More

    ಕಾಂಗ್ರೆಸ್ ಸೇರಲು ಕಾಯುತ್ತಿರುವ ಅನ್ಯಪಕ್ಷಗಳ 42 ಮುಖಂಡರು, ಎಎಪಿಯಿಂದ 100 ಜನ!; ಡಿಕೆಶಿ ರಿವೀಲ್

    ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತ ಗಳಿಕೆ ಹೆಚ್ಚು ಮಾಡಿಕೊಳ್ಳಬೇಕೆಂದು ಹೈಕಮಾಂಡ್ ನೀಡಿದ ದೊಡ್ಡ ಟಾಸ್ಕ್ ಪೂರ್ಣಗೊಳಿಸಲು ಪ್ರಯತ್ನಶೀಲವಾಗಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದೆ.
    ಇದೀಗ ಆಪರೇಷನ್ ಹಸ್ತಕ್ಕೆ ಅನ್ಯ ಪಕ್ಷದ 42 ಮುಖಂಡರು ಸಿದ್ಧರಿದ್ದಾರೆ ಎಂಬ ಸಂಗತಿಯನ್ನು ಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.
    ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಬಹುದಾದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯನ್ನೇ ತಂದು ಚರ್ಚೆ ಮಾಡಿದ್ದಾರೆ. ವಿವಿಧ ಪಕ್ಷಗಳ 42ಕ್ಕೂ ಹೆಚ್ಚು ಮುಖಂಡರ ಅರ್ಜಿಗಳು ನನ್ನ ಮುಂದಿದೆ. ಆ ಹೆಸರುಗಳನ್ನು ಈಗ ಬಹಿರಂಗ ಮಾಡುವುದಿಲ್ಲ ಎಂದು ತಿಳಿಸಿದರು.
    ಪಕ್ಷದ ಕಚೇರಿಯಲ್ಲಿ ಗುರುವಾರ ಬಿಜೆಪಿ ಮಾಜಿ ಶಾಸಕ, ಶಿರಹಟ್ಟಿಯ ರಾಮಪ್ಪ ಲಮಾಣಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸ್ಥಳೀಯ ನಾಯಕರುಗಳ ಜತೆ ಚರ್ಚೆ ಮಾಡಿ, ಒಮ್ಮತ ಮೂಡಿಸಿ ಅನ್ಯ ಪಕ್ಷಗಳ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ವಿರೋಧ ಪಕ್ಷಗಳ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗಿದೆ ಎಂದು ಹೇಳಿದರು.
    ಕೆಲವರು 2024 ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಅದರ ವಿವರಣೆಗೆ ನಾನು ಹೋಗುವುದಿಲ್ಲ.
    ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ 100ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ನನ್ನನ್ನು ಭೇಟಿ ಮಾಡಿ, ನಾವು ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದು, ನಿಮ್ಮ ಜತೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ. ಬೀದರ್‌ನಿಂದ ಚಾಮರಾಜನಗರದ ತನಕ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
    ಇದೇ ವೇಳೆ ರುದ್ರಪ್ಪ ಲಮಾಣಿ ಮಾತನಾಡಿ, ನಮಗೆ ಬಿಜೆಪಿಯಲ್ಲಿ ಆಗಿರುವ ನೋವಿನಿಂದ ನಾವು ಆ ಪಕ್ಷ ತೊರೆದಿದ್ದೇವೆ. ಕಾಂಗ್ರೆಸ್ ನಾಯಕರು ಸೇರಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ಅವರನ್ನು ಗೆಲ್ಲಿಸಲು ನಾನು ಶ್ರಮಿಸುತ್ತೇನೆ ಎಂದರು.
    ಜಗದೀಶ್ ಶೆಟ್ಟರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕ ಭಾಗದ ಅನೇಕ ನಾಯಕರಿಗೆ ಗಾಳ ಹಾಕಿದ್ದು, ಮುಂದಿನ ದಿನಗಳಲ್ಲಿ ಅನೇಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಶಾಸಕರು ಕೇವಲ 1500 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲದಿದ್ದರೆ, ಬಿಜೆಪಿ 40 ಸ್ಥಾನಗಳಿಗೆ ನಿಲ್ಲುತ್ತಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಧೂಳಿಪಟವಾಗಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts