More

    ಮೂರೇ ತಿಂಗಳಲ್ಲಿ 468 ಬೆಂಕಿ ಅವಘಡ!

    ಡಿ.ಎಂ. ಮಹೇಶ್ ದಾವಣಗೆರೆ: ಅಗ್ನಿಶಾಮಕ ದಳದ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಬೆಂಕಿ ದುರಂತಗಳು ನಿಂತಿಲ್ಲ. ವರ್ಷದಿಂದ ವರ್ಷಕ್ಕೆ ಅವಘಡಗಳಷ್ಟೇ ಹಾನಿ ಪ್ರಮಾಣವೂ ಹೆಚ್ಚುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರಕರಣಗಳು ಏರುಮುಖದಲ್ಲಿವೆ.

    2021ನೇ ಸಾಲಿನಲ್ಲಿ 471, 2022ರಲ್ಲಿ 468 ಅಗ್ನಿ ದುರಂತ ವರದಿಯಾಗಿದ್ದವು. 2023ರ ಮೂರು ತಿಂಗಳಲ್ಲೇ 468 ಅವಘಡಗಳು ವರದಿಯಾಗಿವೆ. ಹುಲ್ಲಿನ ಬಣವೆ, ಕಬ್ಬಿನ ಗದ್ದೆ, ತೋಟಗಳಲ್ಲಿ ಈ ಬಾರಿ ಹೆಚ್ಚಿನ ಅನಾಹುತವಾಗಿದ್ದು ಇದಕ್ಕೆ ಏರಿಕೆಯಾದ ಬಿಸಿಲಿನ ತಾಪವೇ ಕಾರಣ ಎನ್ನಲಾಗಿದೆ. ಕಳೆದ ವರ್ಷ ಅಗ್ನಿ ದುರಂತದಲ್ಲಿ ನಾಲ್ವರನ್ನು ಉಳಿಸಲಾಗಿದ್ದರೆ ಒಬ್ಬರು ಅಸು ನೀಗಿದ್ದಾರೆ. ಈ ಬಾರಿ ಐವರ ಪ್ರಾಣ ಉಳಿದಿದೆ.ಇತರೆ ರಕ್ಷಣಾ ಕಾರ್ಯದ ಕರೆಗಳಲ್ಲಿ 2022ರಲ್ಲಿ 70 ಜನರನ್ನು ರಕ್ಷಿಸಲಾಗಿದೆ. 27 ಜನ ಮೃತಪಟ್ಟರೆ 4 ಜಾನುವಾರು ಸಾವಿಗೀಡಾಗಿವೆ. 2023ರಲ್ಲಿ ಮೂವರ ಪ್ರಾಣ ರಕ್ಷಣೆಯಾಗಿದ್ದರೆ 6 ಮಂದಿ ಮೃತರಾಗಿದ್ದು ಒಂದು ಜಾನುವಾರು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2021ರಲ್ಲಿ 3.75 ಕೋಟಿ ರೂ. ಮೊತ್ತದ ಆಸ್ತಿ ನಷ್ಟಕ್ಕೀಡಾಗಿದ್ದರೆ, ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ 6.75 ಕೋಟಿ ರೂ. ಹಾನಿ ತಗ್ಗಿದೆ. 2022ರಲ್ಲಿ 4.32 ಕೋಟಿ ರೂ. ಆಸ್ತಿ ಹಾನಿಯಾಗಿದ್ದರೆ, 16.35 ಕೋಟಿ ರೂ.ಗಳಷ್ಟು ಆಸ್ತಿ ಉಳಿಸಲಾಗಿದೆ.

    2023ರ ಮೂರು ತಿಂಗಳವಧಿಯಲ್ಲಿ 3.36 ಕೋಟಿ ರೂ.ಗಳ ನಷ್ಟವಾಗಿದೆ. ಆದರೆ, 90.41 ಕೋಟಿ ರೂ. ಆಸ್ತಿ ಉಳಿಸಲಾಗಿದೆ ಎಂಬುದೇ ಅಚ್ಚರಿ ಸಂಗತಿ! ಮಾರ್ಚ್ ತಿಂಗಳಲ್ಲಿ 177 ಅಗ್ನಿ ದುರಂತ ವರದಿಯಾಗಿವೆ.

    ಜೇನ್ನೊಣ ಹಾವಳಿಯಿಂದ ಮಕ್ಕಳ ರಕ್ಷಣೆ!

    2022ರ ಅಕ್ಟೋಬರ್ 18ರಂದು ಹರಿಹರ ತಾಲೂಕು ಕೊಂಡಜ್ಜಿಯ ಪಬ್ಲಿಕ್ ಶಾಲೆಯಲ್ಲಿ ಜೇನ್ನೊಣಗಳ ಹಾವಳಿ ಕಂಡುಬಂದಿತ್ತು. ಆಗ ಆ್ಯಸ್‌ಬೂಸ್ಟರ್ ಸೂಟ್ ಧರಿಸಿದ್ದ ವರು ಜಲವಾಹನದ ಏಣಿ (ಲ್ಯಾಡರ್) ಮೂಲಕ ಕಟ್ಟಡ ಏರಿ ಅಲ್ಲಿದ್ದ ಸುಮಾರು 50 ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಈ ರಕ್ಷಣಾ ಕಾರ್ಯಕ್ಕೆ ಪ್ರಶಂಸಿಸಿ ಬಹುಮಾನ ಘೋಷಿಸಿದ್ದು ಗಮನಾರ್ಹ.

    ಯಂತ್ರೋಪಕರಣ ಸೌಲಭ್ಯ

    ದಾವಣಗೆರೆ ಸೇರಿ ಐದು ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳಿದ್ದು ಅಧಿಕಾರಿಗಳು, ಸಿಬ್ಬಂದಿ ಸೇರಿ 150 ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟು 16 ಜಲವಾಹನ, 1 ಜಲ ಲಾರಿ, 1 ವಾಟರ್ ಬೋಜರ್, ಹಾಗೂ 1 ರಕ್ಷಣಾ ವಾಹನವಿದೆ. ಇಲಾಖೆ ಹಾಗೂ ಸ್ಮಾರ್ಟ್‌ಸಿಟಿ ವತಿಯಿಂದಲೂ ಕೆಲವು ವಾಹನಗಳು ದೊರೆತಿವೆ.
    ರಕ್ಷಣಾ ವಾಹನದಲ್ಲಿ ಅತ್ಯಾಧುನಿಕ ಯಂತ್ರ, ಆಕ್ಸಿಜನ್, ರಬ್ಬರ್(ಒಬಿಎಂ) ಬೋಟ್, ಸೂಟುಗಳ ಸೌಲಭ್ಯವಿವೆ. ಪೋರ್ಟಬಲ್ ಪಂಪ್, ಪೆಟ್ರೋಲ್ ಆಪರೇಟರ್, ವುಡ್ ಕಟ್ಟರ್ ಇತ್ಯಾದಿ ಅನುಕೂಲತೆ ಕಲ್ಪಿಸಲಾಗಿದೆ. ಏ.14ರಿಂದ ಆಗ್ನಿಶಾಮಕ ಸೇವಾ ಸಪ್ತಾಹ ಆಚರಿಸುತ್ತಿದ್ದು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಅಗ್ನಿ ತಡೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಲಾಗುವುದು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸಂಪರ್ಕಿಸಿ ಉಪಯೋಗ ಪಡೆಯಬೇಕು ಎನ್ನುತ್ತಾರೆ ಅಧಿಕಾರಿಗಳು.

    ನಾಗರಿಕರಿಗೆ ಒಂದಷ್ಟು ಸಲಹೆ

    • ಮನೆ, ಬಣವೆ, ಮರದ ರಾಶಿಗೆ ಬೆಂಕಿ ಬಿದ್ದಾಗ ನೀರು, ಮರಳನ್ನು ಸುರಿಯಬೇಕು.
    • ಧರಿಸಿದ ಬಟ್ಟೆ-ಮೈಗೆ ಬೆಂಕಿ ತಗುಲಿದಾಗ ಕಂಬಳಿ ಅಥವಾ ದಪ್ಪನೆಯ ಹೊದಿಕೆಯನ್ನು ಮೈಗೆ ಸುತ್ತಿಸಿ ಹೊರಳಾಡಿಸಬೇಕು. ಮೈಗೆ ತಂಪಾದ ನೀರನ್ನು ಸರಿಯಬೇಕು.
    • ಅಂಗಡಿ ಮಳಿಗೆಗಳಲ್ಲಿ ರಾತ್ರಿ ಬೀಗ ಹಾಕಿ ಹೋಗುವಾಗ ವಿದ್ಯುತ್ ಮೇನ್ ಸ್ವಿಚ್ ಆಫ್ ಮಾಡಬೇಕು. ದೀಪ, ಗಂಧದ ಕಡಿ ಹಚ್ಚಿದ್ದಲ್ಲಿ ನಂದಿಸಿ ಹೋಗಬೇಕು.
    • ವಿದ್ಯುತ್‌ನಿಂದ ಬೆಂಕಿ ಅವಘಡವಾದಾಗ ನೀರನ್ನು ಬಳಸಬಾರದು. ತಕ್ಷಣವೇ ಮೇನ್ ಸ್ವಿಚ್ ಆಫ್ ಮಾಡಬೇಕು. ಮರಳನ್ನು ಎರಚಬೇಕು.
    • ಸಿಲಿಂಡರ್‌ಗಿಂತ ಎತ್ತರದ ಸ್ಥಳದಲ್ಲೇ ಎಲ್‌ಪಿಜಿ ಸ್ಟೌ ಇರಿಸಿ ಅಡುಗೆ ಮಾಡಬೇಕು. ನೆಲದ ಮೇಲಿಟ್ಟು ಅಡುಗೆ ಮಾಡಬಾರದು. ರಾತ್ರಿ ಬರ್ನರ್, ರೆಗ್ಯುಲೇಟರ್ ವಾಲ್ವ್ ಬಂದ್ ಮಾಡಿ ಮಲಗಬೇಕು. ಅಡುಗೆ ಅನಿಲ ಸೋರಿಕೆಯಿಂದ ಕಾಣಿಸಿಕೊಂಡಿದ್ದರೆ ಒದ್ದೆ ಬಟ್ಟೆ ಅಥವಾ ಒದ್ದೆಯಾದ ಗೋಣಿಚೀಲದಿಂದ ಮುಚ್ಚಿ ಆರಿಸಬೇಕು. ಎಲ್‌ಪಿಜಿ ಸ್ಟೌಗೆ ಬೆಳಸುವ ರಬ್ಬರ್ ಟ್ಯೂಬ್ ಅನ್ನು 2-3 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಬದಲಾಯಿಸಿ.
    • ಉಳಿಕೆ ಅಡುಗೆ ಅನಿಲ ಪಡೆಯಲು ಸಿಲಿಂಡರ್ ಅನ್ನು ತಲೆಕೆಳಗೆ ಮಾಡಬೇಡಿ, ಬಿಸಿನೀರಿನ ಪಾತ್ರೆ ಇಡಬೇಡಿ. ಎಲ್‌ಪಿಜಿ ಸೋರಿಕೆ ವಾಸನೆ ಬಂದಾಗ ರೆಗ್ಯುಲೇಟರ್ ಆಫ್ ಮಾಡಿ ಕಿಟಕಿ ಬಾಗಿಲುಗಳನ್ನು ತೆರೆಯಬೇಕು, ಅಲ್ಲಿ ತೆರೆದ ದೀಪ, ಹೊತ್ತಿಸಿದ ಮೇಣದ ಬತ್ತಿ, ಟಾರ್ಚ್, ಬೆಂಕಿ ಪೊಟ್ಟಣವನ್ನು ಬಳಸಬೇಡಿ.
    • ತುರ್ತು ಸಂದರ್ಭದಲ್ಲಿ ಲಿಫ್ಟ್ ಸಂಚಲನದಲ್ಲಿ ಸಿಲುಕಿದಾಗ ಶಾಂತವಾಗಿರಿ. ಭದ್ರತಾ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ.
    • ಉರಿಯುವ ಸ್ಟೌ ಗೆ ಸೀಮೆಎಣ್ಣೆ ತುಂಬಬೇಡಿ. ಒಂದು ವೇಳೆ ಪಂಪ್‌ಸ್ಟೌ ಆಗಿದ್ದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪ್ರೆಷರ್ ತುಂಬಿ. ಇಲ್ಲವಾದಲ್ಲಿ ಸ್ಪೋಟವಾಗುವ ಸಂಭವ ಇರುತ್ತದೆ.
    • ವಾಣಿಜ್ಯ ಮಳಿಗೆ, ಅಪಾರ್ಟ್‌ಮೆಂಟ್‌ಗಳಲ್ಲಿ ಅಗ್ನಿನಂದಕ ಇರಿಸಬೇಕು. ಅಲ್ಲಿನವರು ಇದನ್ನು ಬಳಸುವ ತರಬೇತಿ ಪಡೆಯಬೇಕು.

    ಬಿಸಿಲಿನ ತಾಪದಿಂದಾಗಿ ಈ ಬಾರಿ ಅಗ್ನಿ ಅನಾಹುತಗಳು ಹೆಚ್ಚಿವೆ. ನಾಗರಿಕರು ಜಾಗರೂಕ ಕ್ರಮಗಳನ್ನು ಅನುಸರಿಸಬೇಕು. ಬೆಂಕಿ ಅವಘಡಗಳು ಕಂಡುಬಂದಾಗ ಅಗ್ನಿಶಾಮಕ ಠಾಣೆಗೆ ಸರಿಯಾದ ವಿವರಗಳನ್ನು ನೀಡಿ ಸಕಾಲಿಕವಾಗಿ ಅಗ್ನಿ ನಂದಿಸಲು ಸಾರ್ವಜನಿಕರು ನೆರವು ನೀಡಬೇಕು.
    ಬಸವಪ್ರಭು ಶರ್ಮ, ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts