ನವದೆಹಲಿ: ಯಾರೂ ಊಹಿಸದಂತೆ ಬರೋಬ್ಬರಿ 2800 ಕೋಟಿ ರೂ. ಲಾಟರಿ ಬಹುಮಾನ ಗೆದ್ದ ಖುಷಿಯಲ್ಲಿರುವಾಗಲೇ ಇದೊಂದು ಮಿಸ್ಟೇಕ್ ಎನ್ನುವ ಮೂಲಕ ತೀವ್ರ ನಿರಾಸೆ ಉಂಟು ಮಾಡಿದ ಕಂಪನಿಯ ವಿರುದ್ಧ ವ್ಯಕ್ತಿಯೊಬ್ಬ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಈ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿದೆ. ಜಾನ್ ಚೀಕ್ಸ್ ಎಂಬಾತ 2023ರ ಜನವರಿ 6ರಂದು ಪವರ್ಬಾಲ್ ಮತ್ತು ಡಿಸಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಮಾರನೇ ದಿನ ಡಿಸಿ ಲಾಟರಿ ವೆಬ್ಸೈಟ್ ನೋಡಿ ಜಾನ್ ಚೀಕ್ಸ್ ಅಚ್ಚರಿಗೊಂಡಿದ್ದರು. ಏಕೆಂದರೆ, ಬಹುಮಾನ ವಿಜೇತರ ಪಟ್ಟಿಯಲ್ಲಿ ಅವರ ಹೆಸರಿತ್ತು. ಖರೀದಿ ಮಾಡಿದ್ದ ಟಿಕೆಟ್ಗೆ 340 ಮಿಲಿಯನ್ ಡಾಲರ್ ಬಹುಮಾನ ಒಲಿದು ಬಂದಿತ್ತು. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 2800 ಕೋಟಿ ರೂಪಾಯಿ. ಇಷ್ಟು ಮೊತ್ತದ ಬಹುಮಾನವನ್ನು ಕಂಡು ಜಾನ್ ಚೀಕ್ಸ್ ಫುಲ್ ಖುಷಿಯಾಗಿದ್ದರು. ಆದರೆ, ಅವರ ಖುಷಿ ಹೆಚ್ಚು ದಿನ ಉಳಿಯಲಿಲ್ಲ.
ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಒಂದು ದೋಷದಿಂದಾಗಿ ಹೆಸರು ಘೋಷಣೆಯಾಗಿದೆ ಎಂದು ಕಂಪನಿ ಹೇಳಿತು. ಈ ಸುದ್ದಿ ಕೇಳಿ ಆಘಾತಕ್ಕೀಡಾದ ಜಾನ್ ಚೀಕ್ಸ್ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಚೀಕ್ಸ್, ವಿಜೇತರ ಹೆಸರು ನೋಡಿ ಸ್ವಲ್ಪ ಉತ್ಸುಕನಾದೆ, ಆದರೆ, ಕೂಗಾಡಲಿಲ್ಲ ಮತ್ತು ಅರಚಾಡಲಿಲ್ಲ. ನಾನು ನಯವಾಗಿ ಸ್ನೇಹಿತರಿಗೆ ಕರೆ ಮಾಡಿದೆ. ಅವರು ಹೇಳಿದಂತೆ ನಾನು ಲಾಟರಿಯ ಚಿತ್ರವನ್ನು ತೆಗೆದೆ ಮತ್ತು ಮಲಗಲು ಹೋದೆ. ಮರುದಿನ ಲಾಟರಿ ಟಿಕೆಟ್ ಅನ್ನು ಕಂಪನಿಗೆ ಸಲ್ಲಿಸಿದಾಗ, ಅದನ್ನು ತಿರಸ್ಕರಿಸಿದರು. ಚೀಕ್ಸ್ಗೆ ಬರೆದ ಪತ್ರದಲ್ಲಿ, OLG ನಿಯಮಗಳ ಪ್ರಕಾರ ಟಿಕೆಟ್ ಅನ್ನು OLG ಗೇಮಿಂಗ್ ಸಿಸ್ಟಮ್ನಿಂದ ವಿಜೇತರಾಗಿ ಮೌಲ್ಯೀಕರಿಸದ ಕಾರಣ ಅವರ ಬಹುಮಾನದ ಹಕ್ಕು ನಿರಾಕರಿಸಲಾಗಿದೆ ಎಂದು ಕಂಪನಿ ಹೇಳಿತು. ಅಲ್ಲದೆ, ಲಾಟರಿ ಏಜೆಂಟ್ ಒಬ್ಬ ಲಾಟರಿ ಟಿಕೆಟ್ ಅನ್ನು ಕಸದಬುಟ್ಟಿಗೆ ಎಸೆಯುವಂತೆ ಹೇಳಿದರು ಎಂದು ಚೀಕ್ಸ್ ತಿಳಿಸಿದ್ದಾರೆ.
ಚೀಕ್ಸ್ ತನ್ನ ಟಿಕೆಟ್ ಅನ್ನು ಎಸೆಯದಿರಲು ನಿರ್ಧರಿಸಿದರು. ಬದಲಿಗೆ ಅದನ್ನು ಸುರಕ್ಷಿತ ಡೆಪಾಸಿಟ್ ಪೆಟ್ಟಿಗೆಯಲ್ಲಿ ಇರಿಸಿ, ಪವರ್ಬಾಲ್ ಕಂಪನಿ ವಿರುದ್ಧ ಮೊಕದ್ದಮೆ ಹೂಡಲು ಕಾನೂನು ಸಲಹೆ ಪಡೆದರು. ಚೀಕ್ಸ್ ಸಲ್ಲಿಸಿದ ಮೊಕದ್ದಮೆಯು ಮಲ್ಟಿ-ಸ್ಟೇಟ್ ಲಾಟರಿ ಅಸೋಸಿಯೇಷನ್ ಮತ್ತು ಗುತ್ತಿಗೆದಾರ ಟಾವೋಟಿ ಎಂಟರ್ಪ್ರೈಸಸ್ ಅನ್ನು ಪ್ರತಿವಾದಿಗಳೆಂದು ಹೆಸರಿಸಿದೆ. ಪವರ್ಬಾಲ್ ಕಂಪನಿಯಿಂದ ಲಾಟರಿ ಮೊತ್ತ ಪಡೆಯುವತ್ತ ಚೀಕ್ಸ್ ಹೋರಾಡುತ್ತಲೇ ಇದಾರೆ.
ಒಪ್ಪಂದದ ಉಲ್ಲಂಘನೆ, ನಿರ್ಲಕ್ಷ್ಯ, ಭಾವನಾತ್ಮಕ ಯಾತನೆ ಮತ್ತು ವಂಚನೆ ಸೇರಿದಂತೆ ಎಂಟು ಪ್ರತ್ಯೇಕ ದೂರುಗಳನ್ನು ಚೀಕ್ಸ್ ದಾಖಲಿಸಿದ್ದಾರೆ. ಚೀಕ್ಸ್ ಪರ ವಕೀಲ ರಿಚರ್ಡ್ ಇವಾನ್ಸ್, ವಿಜೇತ ಸಂಖ್ಯೆಗಳು ಚೀಕ್ಸ್ ಅವರ ಸಂಖ್ಯೆಗಳಿಗೆ ಹೊಂದಿಕೆಯಾಗುವುದರಿಂದ, ಅವರು ಸಂಪೂರ್ಣ ಜಾಕ್ಪಾಟ್ ಅನ್ನು ಸ್ವೀಕರಿಸಬೇಕು ಎಂದು ವಾದ ಮಂಡಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 23 ಕ್ಕೆ ನಿಗದಿಪಡಿಸಲಾಗಿದೆ. (ಏಜೆನ್ಸೀಸ್)
ಮತ್ತೆ ಸಾಬೀತಾಯ್ತು ಸಾನಿಯಾ ಪವರ್! ಶೋಯಿಬ್ ಪತ್ನಿ ಸನಾಗೆ ಪಾಕ್ ನೆಲದಲ್ಲೇ ಭಾರಿ ಮುಖಭಂಗ
‘ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ’…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್ ಯಾರೆಂದು ತಡಕಾಡಿದ ಜನ