ಷಿಕಾಗೊ: ತಂತ್ರಜ್ಞಾನ ಬಹಳ ಮುಂದುವರೆದಿದೆ. ಯಾರ ಗರ್ಭದಲ್ಲಿ ಯಾರ ಭ್ರೂಣವನ್ನಿಟ್ಟು ಮಗು ಮಾಡುವವರೆಗೆ ವೈದ್ಯಕೀಯ ತಂತ್ರಜ್ಞಾನ ಮುಂದುವರೆದು ಬಹಳ ವರ್ಷಗಳೇ ಆಗಿವೆ.
ಅಂಥದ್ದೇ ಒಂದು ಅಪರೂಪದ ಪ್ರಕರಣ ಅಮೆರಿಕದ ಷಿಕಾಗೊದಲ್ಲಿಯೂ ನಡೆದಿದೆ. ಇದೀಗ 51 ವರ್ಷದ ಮಹಿಳೆಯು ಗರ್ಭ ಧರಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇವರು ತಾಯಿಯಾಗುತ್ತಿರುವುದು ನಿಜ. ಆದರೆ ಅಚ್ಚರಿಯ ವಿಷಯವೆಂದರೆ ಇವರ ಗರ್ಭದಲ್ಲಿ ಇರುವುದು ಇವರ ಮಗುವಲ್ಲ, ಬದಲಿಗೆ ಮಗಳ ಮಗು. ಅಂದರೆ ಈಕೆ ಜನ್ಮ ನೀಡುತ್ತಿರುವುದು ತಮ್ಮದೇ ಆದ ಮೊಮ್ಮಗುವನ್ನು!
ಹೌದು. 51 ವರ್ಷದ ಈ ಮಹಿಳೆಯ ಹೆಸರು ಜೂಲಿ ಲವಿಂಗ್. ಇವರ ಪುತ್ರಿ ಬ್ರೀನ್ನಾ ಲಾಕ್ವುಡ್ ಮತ್ತು ಪತಿ ಆರನ್ ದಂಪತಿಗೆ ಮಕ್ಕಳಿಲ್ಲ. ಚಿಕಾಗೋದಲ್ಲಿ ನೆಲೆಸಿರುವ ಬ್ರೀನ್ನಾ ಮತ್ತು ಆರನ್ 2016ರ ಜುಲೈನಲ್ಲಿ ವಿವಾಹವಾಗಿದ್ದರೂ ಚಿಕಿತ್ಸೆ ಫಲಕೊಟ್ಟಿಲ್ಲ. ಎರಡು ಬಾರಿ ಐವಿಎಫ್ ತಂತ್ರಜ್ಞಾನದ ಮೂಲಕ ಬ್ರೀನ್ನಾ ಗರ್ಭಧರಿಸಿದ್ದರೂ ಗರ್ಭಪಾತವಾಯಿತು. ಇದರ ನಡುವೆ ಬ್ರೀನ್ನಾ ಗರ್ಭಾಶಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಮತ್ತೆಂದೂ ಗರ್ಭಧರಿಸಲು ಸಾಧ್ಯವಿಲ್ಲ ಎಂದರು ವೈದ್ಯರು.
ಇದನ್ನೂ ಓದಿ: ವಿಕಾಸಸೌಧಕ್ಕೂ ಕಾಲಿಟ್ಟಿತು ಕರೊನಾ!
ಆದ್ದರಿಂದ ಬಾಡಿಗೆ ತಾಯ್ತನದ (ಸರೋಗಸಿ ಮದರ್) ಮೂಲಕ ಮಗು ಪಡೆಯುವ ಇಚ್ಛೆ ಹೊಂದಿದರು. ದಂಪತಿಯ ಅಂಡಾಣು ಮತ್ತು ವೀರ್ಯಾಣುವನ್ನು ಒಟ್ಟಿಗೆ ಸೇರಿಸಿ ಬೇರೊಬ್ಬರ ಗರ್ಭದಲ್ಲಿ ಇಟ್ಟು ಮಗು ಮಾಡುವ ಪ್ರಕ್ರಿಯೆ ಇದು.
ಆದರೆ ಬೇರೆ ಯಾರ್ಯಾದರೋ ಗರ್ಭದಲ್ಲಿ ಭ್ರೂಣವನ್ನು ಇಡುವುದು ಏಕೆ ಎಂದುಕೊಂಡ ಬ್ರೀನ್ನಾಳ ಅಮ್ಮ ಜೂಲಿ ತಾವೇ ಗರ್ಭ ಧರಿಸುವ ತೀರ್ಮಾನಕ್ಕೆ ಬಂದರು. ವಯಸ್ಸಿನ ಕಾರಣಕ್ಕೆ ಇವರಿಂದ ಗರ್ಭಧಾರಣೆ ಸಾಧ್ಯನಾ ಎಂಬ ಸಂಶಯ, ಆತಂಕ ಆರಂಭದಲ್ಲಿ ಇತ್ತು. ಜೂಲಿ ಅವರು ಸರೋಗಸಿ ಮದರ್ ಆಗಲು ಎಲ್ಲಾ ರೀತಿಯ ಅರ್ಹತೆ ಹೊಂದಿರುವುದಾಗಿ ವೈದ್ಯರು ಹೇಳಿದ ನಂತರ ಈ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ. ಎಲ್ಲಾ ವೈದ್ಯಕೀಯ ಪರೀಕ್ಷೆಯನ್ನೂ ಪೂರ್ಣಗೊಳಿಸಿರುವ ಜೂಲಿ ಯಶಸ್ವಿಯಾಗಿ ಗರ್ಭಧರಿಸಿದ್ದಾರೆ.
ನವೆಂಬರ್‌ನಲ್ಲಿ ಪುಟಾಣಿಯ ಆಗಮನದ ಹಾದಿ ಕಾಯುತ್ತಿದ್ದಾರೆ ಅಮ್ಮ-ಅಜ್ಜಿ!