More

    ಅಕ್ರಮ ಗಣಿಯಿಂದ ಆಲೂರು ಹಾಳೂರು

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕುಂದಾಪುರ ತಾಲೂಕು ಆಲೂರು ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಗಣಿ ಮೂಲಕ ಅಪಖ್ಯಾತಿಗೆ ಒಳಗಾಗಿದೆ. ಒಂದು ಕಾಲದಲ್ಲಿ ಕುಂಬಾರಿಕೆಯಿಂದ ರಾಜ್ಯದ ಗಮನಸೆಳೆದಿದ್ದರೆ, ಈಗ ಕೆಂಪುಕಲ್ಲು ಗಣಿಯಿಂದಾಗಿ ಗಮನ ಸೆಳೆಯುತ್ತಿದೆ. ಆಲೂರು ಗಣಿ ವಿರುದ್ಧ ಮಕ್ಕಳ ಗ್ರಾಮಸಭೆ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಭೆಯಲ್ಲಿ ಮಕ್ಕಳು ಆಲೂರು ಹಾಳೂರಾಗದಂತೆ ಕಾಪಾಡಬೇಕು ಎನ್ನುವ ಒತ್ತಾಯಕ್ಕೆ ಜಿಲ್ಲಾಡಳಿತ ನಯಾಪೈಸೆ ಬೆಲೆ ಕೊಡಲಿಲ್ಲ.

    ಆಲೂರು, ಹರ್ಕೂರು ಸೇರಿ ಆಲೂರು ಗ್ರಾಮವಾಗಿದ್ದು, ವಂಡ್ಸೆ ಹೋಬಳಿ, ಬೈಂದೂರು ತಾಲೂಕು ಸೇರಿದೆ. ಸ್ಟೀಲ್, ಪ್ಲಾಸ್ಟಿಕ್ ಪ್ರವೇಶಕ್ಕೂ ಮುನ್ನ ಹೆಚ್ಚಿನ ಮನೆಯಲ್ಲಿ ಆರೂರು ಮಣ್ಣಿನ ಮಡಕೆ ಕುಡುಕೆಗಳನ್ನು ಬಳಸುತ್ತಿದ್ದರು. ಆಲೂರು ಮಡಕೆಗಳು ಗಟ್ಟಿ, ಹೆಚ್ಚು ಬಾಳಿಕೆ ಎಂಬ ಹೆಗ್ಗಳಿಕೆ ಪಡೆದಿತ್ತು. ಆಲೂರು ಮಡಕೆ ಖರೀದಿಸುವುದಕ್ಕಾಯೇ ಜನರ ಬರುತ್ತಿದ್ದರು. ಆಲೂರಲ್ಲಿ ಗಣಿ ಆರಂಭವಾದ ನಂತರ ಕುಂಬಾರಿಕೆ ವೃತ್ತಿ ಅವನತಿ ಹಾದಿ ಹಿಡಿಯಿತು.ಅಕ್ರಮ ಕಲ್ಲುಗಣಿ ಸಾಂಪ್ರದಾಯಿಕ ಗುಡಿಕೈಗಾರಿಕೆಯನ್ನು ಆಪೋಷನ ತೆಗೆದುಕೊಂಡಿದೆ.

    ಬೆಚ್ಚಿ ಬೀಳಿಸುವ ಸ್ಫೋಟ

    ಮೇಲ್ ಹೊಸೂರು, ಕೆಳಹೊಸೂರಿನ್ನಲಿ ಅವ್ಯಾಹತವಾಗಿ ಶಿಲೆಕಲ್ಲು ಗಣಿ ನಡೆಯುತ್ತದೆ. ಅತಿ ಹೆಚ್ಚು ಕೆಂಪುಕಲ್ಲು ಗಣಿ ಇರುವುದು ಬೈಂದೂರು ತಾಲೂಕಿನಲ್ಲಿ. ಶಿರೂರು ಗಡಿಯಿಂದ ಹಿಡಿದು, ಉಡುಪಿ ಗಡಿತನಕ ಕೆಂಪುಕಲ್ಲು ಗಣಿ ನಡೆಯುತ್ತಿದ್ದು, ಬೇಳೂರು, ಕೆದೂರು, ಮಂದಾರ್ತಿ, ಸಾಬ್ರಕಟ್ಟೆ, ಶಿರಿಯಾರ, ಹೊಸಕತ್ತೂರು, ಹಳ್ಳಾಡಿ, ಬಿದ್ಕಲ್‌ಕಟ್ಟೆ, ಕೊಕ್ಕರ್ಣೆ ಗ್ರಾಮದಲ್ಲಿ ಶಿಲೆಕಲ್ಲು ಗಣಿಗಳದ್ದೆ ದರ್ಬಾರ್. ಬೈಂದೂರು, ಗಂಗನಾಡು, ತೂದಳ್ಳಿ, ಇಡೂರು ಕುಂಜ್ಞಾಡಿ, ಹೊಸೂರು, ಮುದೂರು, ಕಾನ್ಕಿ, ಸೆಳಕೋಡು, ವಂಡ್ಸೆ, ಅಜ್ರಿ, ಬೆಳ್ಳಾಲು, ಕೆರಾಡಿ, ಹೊಸಂಗಡಿ, ಯಡಮೊಗೆ, ಕೆರ್ಕಾಲ್ ಕೆಂಪುಕಲ್ಲು ಗಣಿ ಯಂತ್ರದ್ದೇ ಸದ್ದು. ಮೂರು ವರ್ಷದ ಹಿಂದೆ ಗಂಗನಾಡಲ್ಲಿ ಭೀಕರ ಸ್ಪೋಟದ ಶಬ್ದ ಕೇಳಿಸಿ ಪರಿಸರದ ಜನರು ಭಯಭೀತರಾಗಿ ಮನೆಯಿಂದ ಹೊರಕ್ಕೆ ಬಂದಿದ್ದರು. ಭೂವಿಜ್ಞಾನಿಗಳು ಶಬ್ದದ ಅನ್ವೇಷಣೆ ನಂತರ ಖಚಿತಪಡಿಸಿದ ಸುದ್ದಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಅಕ್ರಮ ಗಣಿ ಹಾಗೂ ಸಾಗಾಟಕ್ಕಾಗಿ ಬಳಿಸಿದ ಭಾರಿ ವಾಹನಗಳ ದಾಂಗುಡಿಗೆ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಪಶ್ಚಿಮಘಟ್ಟದ ಬುಡದಲ್ಲಿ ಗಣಿ ಹಾಗೂ ಭಾರಿ ವಾಹನಗಳ ಸಂಚಾರ ಭೂಮಿಯ ಅಸ್ತಿತ್ವಕ್ಕೆ ಆಪಾಯ ತರುವ ಸಂಭವವಿದೆ ಎಂದು ಎಚ್ಚರಿಸಿದ್ದರು. ನಂತರ ಅಧಿಕಾರಿಗಳು ಚುರುಕಾಗಿದ್ದರಿಂದ ಸ್ವಲ್ಪದಿನದ ಮಟ್ಟಿಗೆ ಗಣಿ ಸ್ತಬ್ದವಾಗಿತ್ತು.

    Alooru Mining 2
    ಸರ್ಕಾರಿ ಭೂಮಿ ಮಂಜೂರು ಮಾಡಿಕೊಂಡು ಶೆಡ್ ಕಟ್ಟಿ ಅಕ್ರಮ ಕೆಂಪುಕಲ್ಲು ಗಣಿ ನಡೆಸುತ್ತಿರುವುದು.

    ಅಕ್ರಮ ಗಣಿ ವಿರುದ್ಧ ಮಾತನಾಡುವುದಕ್ಕೂ ಭಯ

    ಅಕ್ರಮ ಕೆಂಪು, ಶಿಲೆಕಲ್ಲು, ಮರಳು, ಗಾಂಜಾ ವಿರುದ್ಧ ಮಾತನಾಡುವುದಕ್ಕೂ ಜನ ಹೆದರುತ್ತಾರೆ. ಅಕ್ರಮ ಗಣಿಯಿಂದಾಗುವ ಸಮಸ್ಯೆ, ರಾತ್ರಿ ನಡೆಯುವ ಅಕ್ರಮ ಮರಳು ಸಮಸ್ಯೆ ಬಗ್ಗೆ ಕೇಳಿದರೆ ಪುಟಗಟ್ಟಲೆ ಮಾತನಾಡುತ್ತಾರೆ. ನಿಮ್ಮ ಹೇಳಿಕೆ ತಗೋಬಹುದಾ ಅಂದ್ರೆ ಪ್ಲೀಸ್ ಬೇಡ. ನಮ್ಮನ್ನ ಟಾರ್ಗೆಟ್ ಮಾಡುತ್ತಾರೆ. ನಾವು ಇದೇ ಊರಲ್ಲಿ ಬದುಕಬೇಕಿದ್ದು, ಯಾವ ಅಧಿಕಾರಿಗಳಾಗಲಿ ಇಲಾಖೆಯಾಗಲಿ ರಕ್ಷಣೆಗೆ ಬರೋದಿಲ್ಲ. ಆಲೂರಲ್ಲಿ ಒಂದಿಬ್ಬರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಿವಾನಿಗೆ ಪಡೆದಿದ್ದು, ಮತ್ತೆಲ್ಲರೂ ಕಲ್ಲುಕಿತ್ತು, ಸಾಗಾಟದ ತನಕ ಅಕ್ರಮ. ಇಷ್ಟು ದೊಡ್ಡಮಟ್ಟದ ಅಕ್ರಮ ನಡೆಸಿ ಬಚಾವಾಗುವ ಗಣಿ ಧಣಿಗಳು ನಮ್ಮನ್ನು ಸುಮ್ಮನೆ ಬಿಟ್ಟಾರಾ? ದಯವಿಟ್ಟು ನಮ್ಮ ಸ್ಟೇಟ್ಮೆಂಟ್ ತಗೋಬೇಡಿ ಅಂತ ಅಂಗಲಾಚುತ್ತಾರೆ. ಆಲೂರಲ್ಲಿ ನಮ್ಮ ಮುಂದಿನ ಜನಾಂಗ ಬದುಕಬೇಕು ಎನ್ನುವ ಭರವಸೆಯಲ್ಲಿ ಅಕ್ರಮದ ವಿರುದ್ಧ ನಾವು ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇಂತವರೇ ದೂರು ನೀಡಿದ್ದಾರೆ ಎಂದು ಅಧಿಕಾರಿಗಳೇ ಗಣಿಧಣಿಗಳಿಗೆ ಮಾಹಿತಿ ನೀಡುತ್ತಾರೆ. ಅಕ್ರಮ ಗಣಿ ನಡೆಸುವವರ ಬಳಿ ಹಣ, ಜನ, ತೋಳ್ಬಲ ಇರುವುದರಿಂದ ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತಾರೆ. ಗಣಿಯಿಂದ ಆಲೂರು ಹಾಳೂರಾಗುತ್ತಿದ್ದು, ಗುಡಿ ಕೈಗಾರಿಕೆ, ಕೃಷಿ ವರ್ತುಲ ಏರುಪೇರು ಮಾಡಿದೆ. ಅಕ್ರಮ ಗಣಿ ಕೇವಲ ಸರ್ಕಾರಿ ಜಾಗದಲ್ಲಷ್ಟೇ ನಡೆಯುತ್ತಿಲ್ಲ, ಡೀಮ್ಡ್, ರಕ್ಷಿತಾರಣ್ಯ, ವೈಲ್ಡ್‌ಲೈಫ್ ಭೂಮಿಯಲ್ಲೂ ನಡೆಯುತ್ತಿದೆ.

    ಕುಂದಾಪುರ ತಹಸೀಲ್ದಾರ್ ಆಗಿ ಇತ್ತೀಚೆಗೆ ಚಾರ್ಜ್ ತೆಗೆದುಕೊಂಡಿದ್ದು, ಚುನಾವಣೆ ಹಿನ್ನೆಲೆ ಬ್ಯುಸಿಯಾಗಬೇಕಾಯಿತು. ಇನ್ನೂ ಕ್ಷೇತ್ರದ ಸಮಗ್ರ ಮಾಹಿತಿ ಆಗಿಲ್ಲ. ಕೆಂಪುಕಲ್ಲು ಗಣಿ ನಡೆಯು ಪ್ರದೇಶದ ವಿಎ ಹಾಗೂ ಆರ್‌ಐ ಮೂಲಕ ಮಾಹಿತಿ ಪಡೆದು, ಅಕ್ರಮ ಗಣಿ ವಿರುದ್ಧ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ.

    -ಶೊಭಾಲಕ್ಷ್ಮೀ ಎಚ್.ಎಸ್. ತಹಸೀಲ್ದಾರ್ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts