More

    ಸಂಸತ್​ನಲ್ಲಿ ಕೋಲಾಹಲ ಒಂದೇ ದಿನ 78 ಸಂಸದರು ಸಸ್ಪೆಂಡ್; ಅಮಾನತಿನಲ್ಲಿ ದಾಖಲೆ ಬರೆದ ಉಭಯ ಸದನಗಳು

    ರಾಘವ ಶರ್ಮ ನಿಡ್ಲೆ, ನವದೆಹಲಿ
    ರಾಜ್ಯಸಭೆಯ 45 ಮತ್ತು ಲೋಕಸಭೆಯ 33 ಸಂಸದರ ಒಂದೇ ದಿನ ಅಮಾನತುಗೊಳ್ಳುವ ಮೂಲಕ ದೇಶದ ಸಂಸತ್ತು ಅಚ್ಚರಿಯ ಮತ್ತು ಭಾರಿ ಅನಿರೀಕ್ಷಿತ ಕ್ಷಣಗಳಿಗೆ ಸೋಮವಾರ ಸಾಕ್ಷಿಯಾಗಿದೆ.

    ಸದನದಲ್ಲಿ ಶಾಂತಿ ಕಾಪಾಡಬೇಕು ಮತ್ತು ಕಲಾಪ ನಡೆಸಲು ಸಹಕಾರ ನೀಡಬೇಕು ಎಂದು ಪದೇಪದೆ ಎಚ್ಚರಿಸಿದರೂ, ಹದ್ದುಮೀರಿ ವರ್ತಿಸಿದ ಕಾರಣಕ್ಕಾಗಿ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಒಟ್ಟು 78 ಸಂಸದರನ್ನು ಅಮಾನತುಗೊಳಿಸಿದ್ದಾರೆ. ಶುಕ್ರವಾರ ಲೋಕಸಭೆಯ 13 ಮತ್ತು ರಾಜ್ಯಸಭೆಯ ಓರ್ವ ಸಂಸದರನ್ನು ಅಮಾನತು ಮಾಡಲಾಗಿತ್ತು. ಇಂದು 78 ಮಂದಿ ಅಮಾನತಾಗುವ ಮೂಲಕ, ಚಳಿಗಾಲದ ಅಧಿವೇಶನದಲ್ಲಿ ಆಮಾನತುಗೊಂಡ ಸಂಸದರ ಒಟ್ಟು ಸಂಖ್ಯೆ 92ಕ್ಕೆ ಏರಿದೆ. ಅಲ್ಲಿಗೆ, ಲೋಕಸಭೆಯಿಂದ 46 ರಾಜ್ಯಸಭೆಯಿಂದ 46 ಸಂಸದರು ಕಲಾಪದಿಂದ ಹೊರಹಾಕಲ್ಪಟ್ಟಿದ್ದಾರೆ. ರಾಜ್ಯಸಭೆಯ 45 ಸಂಸದರಲ್ಲಿ 34 ಸಂಸದರು ಉಳಿದ 4 ದಿನಗಳ ಕಾಲ ಕಲಾಪಕ್ಕೆ ಬರುವಂತಿಲ್ಲ. ಉಳಿದ 11 ಸಂಸದರ ನಡವಳಿಕೆ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಸಂಸತ್ತಿನ ವಿಶೇಷಾಧಿಕಾರ ಸಮಿತಿಗೆ ಸೂಚಿಸಲಾಗಿದ್ದು, ಅವರು ವರದಿ ಸಲ್ಲಿಸುವ ತನಕ ಅಮಾನತು ಮುಂದುವರಿಯಲಿದೆ. ಲೋಕಸಭೆಯ ಕಾಂಗ್ರೆಸ್ ಸದಸ್ಯರಾದ ಕೆ. ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೀಕ್ ಸ್ಪೀಕರ್ ಪೀಠದ ಮೇಲೆ ಹತ್ತಿ ಘೋಷಣೆಗಳನ್ನು ಕೂಗಿದರು. ಅವರ ವಿರುದ್ಧವೂ ವಿಶೇಷಾಧಿಕಾರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ. 1982ರ ಬಳಿಕ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರು ಅಮಾನತುಗೊಂಡಿದ್ದಾರೆ. 1982ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಒಂದೇ ದಿನ 63 ಸಂಸದರನ್ನು ಅಮಾನತುಗೊಳಿಸಲಾಗಿತ್ತು.

    ಡಿ.13ರಂದು ಲಖನೌ ಮೂಲದ ಸಾಗರ್ ಶರ್ಮ ಮತ್ತು ಮೈಸೂರಿನ ಮನೋರಂಜನ್ ಸಂಸತ್ತಿನ ಭದ್ರತೆ ಬೇಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಒತ್ತಾಯಿಸುತ್ತಿವೆ. ಅವರು ಹೇಳಿಕೆ ನೀಡದೆ ನಾವು ಕಲಾಪ ನಡೆಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದವು. ಎರಡನೆಯ ದಾಗಿ, ಅಮಿತ್ ಷಾ ಹೇಳಿಕೆ ಬಳಿಕ ಈ ಬಗ್ಗೆ ವಿಸõತ ಚರ್ಚೆ ನಡೆಯಬೇಕು ಎಂದೂ ಬೇಡಿಕೆ ಇಡಲಾಗಿತ್ತು. ಭದ್ರತಾ ಲೋಪದ ಘಟನೆಯ 2 ದಿನದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರೂ, ವಿಪಕ್ಷಗಳು ಅದರಿಂದ ಸಮಾಧಾನಗೊಂಡಿರಲಿಲ್ಲ. ಹೀಗಾಗಿ, ಎರಡೂ ಸದನಗಳಲ್ಲಿ ಗದ್ದಲ ಮುಂದುವರಿದಿತ್ತು.

    ಭಿತ್ತಿಪತ್ರ ಹಿಡಿದಿದ್ದಕ್ಕೆ ಅಸಮಾಧಾನ: ಕೇಂದ್ರದ ವಿರುದ್ಧ ಘೊಷಣೆ ಕೂಗಿ, ಉತ್ತರ ಕೇಳುವ ತಂತ್ರಗಾರಿಕೆ ಅನುಸರಿಸಿದ್ದ ವಿಪಕ್ಷಗಳು ಸೋಮವಾರ ಕಲಾಪ ನಡೆಸಲು ಬಿಡಲಿಲ್ಲ. ಇದರಿಂದ ಮತ್ತಷ್ಟು ವ್ಯಗ್ರಗೊಂಡ ಎರಡೂ ಸದನಗಳ ಮುಖ್ಯಸ್ಥರು, ಭಿತ್ತಿಪತ್ರ ಹಿಡಿದ, ಘೊಷಣೆ ಕೂಗಿದ ಎಲ್ಲರನ್ನೂ ಅಮಾನತುಗೊಳಿಸುವ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರ ಸಚಿವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕೆಂಡಕಾರಿವೆ. ಸದನದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಹಾಗಿಲ್ಲ ಎಂಬ ನಿರ್ಧಾರ ಕೈಗೊಂಡ ಹೊರತಾಗಿಯೂ, ವಿಪಕ್ಷ ಸಂಸದರು ಉದ್ದೇಶಪೂರ್ವಕವಾಗಿ ಲೋಕಸಭೆ ಸ್ಪೀಕರ್ ಮತ್ತು ಸಭಾಪತಿಯನ್ನು ಅವಮಾನಿಸಿದ್ದಾರೆ. ಹೀಗಾಗಿ, ಅಮಾನತುಗೊಳಿಸುವುದು ಅನಿವಾರ್ಯವಾಯ್ತು ಎಂದು ರಾಜ್ಯಸಭೆ ಬಿಜೆಪಿ ನಾಯಕ ಪಿಯೂಷ್ ಗೋಯಲ್ ವಿವರಣೆ ನೀಡಿದ್ದಾರೆ. ಅಮಾನತುಗೊಂಡ ಸಂಸದರು ಮಂಗಳವಾರ ಸಂಸತ್ತಿಗೆ ಬರಲಿದ್ದು, ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮುಂದುವರಿಸಲಿದ್ದಾರೆ.

    1989ರಲ್ಲಿ 63 ಮಂದಿ ಸಸ್ಪೆಂಡ್ ಏಕೆ?: 1989ರ ಮಾರ್ಚ್​ನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಒಂದೇ ದಿನ 63 ವಿಪಕ್ಷ ಸಂಸದರನ್ನು ಅಮಾನತು ಮಾಡಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಕುರಿತು ನ್ಯಾಯಮೂರ್ತಿ ಎಂ.ಪಿ. ಥಕ್ಕರ್ ನೇತೃತ್ವದ ತನಿಖಾ ಆಯೋಗದ ವರದಿ ಮಂಡನೆಗೆ ವಿರೋಧಿಸಿದ್ದ 63 ಸಂಸದರನ್ನು ಲೋಕಸಭೆಯಲ್ಲಿ 3 ದಿನದ ಮಟ್ಟಿಗೆ ಅಮಾನತು ಮಾಡಲಾಗಿತ್ತು. ಥಕ್ಕರ್ ತನಿಖಾ ಸಮಿತಿಯು ಇಂದಿರಾ ಗಾಂಧಿಯವರ ವಿಶೇಷ ಸಹಾಯಕ ಆರ್.ಕೆ. ಧವನ್ ಪಾತ್ರದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಧವನ್ ಕೂಡ ಪ್ರಧಾನಿ ರಾಜೀವ್ ಗಾಂಧಿ ತಂಡದ ಭಾಗವಾಗಿರುವುದರಿಂದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಧವನ್ ನಂತರ ಕಾಂಗ್ರೆಸ್ ಸೇರಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು.

    ವಿಪಕ್ಷ ಸಂಸದರಿಗೆ ಪತ್ರ: ಶುಕ್ರವಾರ 14 ಸಂಸದರ ಅಮಾನತು ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷ ಸಂಸದರಿಗೆ ಪತ್ರ ಬರೆದು, ಕಲಾಪಕ್ಕೆ ಸಹಕಾರ ನೀಡುವಂತೆ ಮತ್ತು ಭದ್ರತೆ ಭೇದಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಇದನ್ನು ರಾಜಕೀಯಗೊಳಿಸಬಾರದು ಎಂದು ಮನವಿ ಮಾಡಿದ್ದರು. ಇದಕ್ಕೆ ಪತ್ರಮುಖೇನ ಉತ್ತರಿಸಿದ್ದ ಲೋಕಸಭೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಸಂಸದರು ಜ್ವಲಂತ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಅವರ ಅಮಾನತು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಆದರೆ, ಸ್ಪೀಕರ್ ಓಂ ಬಿರ್ಲಾ ಅಥವಾ ಸಭಾಪತಿ ಜಗದೀಪ್ ಧನಕರ್ ತಮ್ಮ ತೀರ್ವನದಿಂದ ಹಿಂದೆ ಸರಿದಿರಲಿಲ್ಲ.

    ಸುಗಮ ಕಲಾಪ ನಡೆಯುವುದು ಅವರಿಗೆ ಬೇಕಿರಲಿಲ್ಲ. ಗದ್ದಲ ಎಬ್ಬಿಸುವುದು ವಿಪಕ್ಷಗಳ ಪೂರ್ವಯೋಜಿತ ತಂತ್ರವಾಗಿತ್ತು.

    | ಜಗದೀಪ್ ಧನಕರ್ ರಾಜ್ಯಸಭೆ ಸಭಾಪತಿ

    ಸರ್ವಾಧಿಕಾರಿಯಾದ ನರೇಂದ್ರ ಮೋದಿ, ಪ್ರಜಾಪ್ರಭುತ್ವದ ನೀತಿ-ನಿಯಮಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ.

    | ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಕಾಂಗ್ರೆಸ್ ನಾಯಕ

    ಸದನ ನಡೆಸುವಾಗ ಪ್ರತಿಪಕ್ಷಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. ಆದರೆ, ಈ ಸರ್ಕಾರ ಸರ್ವಾಧಿಕಾರದ ತೀವ್ರ ಮಟ್ಟಕ್ಕೆ ತಲುಪಿದೆ. ಅವರು ಬಾಹುಬಲಿಗಳ (ರೌಡಿಗಳು) ದೊಣ್ಣೆ ಹಿಡಿದು, ಎಲ್ಲರನ್ನೂ ಅಮಾನತುಗೊಳಿಸಿದ್ದಾರೆ.

    | ಅಧಿರ್ ರಂಜನ್ ಚೌಧರಿ ಲೋಕಸಭೆ ಕಾಂಗ್ರೆಸ್ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts