ಓಟಿಟಿ ವೇದಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಂದಾದ ಮೇಲೊಂದರಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳು ಆನ್ಲೈನ್ ವೇದಿಕೆ ಏರುತ್ತಿವೆ. ಚಿತ್ರಮಂದಿರ ಬಿಟ್ಟು ನೇರವಾಗಿ ಫೋನ್ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಿಕೊಳ್ಳುತ್ತಿವೆ. ಕೆಲವೇ ಗಂಟೆಗಳ ಹಿಂದಷ್ಟೇ ಪವರ್ಸ್ಟಾರ್ ಪುನೀತ್ ನಿರ್ಮಾಣದ ಎರಡು ಸಿನಿಮಾಗಳು ಅಮೆಜಾನ್ನಲ್ಲಿ ಬಿತ್ತರಗೊಳ್ಳಲಿವೆ ಎಂಬ ಮುನ್ಸೂಚನೆಯನ್ನೂ ಅವರು ನೀಡಿದ್ದರು. ಇದೀಗ ಬಾಲಿವುಡ್ನಲ್ಲಿ ಸಿದ್ಧವಾಗಿರುವ ಕರುನಾಡ ಸಾಧಕಿಯ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.
ಇದನ್ನೂ ಓದಿ: ‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್!
ಹಾಗಾದರೆ ಯಾವುದಾ ಸಿನಿಮಾ? ಹೌದು, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಶಕುಂತಲಾ ದೇವಿ ಕುರಿತ ಬಯೋಪಿಕ್ ಬಾಲಿವುಡ್ನಲ್ಲಿ ನಿರ್ಮಾಣವಾಗಿದೆ. ಶಕುಂತಲಾ ದೇವಿಯಾಗಿ ನಟಿ ವಿದ್ಯಾ ಬಾಲನ್ ಪಾತ್ರಪೋಷಣೆ ಮಾಡಿದ್ದಾರೆ. ಅಮೆಜಾನ್ಗೆ ಬರುವ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದ್ದು, ಯಾವಾಗ ಆಗಮನ ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.
ಇದನ್ನೂ ಓದಿ: ‘ಗಾಳಿಪಟ 2’ ತಂಡದೊಂದಿಗೆ ಕಾಣಿಸಿಕೊಂಡ ಜಗ್ಗೇಶ್ … ಯಾಕಿರಬಹುದು?
ಮಾನವ ಕಂಪ್ಯೂಟರ್ ಎಂದೇ ಕರೆಸಿಕೊಂಡಿರುವ ಶಕುಂತಲಾ ದೇವಿ ಮೂಲತಃ ಬೆಂಗಳೂರಿನವರು. 1929ರಲ್ಲಿ ಜನಿಸಿದ ಶಕುಂತಲಾ, ಚಿಕ್ಕಂದಿನಿಂದಲೂ ಬುದ್ಧಿವಂತೆ. ಅದರಲ್ಲೂ ಗಣಿತದಲ್ಲಿ ಅವರನ್ನು ಮೀರಿಸುವವರೇ ಇಲ್ಲ. ಅಂತ ಪ್ರತಿಭಾನ್ವಿತೆಗೆ 1982ರಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಸೇರ್ಪಡೆಯಾಯಿತು. ಸಾಕಷ್ಟು ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ರಾಜಕೀಯದಲ್ಲೂ ಶಕುಂತಲಾ ಗುರುತಿಸಿಕೊಂಡು, ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಹೀಗೆ ಒಂದು ಸಿನಿಮಾಕ್ಕೆ ಬೇಕಾದ ಎಲ್ಲ ಸರಕುಗಳು ಶಕುಂತಲಾ ಜೀವನದಲ್ಲಿ ಕಂಡಿದ್ದರಿಂದ, ನಿರ್ದೇಶಕಿ ಅನು ಮೆನನ್ ಅವರ ಜೀವನವನ್ನೇ ಆಧರಿಸಿ ಸಿನಿಮಾ ಮಾಡಿದ್ದಾರೆ. ಆ ಚಿತ್ರ ಇನ್ನು ಕೆಲ ದಿನಗಳಲ್ಲಿ ಪ್ರೈಮ್ನಲ್ಲಿ ಬಿಡುಗಡೆ ಆಗಲಿದೆ. (ಏಜೆನ್ಸೀಸ್)
ಸ್ವಿಗ್ಗಿ ಬಾಯ್ಸ್ಗೆ ದರ್ಶನ್ ಅಭಿಮಾನಿಗಳ ಕಡೆಯಿಂದ ಸ್ಮಾಲ್ ಟ್ರೀಟ್!