More

    22,030 ಚುನಾವಣಾ ಬಾಂಡ್​ ಖರೀದಿ: ಸುಪ್ರೀಂಕೋರ್ಟ್​ಗೆ ಅಫಿಡೆವಿಟ್​ ಸಲ್ಲಿಸಿದ ಎಸ್​ಬಿಐ

    ನವದೆಹಲಿ: ಚುನಾವಣಾ ಬಾಂಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಸುಪ್ರೀಂಕೋರ್ಟ್​ಗೆ ಇಂದು (ಮಾರ್ಚ್​ 13) ಅನುಸರಣಾ ಅಫಿಡೆವಿಟ್​ ಸಲ್ಲಿಸಿದ್ದು, ಆದೇಶದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಾಂಡ್​ಗಳ ಕುರಿತು ಮಾಹಿತಿ ಸಲ್ಲಿಸಿರುವುದಾಗಿ ಹೇಳಿದೆ.

    2019ರ ಏಪ್ರಿಲ್​ 1ರಿಂದ 2024ರ ಫೆಬ್ರವರಿ 15ರವರೆಗೆ 22,217 ಬಾಂಡ್​ಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 22,030 ಬಾಂಡ್​ಗಳನ್ನು ಬಿಡಿಸಿಕೊಳ್ಳಲಾಗಿದೆ ಎಂದು ಎಸ್​ಬಿಐ ತಿಳಿಸಿದೆ. ಈ ಅಫಿಡೆವಿಟ್​ ಅನ್ನು ಎಸ್​ಬಿಐ ಬ್ಯಾಂಕ್​ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್​ ಖಾರಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    15 ದಿನಗಳ ಮಾನ್ಯತೆಯ ಅವಧಿಯಲ್ಲಿ ಚುನಾವಣಾ ಪಕ್ಷಗಳು ನಗದೀಕರಿಸದ ಉಳಿದ 187 ಬಾಂಡ್​ಗಳ ಮೊತ್ತವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ಹೇಳಿದೆ.

    ಬಾಂಡ್​ಗಳನ್ನು ಖರೀದಿಸಿದ ದಿನಾಂಕ, ಮುಖಬೆಲೆ ಮತ್ತು ಖರೀದಿದಾರರ ಹೆಸರನ್ನು ದಾಖಲಿಸಲಾದ ಸಿದ್ಧ ದಾಖಲೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಬಾಂಡ್​ಗಳನ್ನು ನಗದೀಕರಿಸಿದ ದಿನಾಂಕ ಮತ್ತು ನಗದೀಕರಿಸಿದ ಬಾಂಡ್‌ಗಳ ಮುಖಬೆಲೆಗಳ ವಿವರಗಳನ್ನು ದಾಖಲಿಸಲಾಗಿದೆ. ದಾಖಲಾತಿಗಳನ್ನು ಪೆನ್​​ಡ್ರೈವ್​ನಲ್ಲಿ ಹಾಕಲಾಗಿದೆ. ಎರಡು ಪಿಡಿಎಫ್​ ಫೈಲ್​ನಲ್ಲಿ ಇದ್ದು ಅವುಗಳನ್ನು ಪಾಸ್​ವರ್ಡ್​ ರಕ್ಷಣೆ ಮಾಡಲಾಗಿದೆ ಎಂದು ಎಸ್​ಬಿಐ ತಿಳಿಸಿದೆ.

    ಚುನಾವಣಾ ಬಾಂಡ್​ ವಿಚಾರದಲ್ಲಿ ಫೆಬ್ರವರಿ 15ರಂದು ಸುಪ್ರೀಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿತು. ರಾಜಕೀಯ ಪಕ್ಷಗಳು ಪಡೆಯುವ ಚುನಾವಣಾ ಬಾಂಡ್​ ಅನ್ನು ಅಸಂವಿಧಾನಿಕ ಎಂದಿರುವ ಉನ್ನತ ನ್ಯಾಯಾಲಯ ಅದನ್ನು ರದ್ದು ಮಾಡಿ, ಬಾಂಡ್​ ವಿವರಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು. ಅದರಂತೆ ಮಾರ್ಚ್​ 15ರ ಶುಕ್ರವಾರದಂದು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಚುನಾವಣಾ ಬಾಂಡ್​ ವಿವರಗಳನ್ನು ಅಪ್​ಲೋಡ್​ ಮಾಡಲಿದೆ.

    2019 ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೂ ಸುಪ್ರೀಂಕೋರ್ಟ್​ ತಿಳಿಸಿತ್ತು. ಅಲ್ಲದೆ, ಚುನಾವಣಾ ಬಾಂಡ್​ಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್​ಗಳಿಗೆ ಸೂಚನೆ ನೀಡಿತು. ಇದರ ಮಧ್ಯೆ ಗಡುವು ವಿಸ್ತರಣೆ ಕೋರಿ ಎಸ್​ಬಿಐ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಛೀಮಾರಿ ಹಾಕಿದ ಕೋರ್ಟ್​ ಮಾರ್ಚ್​ 12ರಂದು ವಿವರ ಸಲ್ಲಿಸುವಂತೆ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಎಸ್​ಬಿಐ ಚುನಾವಣಾ ಆಯೋಗಕ್ಕೆ ವಿವರವನ್ನು ಸಲ್ಲಿಸಿದ್ದು, ಇದನ್ನು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಲಿದೆ. (ಏಜೆನ್ಸೀಸ್​)

    ಚುನಾವಣಾ ಆಯೋಗದ ಬಾಂಡ್​ ಡೇಟಾ ಏನನ್ನು ಬಿಚ್ಚಿಡಬಹುದು? ಏನನ್ನು ಮುಚ್ಚಿಡಬಹುದು?

    ಮಿಷನ್ ದಿವ್ಯಾಸ್ತ್ರ ಯಶಸ್ವಿ: ಇವರೇ ನೋಡಿ ಅಗ್ನಿ-5 ಕ್ಷಿಪಣಿ ಹಿಂದಿರುವ ಮಹಿಳಾ ಶಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts