ಹೈದರಾಬಾದ್: ರಾಜಮೌಳಿ ಚಿತ್ರ ಮಾಡುತ್ತಾರೆ ಎಂದರೆ, ಏನು ಕಥೆ ಎಂದು ಯಾರೂ ಕೇಳುವುದಿಲ್ಲ. ಆದರೆ, ಚಿತ್ರದ ಬಜೆಟ್ ಎಷ್ಟು ಎಂದು ತಪ್ಪದೇ ಕೇಳುತ್ತಾರೆ. ಅದಕ್ಕೆ ಕಾರಣ, ರಾಜಮೌಳಿ ನಿರ್ದೇಶನದ ಚಿತ್ರಗಳ ಗಾತ್ರ. ಅವರ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ಬಜೆಟ್ 350 ಕೋಟಿ ಎಂದು ಹೇಳಲಾಗುತ್ತಿದ್ದು, ಇದು ಭಾರತದಲ್ಲೇ ಅತ್ಯಂತ ದೊಡ್ಡ ಬಜೆಟ್ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಬಾಲಿವುಡ್ ಮಂದಿ ಕಿರುಕುಳ ಕೊಟ್ಟರೆ ದೇಶ ಬಿಡುತ್ತಾರಂತೆ ಕೆಆರ್ಕೆ
ಈಗ ತಮ್ಮದೇ ದಾಖಲೆಯನ್ನು ತಾವೇ ಮುರಿಯುವುದಕ್ಕೆ ಮುಂದಾಗುತ್ತಿದ್ದಾರೆ ರಾಜಮೌಳಿ. ಮಹೇಶ್ ಬಾಬು ಅಭಿನಯದಲ್ಲಿ ಅವರೊಂದು ಚಿತ್ರ ನಿರ್ದೇಶಿಸಿರುವ ವಿಷಯ ಗೊತ್ತಲ್ಲ? ಆ ಚಿತ್ರವು ಬಜೆಟ್ ವಿಚಾರದಲ್ಲಿ ‘ಆರ್ಆರ್ಆರ್’ ಚಿತ್ರವನ್ನೂ ಮೀರಿಸುತ್ತದೆ ಎಂದು ಹೇಳಲಾಗುತ್ತಿದೆ.
ಮಹೇಶ್ ಬಾಬು ಅಭಿನಯದಲ್ಲಿ ರಾಜಮೌಳಿ ಯಾವ ತರಹದ ಚಿತ್ರ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಕಥೆ ಏನು ಎಂಬುದು ಯಾರಿಗೂ ಬಹಿರಂಗ ಮಾಡಿಲ್ಲ. ಆದರೆ, ಚಿತ್ರದ ಬಜೆಟ್ ಮಾತ್ರ ‘ಆರ್ಆರ್ಆರ್’ಗಿಂತಲೂ ಹೆಚ್ಚಾಗಿರುತ್ತದೆ ಎಂಬ ಸುದ್ದಿಯೊಂದು ಎರಡು ದಿನಗಳಿಂದ ಕೇಳಿಬರುತ್ತಲೇ ಇದೆ. ಬಜೆಟ್ ಯಾವಾಗಲೂ ಕಥೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಚಿತ್ರವು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತದೆ ಎಂದರೆ, ಈ ಬಾರಿ ಎಂಥಾ ಕಥೆ ಮಾಡಿಕೊಂಡಿದ್ದಾರೆ ರಾಜಮೌಳಿ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇದನ್ನೂ ಓದಿ: ದರ್ಶನ್ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್
ಅಂದಹಾಗೆ, ‘ಆರ್ಆರ್ಆರ್’ ಚಿತ್ರವು ಅಕ್ಟೋಬರ್ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ಇದೀಗ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಗಿದೆ. ಕಾರಣ, ಚಿತ್ರದ ಚಿತ್ರೀಕರಣ ಇನ್ನಷ್ಟೇ ಪೂರ್ತಿಯಾಗಬೇಕಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಸಾಕಷ್ಟು ಇದೆಯಂತೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ರಹಸ್ಯವನ್ನು ಚಿತ್ರತಂಡದವರು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.