ಜಕಾರ್ತಾ: ಮಾಜಿ ಪ್ರಿಯತಮನ ಮೇಲಿನ ದ್ವೇಷಕ್ಕಾಗಿ ಆತನನ್ನು ಕೊಲ್ಲಲು ಉಪಾಯ ಮಾಡಿದ ಯುವತಿಯೊಬ್ಬಳು ಚಿಕನ್ ಖಾದ್ಯದಲ್ಲಿ ವಿಷ ಸೇವಿಸಿ ಅದನ್ನು ಪಾರ್ಸಲ್ ಮಾಡಿದ್ದು, ದುರಾದೃಷ್ಟವಶಾತ್ ಅದನ್ನು ಡೆಲಿವರಿ ಮಾಡಬೇಕಿದ್ದ ವ್ಯಕ್ತಿಯ ಮಗ ಸಾವನ್ನಪ್ಪಿರುವ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.
ನೀನಿ ನೂರ್ಜಮಾನ್(25) ಹೆಸರಿನ ಯುವತಿ ಈ ಹಿಂದೆ ಟಾಮಿ ಹೆಸರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಪ್ರೀತಿ ಮುರಿದುಬಿದ್ದಿದೆ. ಅದಾದ ಮೇಲೆ ಆತ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿ ಸಂಸಾರವನ್ನೂ ಆರಂಭಿಸಿದ್ದಾನೆ. ತನಗೆ ಕೈ ಕೊಟ್ಟು ಬೇರೆಯವಳೊಂದಿಗೆ ಮದುವೆಯಾದ ಟಾಮಿಗೆ ಬುದ್ಧಿ ಕಲಿಸಬೇಕೆಂದುಕೊಂಡಿದ್ದ ನೀನಿ ನೂರ್ಜಮಾನ್ ಉಪಾಯವೊಂದನ್ನು ಮಾಡಿದ್ದಾಳೆ. ಚಿಕನ್ಗೆ ವಿಷ ಸೇರಿಸಿ, ಖಾದ್ಯವೊಂದನ್ನು ತಯಾರಿಸಿ ಅದನ್ನು ಪಾರ್ಸಲ್ ಪ್ಯಾಕ್ ಮಾಡಿದ್ದಾಳೆ. ಬೆಂಡಿಯಾಮಾನ್ ಹೆಸರಿನ ಡೆಲಿವರಿ ಬಾಯ್ನ ಕೈಗೆ ಅದನ್ನು ಕೊಟ್ಟು ಟಾಮಿಯ ಅಡ್ರೆಸ್ಗೆ ಕೊಟ್ಟು ಬರುವಂತೆ ತಿಳಿಸಿದ್ದಾಳೆ.
ಬೆಂಡಿಯಾಮಾನ್ ಟಾಮಿ ಮನೆ ಎದುರಿಗೆ ಹೋದಾಗ ಟಾಮಿಯ ಹೆಂಡತಿ ಬಾಗಿಲು ತೆರೆದಿದ್ದಾಳೆ. ನಾವೇನನ್ನೂ ಆರ್ಡರ್ ಮಾಡಿಲ್ಲ, ಆದರೂ ಹೇಗೆ ಪಾರ್ಸಲ್ ಬಂದಿದೆ ಎಂದು ಗೊಂದಲಕ್ಕೀಡಾದ ದಂಪತಿ ಆ ಪಾರ್ಸಲ್ನ್ನು ನೀನೇ ತೆಗೆದುಕೊಂಡು ಹೋಗಿ ಅದರೊಳಗಿರುವುದನ್ನು ನೀನೇ ತಿನ್ನು ಎಂದು ಬೆಂಡಿಯಾಮಾನ್ಗೆ ತಿಳಿಸಿದ್ದಾರೆ.
ಅದರಂತೆ ಮನೆಗೆ ಬಂದ ಬೆಂಡಿಯಾಮಾನ್ ಪಾರ್ಸಲ್ನಲ್ಲಿದ್ದ ಚಿಕನ್ ಅನ್ನು ತನ್ನ ಹೆಂಡತಿ ಮತ್ತು ಮಗನಿಗೆ ಕೊಟ್ಟಿದ್ದಾನೆ. ಅದನ್ನು ತಿಂದ ಅವರಿಬ್ಬರು ವಾಂತಿ ಮಾಡಲು ಆರಂಭಿಸಿದ್ದಾರೆ. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಬೆಂಡಿಯಾಮಾನ್ನ ಹೆಂಡತಿ ಮಾತ್ರ ಉಳಿದು, ಮಗ ಸಾವನ್ನಪ್ಪಿದ್ದಾನೆ. ಯಾರದ್ದೋ ದ್ವೇಷಕ್ಕೆ ಯಾರೋ ಬಲಿಯಾದಂತಾಗಿದೆ. (ಏಜೆನ್ಸೀಸ್)
ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ