More

    ಎಂಟು ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ತೆರೆ: ಮಾಜಿ ಸಿಎಂ ಯಡಿಯೂರಪ್ಪ ಸೇರಿ ಗಣ್ಯಾತಿಗಣ್ಯರು ಭಾಗಿ

    ಚಿಕ್ಕಬಳ್ಳಾಪುರ: ಅದ್ದೂರಿ ಸೆಟ್​ನಲ್ಲಿ ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್​ವುಡ್ ಖ್ಯಾತ ಗಾಯಕರ ಹಾಡುಗಾರಿಕೆ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಪ್ರದರ್ಶನ, ಬೃಹತ್ ಮೆರವಣಿಗೆಗಳು, ದಾಖಲೆ ಪ್ರಮಾಣದಲ್ಲಿ ಸ್ಪರ್ಧೆಗಳು, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿ ಗಣ್ಯರು, ನಟ-ನಟಿಯರ ಭಾಗಿಯೊಂದಿಗೆ ಸಂಭ್ರಮದಿಂದ ಎಂಟು ದಿನಗಳ ದಿನ ನಡೆದ ಚಿಕ್ಕಬಳ್ಳಾಪುರ ಉತ್ಸವಕ್ಕೆ ಶನಿವಾರ ತೆರೆ ಬಿದ್ದಿದೆ.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಕೆ.ಸುಧಾಕರ್ ಫೌಂಡೇಷನ್​ನಿಂದ ಜ.7ರಿಂದ ಜ.14ರವರೆಗಿನ ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಮತ್ತು ಕಾರ್ಕಳ ಉತ್ಸವ ಮಾದರಿಯ ಉತ್ಸವವು ಪ್ರತಿದಿನವೂ ಅಬ್ಬರಿಸಿತು. ಇಲ್ಲಿನ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯ ಗೋಪುರ, ನಂದಿಯ ಶ್ರೀ ಭೋಗ ನಂದೀಶ್ವರ, ಪಂಚಗಿರಿಗಳ ಸಾಲು ಸೇರಿ ಮನಮೋಹಕ ದೃಶ್ಯಗಳನ್ನು ಹೊಂದಿರುವ ವೈಭವದ ವೇದಿಕೆಯಲ್ಲಿ ಜನರಿಗೆ ಆಕರ್ಷಕ ಕಾರ್ಯಕ್ರಮಗಳೊಂದಿಗೆ ರಸದೌತಣ ಉಣ ಬಡಿಸಿತು. ವಿದ್ಯುತ್ ದೀಪಾಲಂಕಾರದಿಂದ ಝುಗಮಗಿಸುತ್ತಿದ್ದ ನಗರದ ಪ್ರಮುಖ ರಸ್ತೆಗಳು ಸಂಭ್ರಮವನ್ನು ಸಾರಿ ಹೇಳುವಂತಿದ್ದವು. ಸಾವಿರಕ್ಕೂ ಹೆಚ್ಚು ಕಲಾ ತಂಡಗಳು, ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಬಿಂಬಿಸುವ 21 ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆದವು.

    ಅಭಿಮಾನಿಗಳ ನಡುವೆ ನಟರು: ಇದೇ ಮೊದಲ ಬಾರಿಗೆ ನಟರ ದೊಡ್ಡ ದಂಡೇ ಚಿಕ್ಕಬಳ್ಳಾಪುರಕ್ಕೆ ಆಗಮಿಸಿತ್ತು. ನಟರಾದ ಕಿಚ್ಚ ಸುದೀಪ್, ದುನಿಯಾ ವಿಜಯ್, ರಿಷಬ್ ಶೆಟ್ಟಿ, ಡಾಲಿ ಧನಂಜಯ, ರಮ್ಯಾ, ಪ್ರಣೀತಾ, ಮಾನ್ವಿತಾ ಕಾಮತ್, ಸಪ್ತಮಿಗೌಡ, ಆಲಿ, ಅನಸೂಯಾ, ನಿಶ್ಚಿಕಾ ನಾಯ್ಡು ಸೇರಿ ಖ್ಯಾತ ನಟ-ನಟಿಯರು ಅಭಿಮಾನಿಗಳನ್ನು ಖುಷಿಪಡಿಸಿದರು.

    ಖ್ಯಾತ ಗಾಯಕರ ಪ್ರದರ್ಶನ: ಪ್ರತಿದಿನ ಗಾಯಕರ ಸಿನಿಮಾ ಹಾಡುಗಳ ಗಾಯನ ಮೋಡಿಯೇ ಮಂತ್ರ ಮುಗ್ಧರನ್ನಾಗಿಸಿತು. ಗಾಯಕರಾದ ಶಂಕರ್ ಮಹದೇವನ್, ಸೋನು ನಿಗಮ್ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷನ್, ಅನನ್ಯಾ ಭಟ್, ಮಂಗ್ಲಿ, ವಾಸುಕಿ ವೈಭವ್, ಚಂದನ್ ಶೆಟ್ಟಿ ಹಾಡುಗಳನ್ನು ಹಾಡಿದರು.

    ದಾಖಲೆಯ ಸ್ಪರ್ಧೆಗಳು: ಚಿಕ್ಕಬಳ್ಳಾಪುರ ಉತ್ಸವವು ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ದಾಖಲೆ ಸೃಷ್ಟಿಸಿದೆ. ಕಾರ್ಯಕ್ರಮದ ಭಾಗವಾಗಿ ಜಿಪಂ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಕ್ರೀಡೆಗಳನ್ನೊಳಗೊಂಡ ವಿವಿಧ ಕ್ರೀಡಾಕೂಟಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಸ್ತು ಪ್ರದರ್ಶನ, ರಕ್ತದಾನ ಶಿಬಿರ, ಆಹಾರಮೇಳ, ನಿತ್ಯ 7 ದಿನ ಲಸಿಕಾಕರಣ, ಆರೋಗ್ಯ ಮೇಳ, ಫಲಪುಷ್ಪ, ಗ್ರಾಹಕರ ವಸ್ತು ಪ್ರದರ್ಶನ, ಮಾದರಿ ಗ್ರಾಮದ ಆಕೃತಿ ನಿರ್ವಣ, ಸರ್ಕಾರ ಸಾಧನೆಗಳ ವಸ್ತು ಪ್ರದರ್ಶನ, ಊರ ಹಬ್ಬ, ಗಾಳಿಪಟ, ಮಹಿಳೆಯರಿಗೆ ಅಡುಗೆ, ಯಕ್ಷಗಾನ, ಕುಸ್ತಿ, ಹಸು ಹಾಗೂ ಎತ್ತುಗಳ ಅಲಂಕಾರ, ಎತ್ತಿನಗಾಡಿ ಅಲಂಕಾರ, ರಂಗೋಲಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಇನ್ನು ಬಹುಮಾನ ವೆಚ್ಚವೇ 1 ಕೋಟಿ ರೂಪಾಯಿ ಘೊಷಿಸಲಾಗಿತ್ತು.

    ಮುಂಬರುವ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸಮಾನವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಲು ಕ್ರಮ ಕೈಗೊಳ್ಳಲಾಗುವುದು. ಚಿಕ್ಕಬಳ್ಳಾಪುರವು ರಾಜಧಾನಿ ಸಮೀಪದಲ್ಲಿದ್ದರೂ ಹಿಂದುಳಿದ ಜಿಲ್ಲೆ ಎಂಬ ಭಾವನೆ ಹಲವರಲ್ಲಿತ್ತು. ರೈತರ ದುಡಿಮೆಯಿಂದ, ಯುವಕರ ಜಾಣ್ಮೆಯಿಂದ ಜಿಲ್ಲೆ ಈಗ ಎಲ್ಲ ರೀತಿಯಲ್ಲೂ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.

    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

    ಹಾಡಿದ ಸುಧಾಕರ್, ಕುಣಿದ ರಮ್ಯಾ: ನಟ ರಾಜ್​ಕುಮಾರ್ ನಟಿಸಿರುವ ಆಕಸ್ಮಿಕ ಸಿನಿಮಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರೊಂದಿಗೆ ಸಚಿವ ಡಾ ಕೆ.ಸುಧಾಕರ್ ಹಾಡಿ ಗಮನ ಸೆಳೆದರು. ನೀನೇ ನೀನೇ, ಮನಸೆಲ್ಲ ನೀನೇ ಹಾಡಿಗೆ ನಟಿ ರಮ್ಯಾ, ಸಖತ್ತಾಗವಳೇ, ಸುಮ್ಮನೆ ನಗ್ತಾಳೆ ಹಾಡಿಗೆ ನಟಿ ಪ್ರಣೀತಾ ಸುಭಾಷ್ ಕುಣಿದು ಅಭಿಮಾನಿಗಳನ್ನು ಖುಷಿಪಡಿಸಿದರು.

    ಹರಿದು ಬಂದ ಜನ ಸಾಗರ: ನೆಚ್ಚಿನ ನಟರು, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ದೊಡ್ಡ ಜನಸಮೂಹ ಬಂದಿದ್ದು, ಇದಕ್ಕೆ ಸ್ವತಃ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿನಿತ್ಯ ಬೆಳಗ್ಗೆ ವಿವಿಧ ಸ್ಪರ್ಧೆಗಳು, ರಾತ್ರಿ 7ರಿಂದ ಕಲಾ ಪ್ರದರ್ಶನ, ನಟರು, ಕಲಾವಿದರು ಮತ್ತು ಗಣ್ಯರ ವೇದಿಕೆ ಭಾಷಣ ಸೇರಿದಂತೆ ರಾತ್ರಿ 11ರವರೆಗೆ ಕಾರ್ಯಕ್ರಮಗಳು ನಡೆದವು. ವಿಶಾಲವಾದ ಮೈದಾನದಲ್ಲಿ ದಟ್ಟವಾದ ಮಂಜಿನ ಚಳಿ ವಾತಾವರಣದಲ್ಲೂ ಜನರು ಕುಳಿತು ವೀಕ್ಷಿಸಿದ್ದು ವಿಶೇಷವಾಗಿತ್ತು.

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

    ಗ್ರಾಹಕರಿಬ್ಬರ ಖಾತೆಯಿಂದಲೇ ಕೋಟಿಗಟ್ಟಲೆ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡ ಬ್ಯಾಂಕ್ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts