More

    ಪರಮಪದವಿಯ ಪರಮಾಚಾರ್ಯ ಶ್ರೀ ಜಗದ್ಗುರು ರೇಣುಕಾಚಾರ್ಯ

    ಪ್ರಶಾಂತ ರಿಪ್ಪನ್​ಪೇಟೆ
    ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷ ಈ ವಿಷಯಗಳ ಕುರಿತು ದಾರ್ಶನಿಕ ಪ್ರಪಂಚದಲ್ಲಿ ಬಹು ಹಿಂದಿ ನಿಂದಲೂ ಚರ್ಚೆ, ಚಿಂತನೆ, ಅನ್ವೇಷಣೆಗಳು ನಡೆದುಕೊಂಡು ಬಂದಿವೆ. ತಪಸ್ಸು, ಯೋಗ, ಧ್ಯಾನ, ಜಪ ಇತ್ಯಾದಿ ಎಲ್ಲ ಸಾಧನೆಯ ಉದ್ದೇಶವೂ ಪದಪ್ರಾಪ್ತಿಯೇ ಆಗಿದೆ. ಈ ಹಿನ್ನೆಲೆಯಲ್ಲಿ ಆದ್ಯ ಸೂತ್ರಕಾರರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಇಷ್ಟಲಿಂಗ ದೀಕ್ಷೆ, ಷಟಸ್ಥಲ ಮಾರ್ಗದ ಮೂಲಕ ಶಿವಾದ್ವೈತ ಸಿದ್ಧಾಂತ ಪ್ರತಿಪಾದನೆಯಲ್ಲಿ ಪದಪ್ರಾಪ್ತಿಯ ಬಗ್ಗೆ ವಿಷದವಾಗಿ ವಿವರಿಸಿದ್ದಾರೆ. ಅಂತೆಯೇ ಶ್ರೀ ಜಗದ್ಗುರು ರೇಣುಕಾಚಾರ್ಯರು ಉಪದೇಶಿಸಿರುವ ‘ಪಡ್ವಿಡಿ’ ಸೂತ್ರದಲ್ಲಿ ಸಾಮಾನ್ಯನಾಗಿ ಹುಟ್ಟಿದ ಮಾನವ ಮಹಾದೇವನಾಗುವ ಪರಮ ಪದವಿಯನ್ನು ಪಡೆಯುವ ಮಹೋನ್ನತ ಮಾರ್ಗವನ್ನು ಉಪದೇಶಿಸಿದ್ದಾರೆ.

    ಪಡ್ವಿಡಿ ಎಂಬ ಪದವನ್ನು ಪದ+ವಿಧಿ ಪದ್ವಿಧಿ ಎಂದು ವಿವರಿಸ ಲಾಗುತ್ತದೆ. ಇಲ್ಲಿ ಪದ ಎಂದರೆ ಹುದ್ದೆ, ಸ್ಥಾನ ಎಂದರ್ಥ. ಲೌಕಿಕ ಬದುಕಿನಲ್ಲಿ ವೃತ್ತಿ ನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಹುದ್ದೆಗಳಿರುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಪಂಚಾಯಿತಿ ಸದಸ್ಯ ಸ್ಥಾನದಿಂದ ರಾಷ್ಟ್ರಪತಿವರೆಗಿನ ಹುದ್ದೆಗಳಿದ್ದರೂ ಅವುಗಳೆಲ್ಲವೂ ಅಶಾಶ್ವತ. ಆದರೆ ಅಲೌಕಿಕವಾದ, ಆಧ್ಯಾತ್ಮಿಕವಾದ, ಒಮ್ಮೆ ದೊರೆತ ಮೇಲೆ ಇನ್ನೆಂದೂ ಕೈತಪ್ಪದ, ಎಲ್ಲ ಪದವಿಗಳಿಗಿಂತ ಶ್ರೇಷ್ಠವಾದ ಪರಮ ಪದವಿಯನ್ನು ಪಡೆಯುವ ವಿಧಿ ಅಥವಾ ಮಾರ್ಗವನ್ನು ಉಪದೇಶಿಸುವ ಸೂತ್ರವೇ ಪಡ್ವಿಡಿ ಸೂತ್ರ. ಶ್ರೀ ಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಮಹಾಕ್ಷೇತ್ರದ ಸ್ವಯಂಭು ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿ ಸಮಾಜದ ಸರ್ವಜನಾಂಗದ ಹಿತಕ್ಕಾಗಿ 18 ಮಠಗಳನ್ನು ಸ್ಥಾಪಿಸಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿಂದ ಮಲಯಾಚಲದ ಗಿರಿಶ್ರೇಣಿಯಲ್ಲಿ ಆಶ್ರಮವಾಸಿಯಾಗಿದ್ದ ಮಹಾಮುನಿ ಅಗಸ್ಱರನ್ನು ನಿಮಿತ್ತ ಮಾಡಿಕೊಂಡು ಜಗತ್ತಿನ ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದ್ದಾರೆ. ಶ್ರೀ ಶಿವಯೋಗಿ ಶಿವಾಚಾರ್ಯರು ರೇಣುಕಾಗಸ್ಱ ಸಂವಾದ ರೂಪದಲ್ಲಿ ರಚಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿಯು ವೀರಶೈವ ಧರ್ಮಗ್ರಂಥವೆಂದು ಮಾನ್ಯವಾಗಿದೆ. ಅಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ವೀರಸಿಂಹಾಸನ ಮಹಾಪೀಠವೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಶ್ರೀಮದ್ ರಂಭಾಪುರಿ ಪೀಠ.

    ಧರ್ಮಗಂಗೋತ್ರಿ ಶ್ರೀ ರಂಭಾಪುರಿ ಪೀಠ: ಕರ್ನಾಟಕದ ಮಲಯಾಚಲದ ಭದ್ರಾ ನದಿ ತೀರದಲ್ಲಿರುವ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಲಕ್ಷಾಂತರ ಭಕ್ತರ ಪಾಲಿನ ಧರ್ಮ ಗಂಗೋತ್ರಿಯಾಗಿದೆ. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಸಾವಿರಾರು ಶಾಖಾ ಮಠಗಳನ್ನು ಹೊಂದಿರುವ ಪೀಠವು ಧರ್ಮಜಾಗೃತಿಗೆ ನಿರಂತರ ಕೆಲಸ ಮಾಡುತ್ತಿದೆ. ಕಲಿಯುಗದ ಆದಿ ಆಚಾರ್ಯರಾದ ಶ್ರೀ ಜಗದ್ಗುರು ರೇವಣ ಸಿದ್ದೇಶ್ವರರಿಂದ ಆರಂಭವಾದ ಶ್ರೀಪೀಠದ ಅವಿಚ್ಛಿನ್ನ ಪರಂಪರೆಯಲ್ಲಿ ಭೂಗರ್ಭ ಸಂಜಾತ ಕಾಲಜ್ಞಾನಿ ಶ್ರೀ ಜಗದ್ಗುರು ರುದ್ರಮುನಿ ಭಗವತ್ಪಾದರಿಂದ ಇಲ್ಲಿಯವರೆಗೆ 121 ಜಗದ್ಗುರುಗಳು ವೀರಸಿಂಹಾಸನವನ್ನು ಆರೋಹಣ ಮಾಡಿದ್ದಾರೆ. 119ನೇ ಜಗದ್ಗುರು ಗಳಾಗಿದ್ದ ಶ್ರೀ ವೀರಗಂಗಾಧರ ಭಗವತ್ಪಾದರು ಜಗದ್ಗುರುಗಳು ಪಂಚಾಚಾರ್ಯ ಪರಂಪರೆಯನ್ನು ಉನ್ನತ ಸ್ತರಕ್ಕೆ ಕೊಂಡೊಯ್ದ ಮಹಾತ್ಮರು. ಶ್ರೀ ಜಗದ್ಗುರು ರುದ್ರಮುನಿ ಭಗವತ್ಪಾದರ ಕರಕಮಲ ಸಂಜಾತರಾದ ಪ್ರಸ್ತುತ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು 3 ದಶಕಗಳಿಂದ ಪೀಠವನ್ನು ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಪೀಠದ ಪರಿಸರದಲ್ಲಿ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮೂರ್ತಿಯ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಆಕರ್ಷಣೀಯ ಥೀಮ್ ಪಾರ್ಕ್ ನಿರ್ವಣವಾಗಲಿದೆ.

    ಜಾತ್ರೆ, ರಥೋತ್ಸವ, ವಿವಿಧ ಕಾರ್ಯಕ್ರಮ: ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಪೀಠದಲ್ಲಿ ಒಂದು ವಾರದ ಕಾರ್ಯಕ್ರಮ ಮಾ. 20ರಿಂದ ಆರಂಭವಾಗಿದೆ. ಇಂದು ಕುಂಕುಮೋತ್ಸವ, ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ನಡೆಯಲಿದೆ. 22ರಂದು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವವಿದೆ. 23ಕ್ಕೆ ಶಯನೋತ್ಸವ, ದೀಪೋತ್ಸವ, 24ಕ್ಕೆ ಶ್ರೀ ಶಿವಾನಂದ ಎಸ್ಟೇಟ್​ನಲ್ಲಿ ಜಗದ್ಗುರುಗಳ ಪೂಜಾ, 25ಕ್ಕೆ ವಸಂತೋತ್ಸವ, 26ಕ್ಕೆ ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆ ನಡೆಯಲಿದೆ.

    ಪ್ರಶಸ್ತಿಗೆ ಆಯ್ಕೆ: ಇದೇ ಸಂದರ್ಭದಲ್ಲಿ ರಂಭಾಪುರಿಪೀಠ ಕೊಡಮಾಡುವ ಪ್ರತಿಷ್ಠಿತ ‘ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಗೆ ಈ ವರ್ಷ ಬಾಗಲಕೋಟೆಯ ಚರ್ಮರೋಗ ತಜ್ಞೆ ಡಾ. ಮಹಾಜಬೀನ್ ಮದರ್ಕರ್ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts