಮುಂದಾಗಿದ್ದ.

    ಆರಂಭದಲ್ಲಿ ಯೂರೋಪ್​ನಿಂದ ಆನ್​ಲೈನ್ ಮೂಲಕ ಔಷಧಕ್ಕೆ ಬಳಕೆ ಮಾಡುವ ಹೈಡ್ರೋಫೋನಿಕ್ ಗಾಂಜಾದ 60 ಬೀಜಗಳನ್ನು ತರಿಸಿಕೊಂಡಿದ್ದ. ನಂತರ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಇದರ ಗಿಡಗಳನ್ನು ಬೆಳೆಸಲು ಮುಂದಾಗಿದ್ದ.

    ನಂತರ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಹೈಡ್ರೋಫೋನಿಕ್​ನ್ನು ಆನ್​ಲೈನ್​ನಲ್ಲೇ ಮಾರಾಟ ಮಾಡಲು ಮುಂದಾಗಿದ್ದ. ಆದರೆ, ಇತ್ತೀಚೆಗೆ ಡ್ರಗ್ಸ್ ಕೇಸ್​ನಲ್ಲಿ ಸೆಲೆಬ್ರಿಟಿಗಳ ಬಂಧನ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುವುದು ಆತನಿಗೆ ತುಸು ಕಷ್ಟವಾಗಿತ್ತು. ಹೀಗಾಗಿ ಒಂದೂವರೆ ವರ್ಷದ ಹಿಂದೆಯೇ ಬಿಡದಿಯ ಈಗಲ್​ಟನ್ ರೆಸಾರ್ಟ್​ನಲ್ಲಿ ವಿಲ್ಲಾವನ್ನು ಬಾಡಿಗೆಗೆ ಪಡೆದು ಅಲ್ಲಿಯೇ ಗಾಂಜಾ ಬೆಳೆದು ಬೆಂಗಳೂರು ನಗರದಲ್ಲಿ ತನ್ನ ಗ್ರಾಹಕರಿಗೆ ಹೈಡ್ರೋಫೋನಿಕ್ ಗಾಂಜಾನ್ನು ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

    ಏನಿದು ಹೈಡ್ರೋಫೋನಿಕ್ ಗಾಂಜಾ?: ಹೈಡ್ರೋ ಗಾಂಜಾ ಸಾಮಾನ್ಯ ಗಾಂಜಾದಂತೆ ಅಲ್ಲ. ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 4-5 ಸಾವಿರ ರೂ.ಗೆ ಮಾರಾಟವಾಗುತ್ತದೆ. ಇದನ್ನು ಸೂಕ್ಷ್ಮ ಪರಿಸರದಲ್ಲಿ ಬೆಳೆಯಬೇಕು. ಬಹುತೇಕ ನೆದರ್​ಲೆಂಡ್​ನಂತಹ ದೇಶದಲ್ಲಿ ಹೈಡ್ರೋ ಗಾಂಜಾ ಬೆಳೆಯಲಾಗುತ್ತದೆ. ಆದರೆ, ಬೆಂಗಳೂರಿನಂತಹ ಪ್ರದೇಶದಲ್ಲಿ ಇದನ್ನು ಬೆಳೆಯಲು ಪಾಲಿ ಹೌಸ್ ನಿರ್ಮಾಣ ಮಾಡಿ ಹವಾ ನಿಯಂತ್ರಿತ ವಾತಾವರಣ ಸೃಷ್ಟಿಸಬೇಕಾಗುತ್ತದೆ. ಜತೆಗೆ ಅಲ್ಟ್ರಾ ವೈಲೆಟ್ ಕಿರಣಗಳು ಮತ್ತು ರಾಸಾಯನಿಕ ಬಳಕೆ ಮಾಡಲೇಬೇಕು. ಹೈಡ್ರೋ ಗಾಂಜಾ ಮಾಮೂಲಿ ಗಾಂಜಾಗಿಂತ 30-40 ಪಟ್ಟು ಹೆಚ್ಚು ಅಮಲು ಪದಾರ್ಥವಾಗಿದೆ ಎನ್ನಲಾಗಿದ್ದು, ಶ್ರೀಮಂತ ವರ್ಗದವರು ಹೆಚ್ಚಾಗಿ ಇದನ್ನು ಬಳಸುತ್ತಾರೆ.

    ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿದ್ದರಿಂದ ನಾವು ಯಾವುದೇ ಪ್ರಕರಣ ದಾಖಲು ಮಾಡಲಿಲ್ಲ. ಡಿಜೆ ಹಳ್ಳಿಯಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಸಿ ಪೊಲೀಸರು ದಾಳಿ ನಡೆಸಿದ್ದಾರೆ.
    | ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts