More

    ಪರೀಕ್ಷೆ ಗೊಂದಲ ನಿವಾರಿಸಿ

    ಅವಸರದ ತೀರ್ವನಗಳು, ಯಾವುದೇ ನಿರ್ಣಯಗಳ ಜಾರಿಯ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದು, ಅನಗತ್ಯ ವಿಳಂಬ ಧೋರಣೆಯಿಂದ ಕೊನೆಯ ಹಂತದಲ್ಲಿ ಗೊಂದಲ ಸೃಷ್ಟಿಸುವುದು ಹೀಗೆ ಹಲವು ಅಪಸವ್ಯಗಳಿಂದ ರಾಜ್ಯದ ಶಿಕ್ಷಣ ಇಲಾಖೆ ವಿವಾದಗಳಿಗೆ ಕಾರಣವಾಗುತ್ತಿದೆ. ಇಲಾಖೆಯ ಇಂಥ ಕ್ರಮಗಳಿಂದ ಹಾನಿ ಆಗುತ್ತಿರುವುದು ಮಕ್ಕಳಿಗೆ ಮತ್ತು ಪಾಲಕರಿಗೆ. ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಕುರಿತ ತೀರ್ಪು ಹೈಕೋರ್ಟ್ ಕಾಯ್ದಿರಿಸಿದ್ದು, ಮುಂದೇನು ಎಂಬ ಗೊಂದಲ ಕಾಡುತ್ತಿದೆ. ಕೆಲವೇ ದಿನಗಳಲ್ಲಿ (ಮಾರ್ಚ್ 25ರಿಂದ) ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದರೂ, ಶೈಕ್ಷಣಿಕ ವರ್ಷ ಮುಗಿಯುವ ದಿನಗಳು ಸಮೀಪಿಸಿದ್ದರೂ 5, 8, 9ನೇ ತರಗತಿಗಳ ಪರೀಕ್ಷೆ ಗೊಂದಲ ಬಗೆಹರಿದಿಲ್ಲ. ಶಿಕ್ಷಣ ಇಲಾಖೆ ಮತ್ತು ಕೆಲ ಖಾಸಗಿ ಶೈಕ್ಷಣಿಕ ಸಂಘಟನೆಗಳ ಬೇಜವಾಬ್ದಾರಿ ಧೋರಣೆಯ ಪರಿಣಾಮ ಈ ಸಂಕಷ್ಟದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ, ಆತಂಕ ಸೃಷ್ಟಿಸುವ ಬೆಳವಣಿಗೆಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ.

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್​ಇಪಿ) ತೀವ್ರವಾಗಿ ವಿರೋಧಿಸಿ ರಾಜ್ಯ ಶಿಕ್ಷಣ ನೀತಿ (ಎಸ್​ಇಪಿ) ಜಾರಿಗೆ ಯತ್ನಿಸುತ್ತಿರುವ ರಾಜ್ಯ ಸರ್ಕಾರ, ಎನ್​ಇಪಿ ಪ್ರತಿಪಾದಿಸಿರುವ ಮೌಲ್ಯಾಂಕನ ಪರೀಕ್ಷೆಯ ಜಾರಿಗೆ ಮಾತ್ರ ಪಟ್ಟು ಹಿಡಿದಿರುವುದು ಏಕೆ? ಈ ಬಗ್ಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸದೆ ಶಾಲೆಯ ಹಂತದಲ್ಲೇ ಪರೀಕ್ಷೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೆ ಸಮಸ್ಯೆ ಇಷ್ಟು ಸಂಕೀರ್ಣವಾಗುತ್ತಿರಲಿಲ್ಲ ಎಂಬ ವಾಸ್ತವದ ಅರಿವು ಸರ್ಕಾರಕ್ಕೆ ಇಲ್ಲದಿಲ್ಲ. ಆದರೂ, ಈ ಸ್ಥಿತಿಯನ್ನು ಏಕೆ ಸೃಷ್ಟಿಸಿಕೊಂಡಿತು ಎಂಬುದು ತರ್ಕಕ್ಕೆ ನಿಲುಕದ ಸಂಗತಿ. ಇನ್ನು, ನ್ಯಾಯಾಲಯದ ಮೊರೆ ಹೋದವರು ಸಹ ವಿವೇಚನೆಯನ್ನು ಮೆರೆಯಬೇಕಿತ್ತು. ಪರೀಕ್ಷೆಗಳು ಸಮೀಪಿಸಿದಾಗ ನ್ಯಾಯಾಲಯದ ಮೆಟ್ಟಿಲು ಏರುವ ಬದಲು ಈ ಕೆಲಸವನ್ನು ಮುಂಚೆಯೇ ಮಾಡಬಹುದಿತ್ತಲ್ಲವೆ? ಸಾಮಾನ್ಯವಾಗಿ, ಈ ಹೊತ್ತಲ್ಲಿ 5, 7, 9ನೇ ತರಗತಿಯ ಪರೀಕ್ಷೆಗಳು ಮುಗಿದು, ಬೇಸಿಗೆ ರಜೆ ಆರಂಭವಾಗಿರುತ್ತದೆ. ಪಾಲಕರು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು, ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸಿರುತ್ತಾರೆ. ಆದರೆ, ಈ ಬಾರಿ ಮೌಲ್ಯಾಂಕನ ಪರೀಕ್ಷೆ ನಡೆಯುವುದೋ, ಶಾಲಾ ಹಂತದ ಪರೀಕ್ಷೆ ನಡೆಯುವುದೋ, ನಡೆದರೆ ಎಷ್ಟು ದಿನಗಳಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ಸ್ಥಿತಿಯಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಮತ್ತು ಪಾಲಕರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.

    ಪರೀಕ್ಷೆಯ ಬಗ್ಗೆ ಭಯಪಡಬೇಡಿ ಎಂದು ಧೈರ್ಯ ತುಂಬುವ ಕೆಲಸಗಳು ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಂದ ಆಗಬೇಕಿತ್ತು. ‘ಸೂಕ್ತ ಮಾರ್ಗಸೂಚಿ ಹೊರಡಿಸಿ ಅಗತ್ಯವಿರುವ ಮಕ್ಕಳಿಗೆ ಆಪ್ತಸಮಾಲೋಚನೆ ಕೊಡಿಸುವ ಕೆಲಸಗಳು ಆಗದಿರುವ ಬಗ್ಗೆ ಶಿಕ್ಷಣ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರತಿ ವರ್ಷ ಈ ಗೊಂದಲ ಮರುಕಳಿಸದಂತೆ ಸೂಕ್ತ ಕ್ರಮ ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ವಿದ್ಯಾರ್ಥಿಗಳ ಹಿತರಕ್ಷಣೆಗೆ ಸರ್ಕಾರ ಗಮನ ಹರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts