More

    ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ

    ಬೆಂಗಳೂರು: ಮಳೆ ಆಶ್ರಿತ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂರಕ್ಷಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಿ ಜಾರಿಗೆ ತರಲಾಗಿದ್ದ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಸರ್ಕಾರ ಮುಂದಾಗಿದೆ.

    2014-15ನೇ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆ ಜಾರಿಗೊಳಿಸಲಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯೋಜನೆ ಸ್ಥಗಿತಗೊಳಿಸಿತ್ತು. ಈಗ ಮರು ಜೀವ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.

    ಇದನ್ನೂ ಓದಿ: ಆಲೂಗಡ್ಡೆ ಬೆಳೆಯಲು ಸೂಕ್ತ ಕಾಲ ಯಾವುದು? ಮಣ್ಣು ಹಾಗೂ ನಾಟಿಗೆ ಸೂಕ್ತ ತಳಿಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ….

    ‘ವಿಜಯವಾಣಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಮಳೆ ನೀರಿನ ಸಂಗ್ರಹಣೆ ಮಾಡಿಕೊಂಡು ಉತ್ಪಾದಕತೆ ಹೆಚ್ಚಿಸಲು ಈ ಯೋಜನೆ ಜಾರಿಗೆ ತರಲಾಗಿತ್ತು. ಯೋಜನೆಯನ್ನು ನಾವು ಮರು ಜಾರಿ ಮಾಡುವುದರ ಜತೆಗೆ ಫಲಾನುಭವಿ ರೈತರಿಗೆ ಇನ್ನಷ್ಟು ಆರ್ಥಿಕ ನೆರವು ನೀಡಲು ಸಹ ಚಿಂತನೆ ನಡೆದಿದೆ ಎಂದರು.

    ಕೃಷಿ ಭಾಗ್ಯ ಯೋಜನೆಯಡಿ ನಿರ್ವಿುಸುವ ಕೃಷಿ ಹೊಂಡಕ್ಕೆ ನೀಡುವ ಅನುದಾನ ಕಡಿಮೆ. ಈ ಯೋಜನೆಯಲ್ಲಿ 5 ಲಕ್ಷ ರೂ. ನೀಡಿದರೆ ಅದೇ ಅಳತೆಯ ಕೃಷಿ ಹೊಂಡಕ್ಕೆ ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆಯಲ್ಲಿ 20 ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಭಾಗ್ಯ ಯೋಜನೆಯ ಸಹಾಯಧನ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

    ಕೆರೆ-ಕಟ್ಟೆ ತುಂಬಿಸಲು ಪ್ರಯತ್ನ: ಕೆರೆ-ಕಟ್ಟೆ ತುಂಬಿಸುವ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಟ್ಟೆಯಿಂದ ಕಟ್ಟೆಗೆ ನೀರು ತುಂಬಿಸುವ ಪ್ರಯತ್ನ ನಡೆದರೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಮೂರ್ನಾಲ್ಕು ವರ್ಷ ಮಳೆ ಬಾರದೇ ಇದ್ದರೂ ರೈತ ಬೆಳೆ ಬೆಳೆಯಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಒತ್ತು ನೀಡಲಿದೆ. ಭೂಮಿಯ ಮೇಲೆ ನೀರು ಸಂರಕ್ಷಿಸಿಕೊಳ್ಳುವುದು, ಕುಡಿಯಲು ಬಳಸುವುದು ಅವಶ್ಯ. ಈಗಾಗಲೆ ಜಲಜೀವನ್ ಮಿಷನ್ ಯೋಜನೆ ಜಾರಿಯಿಂದ ಜನರಿಗೆ ತುಸು ಅನುಕೂಲವಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ಮುಂಗಾರು, ಬಿತ್ತನೆಗೆ ಭೂಮಿ ಹದಗೊಳಿಸಿದ ರೈತರು

    ಯಶಸ್ವಿನಿ ಯಶಸ್ವಿ ಜಾರಿ

    ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವ ಸಂಬಂಧ ಸಹಕಾರ ಹಾಗೂ ಆರೋಗ್ಯ ಸಚಿವರ ಜತೆ ಚರ್ಚೆ ನಡೆಸುತ್ತೇವೆ. ರೈತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಯಶಸ್ವಿನಿ ಯೋಜನೆ ಮರುಜಾರಿಗೊಳಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಚೆಲುವರಾಯಸ್ವಾಮಿ ಪ್ರತಿಪಾದಿಸಿದರು.

    ಮನಃ ಪರಿವರ್ತನೆ, ಆತ್ಮವಿಶ್ವಾಸ ವೃದ್ಧಿ: ರೈತರ ಆತ್ಮಹತ್ಯೆಗೆ ನಾನಾ ಕಾರಣಗಳಿವೆ. ಮೃತ ರೈತರ ಕುಟುಂಬಕ್ಕೆ ಪರಿಹಾರ ಕೊಡುವುದು ಎಷ್ಟು ಮುಖ್ಯವೋ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಮನಃಪರಿವರ್ತನೆ ಮಾಡುವುದೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒತ್ತು ನೀಡಲಿದೆ. ಆತ್ಯಹತ್ಯೆ ಮನಸ್ಥಿತಿಯಿಂದ ರೈತರನ್ನು ಹೊರ ತಂದು ಬದುಕುವ ಉತ್ಸಾಹ ತುಂಬುವುದು ಅವಶ್ಯ. ಸರಳ ಬದುಕಿನ ಪಾಠವನ್ನು ತಿಳಿಹೇಳುವುದು ಇನ್ನೂ ಅಗತ್ಯ ಎಂದು ಅಭಿಪ್ರಾಯಪಟ್ಟರು.

    ಮಿತಿ ಮೀರಿದ್ದರೆ ತನಿಖೆ

    ಕೃಷಿ ಇಲಾಖೆಯಲ್ಲಿ ಈವರೆಗೆ ಸಣ್ಣಪುಟ್ಟ ಏರುಪೇರುಗಳಾಗಿದ್ದರೆ ಪರವಾಗಿಲ್ಲ. ಮಿತಿ ಮೀರಿದ್ದರೆ ತನಿಖೆಗೆ ವಹಿಸುವುದು ನಿಶ್ಚಿತ ಎಂದು ಕೃಷಿ ಸಚಿವರು ಹೇಳಿದರು.

    ಪರಿಹಾರ ಹೆಚ್ಚಳಕ್ಕೆ ಪ್ರಯತ್ನ

    ಕೇಂದ್ರ ಹಾಗೂ ರಾಜ್ಯದ ಪಾಲುಗಳ ಜತೆಗೆ ರೈತರು ಪಾವತಿಸುತ್ತಿರುವ ಬೆಳೆ ವಿಮೆ ಕಂತನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಹೊರೆ ಕಡಿಮೆ ಮಾಡಲು ಚಿಂತನೆ ನಡೆದಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು.

    ಬೆಳೆ ವಿಮೆಯಿಂದ ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಅನುಕೂಲವಾಗುತ್ತಿದೆ ಎಂಬುದು ಗಮನದಲ್ಲಿದೆ. ಈ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದು, ವರದಿ ಬಂದ ಬಳಿಕ ಕೇಂದ್ರ ಸರ್ಕಾರದ ಜತೆ ರ್ಚಚಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ರೈತರು ಪಾವತಿಸಬೇಕಾಗಿರುವ ಬೆಳೆ ವಿಮೆ ಕಂತು ಕಡಿಮೆ ಮಾಡುವುದು ಹಾಗೂ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

    10 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ

    ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಮ್ಮ ಸರ್ಕಾರ ರೈತರಿಗೆ 10 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಿದೆ. ಈ ಮೊದಲು 3 ಲಕ್ಷ ರೂ.ವರೆಗೆ ಮಾತ್ರ ಬಡ್ಡಿ ರಹಿತ ಸಾಲ ಸೌಲಭ್ಯವಿತ್ತು. ಸಾಲ ಮನ್ನಾ ಮಾಡಿದರೆ 25-50 ಲಕ್ಷ ರೂ. ಸಾಲ ಮನ್ನಾ ಆಗುತ್ತದೆ. ಅದಕ್ಕೂ ಮುಖ್ಯವಾಗಿ ಬೆಂಬಲ ಬೆಲೆ ಖರೀದಿ, ವೈಜ್ಞಾನಿಕ ಬೆಲೆ ನಿಗದಿ ಮತ್ತಿತರ ಹೆಚ್ಚು ಲಾಭ ತರುವ ಯೋಜನೆಗಳನ್ನು ರೈತರಿಗೆ ಕೊಟ್ಟರೆ ಸಾಲ ಮನ್ನಾ ಪ್ರಶ್ನೆಯೇ ಬರುವುದಿಲ್ಲ. ಗ್ಯಾರಂಟಿಗಳು ಹಾಗೂ ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಳದಿಂದ ರೈತರು ಸ್ವಾವಲಂಬಿಗಳಾಗಲು ಸಹಾಯವಾಗುತ್ತದೆ ಎಂದು ಸಚಿವರು ಹೇಳಿದರು.

    ಮಾಕೋನಹಳ್ಳಿ ಜಲಾಶಯಕ್ಕೆ ನೀರು

    ಮಂಡ್ಯ ಜಿಲ್ಲೆಯ ಕೆಆರ್​ಎಸ್ ಡ್ಯಾಂ 120 ಅಡಿ ತುಂಬಿದ ಮೇಲೆ ನೇರವಾಗಿ ತುಮಕೂರು ಜಿಲ್ಲೆ ಕುಣಿಗಲ್​ನ ಮಾಕೋನಹಳ್ಳಿ ಜಲಾಶಯಕ್ಕೆ ನೀರು ಹರಿಸುವ ಯೋಜನೆಯನ್ನು 15 ವರ್ಷ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ. ಚರ್ಚೆ ಹಂತದಲ್ಲೇ ನಿಂತು ಹೋಗಿತ್ತು. ಈಗ ಅದನ್ನು ಮರು ಪ್ರಸ್ತಾಪಿಸಬೇಕಿದೆ. ಈಗ ಆ ಯೋಜನೆಗೆ 6 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆ ಜಾರಿ ಮಾಡಿದರೆ ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿ ನಾಲ್ಕೈದು ಜಿಲ್ಲೆಗಳ ಅಂತರ್ಜಲ ವೃದ್ಧಿಯಾಗುತ್ತದೆ. ರೈತರಿಗೆ ವರದಾನವಾಗುತ್ತದೆ ಎಂದು ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

    ಕೃಷಿ ವಿಶ್ವವಿದ್ಯಾಲಯಗಳ ಸುಧಾರಣೆ ಹಿನ್ನೆಲೆಯಲ್ಲಿ ಮುಂದಿನ ವಾರ ಕುಲಪತಿಗಳು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು.
    | ಎನ್. ಚೆಲುವರಾಯಸ್ವಾಮಿ ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts