More

    ಚುನಾವಣಾ ಆಯೋಗದ ಬಾಂಡ್​ ಡೇಟಾ ಏನನ್ನು ಬಿಚ್ಚಿಡಬಹುದು? ಏನನ್ನು ಮುಚ್ಚಿಡಬಹುದು?

    ನವದೆಹಲಿ: ಚುನಾವಣಾ ಬಾಂಡ್​ ವಿಚಾರದಲ್ಲಿ ಫೆಬ್ರವರಿ 15ರಂದು ಸುಪ್ರೀಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿರುವುದು ಬಹುತೇಕರಿಗೆ ತಿಳಿದೇ ಇದೆ. ರಾಜಕೀಯ ಪಕ್ಷಗಳು ಪಡೆಯುವ ಚುನಾವಣಾ ಬಾಂಡ್​ ಅನ್ನು ಅಸಂವಿಧಾನಿಕ ಎಂದಿರುವ ಉನ್ನತ ನ್ಯಾಯಾಲಯ ಅದನ್ನು ರದ್ದು ಮಾಡಿ, ಬಾಂಡ್​ ವಿವರಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು. ಅದರಂತೆ ಮಾರ್ಚ್​ 15ರ ಶುಕ್ರವಾರದಂದು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಚುನಾವಣಾ ಬಾಂಡ್​ ವಿವರಗಳನ್ನು ಅಪ್​ಲೋಡ್​ ಮಾಡಲಿದೆ. ಇದರಿಂದ ನಾವು ಏನನ್ನು ನಿರೀಕ್ಷೆ ಮಾಡಬಹುದು? ಮತ್ತು ಯಾರು, ಯಾರಿಗೆ ಎಷ್ಟು ಹಣ ನೀಡಿದರು ಎಂಬುದನ್ನು ನಾವು ತಿಳಿಯಬಹುದೇ? ಇಲ್ಲಿದೆ ಮಾಹಿತಿ.

    2019 ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೂ ಸುಪ್ರೀಂಕೋರ್ಟ್​ ತಿಳಿಸಿತ್ತು. ಅಲ್ಲದೆ, ಚುನಾವಣಾ ಬಾಂಡ್​ಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್​ಗಳಿಗೆ ಸೂಚನೆ ನೀಡಿತು. ಇದರ ಮಧ್ಯೆ ಗಡುವು ವಿಸ್ತರಣೆ ಕೋರಿ ಎಸ್​ಬಿಐ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಛೀಮಾರಿ ಹಾಕಿದ ಕೋರ್ಟ್​ ಮಾರ್ಚ್​ 12ರಂದು ವಿವರ ಸಲ್ಲಿಸುವಂತೆ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಎಸ್​ಬಿಐ ಚುನಾವಣಾ ಆಯೋಗಕ್ಕೆ ವಿವರವನ್ನು ಸಲ್ಲಿಸಿದ್ದು, ಇದನ್ನು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಲಿದೆ. ಚುನಾವಣಾ ಬಾಂಡ್​ ಖರೀದಿ ಮಾಡಿದ ಪ್ರತಿಯೊಬ್ಬರ ಮಾಹಿತಿ, ಖರೀದಿದಾರರ ಹೆಸರು ಮತ್ತು ಪ್ರತಿ ರಾಜಕೀಯ ಪಕ್ಷವು ಸ್ವೀಕರಿಸಿದ ಚುನಾವಣಾ ಬಾಂಡ್​ ಕೊಡುಗೆಗಳ ವಿವರಗಳು ಹಾಗೂ ಬಾಂಡ್​ನ ಮೌಲ್ಯ ಸೇರಿದಂತೆ ಅನೇಕ ವಿವರಗಳು ಇದಲಿರಲಿದೆ.

    ಚುನಾವಣೆ ಆಯೋಗ ಏನು ಮಾಡಲಿದೆ?
    ಚುನಾವಣಾ ಆಯೋಗ ಮೊದಲಿಗೆ ಎರಡು ಮುಖ್ಯ ಕೆಲಸಗಳನ್ನು ಮಾಡಲಿದೆ. ಮೊದಲನೆಯದು ಇಂದು ಅಥವಾ ಕೆಲವು ಸಮಯದ ಬಳಿಕ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳಿಗೆ ಚುನಾವಣಾ ಬಾಂಡ್​ ಕೊಡುಗೆಗಳ ಕುರಿತು ತನ್ನದೇ ಆದ ಡೇಟಾವನ್ನು ಅಪ್‌ಲೋಡ್ ಮಾಡಲಿದೆ. ಎರಡನೆಯದು ಮಾರ್ಚ್​ 15ರ ಒಳಗೆ ಎಸ್​ಬಿಐ ನೀಡಿದ ವಿವರಗಳನ್ನು ಆಯೋಗ ಅಪ್​ಲೋಡ್​ ಮಾಡಬೇಕಿದೆ.

    ಮೊದಲ ಡೇಟಾ ಸೆಟ್ ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿದೆ. ಚುನಾವಣಾ ಬಾಂಡ್​ ಸಂಬಂಧಿತ ಎಲ್ಲ ಡೇಟಾವು ಒಂದೇ ಸ್ಥಳದಲ್ಲಿರುವಂತೆ ಅದನ್ನು ಅಪ್‌ಲೋಡ್ ಮಾಡಲು ಸುಪ್ರೀಂಕೋರ್ಟ್​ ಆಯೋಗವನ್ನು ಕೇಳಿದೆ. ಇದರಿಂದ ಚುನಾವಣಾ ಬಾಂಡ್​​ಗಳ ಖರೀದಿಯ ದಿನಾಂಕ, ಅವುಗಳ ಮೊತ್ತ ಸೇರಿದಂತೆ ಬಾಂಡ್​ಗಳನ್ನು ಖರೀದಿಸಿದವರ ಸಂಪೂರ್ಣ ಪಟ್ಟಿಯನ್ನು ನಾವು ಹೊಂದಲಿದ್ದೇವೆ. ಅಲ್ಲದೆ, ಬಾಂಡ್​ಗಳನ್ನು ಸ್ವೀಕರಿಸಿದವರ ವಿವರವೂ ಸಹ ಲಭ್ಯವಾಗಲಿದೆ.

    ಯಾರ್ಯಾರು ಯಾವ ಪಕ್ಷಕ್ಕೆ ಎಷ್ಟು ಕೊಟ್ಟರು ಎಂಬುದು ಗೊತ್ತಾಗಲಿದೆಯಾ?
    ಮೂರು ಕಾರಣಗಳಿಂದಾಗಿ ಈ ಮಾಹಿತಿ ಕೊಂಚ ಕಷ್ಟವಾಗಬಹುದು. ಏಕೆಂದರೆ, ಮೊದಲನೆಯದಾಗಿ ಬಾಂಡ್​ ಸ್ವೀಕರಿಸುವವರೊಂದಿಗೆ ದಾನಿಗಳನ್ನು ಹೊಂದಿಸಲು ಮಾಹಿತಿ ಕೇಳುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮೊದಲೇ ಹೇಳಿದೆ. ಉದಾಹರಣೆಗೆ X ಕಂಪನಿಯು 100 ರೂಪಾಯಿ ಮೌಲ್ಯದ ಚುನಾವಣಾ ಬಾಂಡ್​ ಖರೀದಿಸಿದೆ ಮತ್ತು Y ಪಕ್ಷವು 100 ರೂಪಾಯಿ ಬಾಂಡ್​ ಪಡೆದಿದೆ ಎಂದು ತೋರಿಸಿದರೆ, X, Yಗೆ ನೀಡಿದೆ ಎಂದು ಭಾವಿಸಲಾಗದು ಅಥವಾ ಹೇಳಲಾಗದು. ಎರಡನೇಯದಾಗಿ ಎಸ್​ಬಿಐ ಒದಗಿಸಿದ ವಿವರಗಳು ಪ್ರತಿ ಬಾಂಡ್‌ಗೆ ನಿಯೋಜಿಸಲಾದ “ವಿಶೇಷ ಸಂಖ್ಯೆ” ಅನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಈ ಸಂಖ್ಯೆಯು ಖರೀದಿದಾರರು ಮತ್ತು ಸ್ವೀಕರಿಸುವವರಿಗೆ ತಿಳಿದಿದ್ದಲ್ಲಿ ಪಕ್ಷಗಳಿಗೆ ನೀಡಿದ ದೇಣಿಗೆಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ. ಆದರೆ, ಬೇನಾಮಿ ಹೆಸರಿನಲ್ಲಿ ನೀಡಿದ್ದರೆ ಅದನ್ನು ಪತ್ತೆಹಚ್ಚುವುದು ತುಸು ಕಷ್ಟವಾಗುತ್ತದೆ.

    ಮೂರನೇಯದು ಒಂದು ವೇಳೆ ವಿಶೇಷ ಸಂಖ್ಯೆಗಳು ಲಭ್ಯವಿದ್ದರೂ ಸಹ, ದಾನಿಯ ‘ನಿಜವಾದ’ ಗುರುತನ್ನು ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ ಚುನಾವಣಾ ಬಾಂಡ್​ಗಳನ್ನು ಪರಿಚಯಿಸಿದಾಗ, ಕಂಪನಿಗಳ ಕಾಯಿದೆಯಲ್ಲಿನ ತಿದ್ದುಪಡಿಗಳು ಯಾವುದೇ ಕಂಪನಿಗೆ, ಎಷ್ಟೇ ನಷ್ಟವಾಗಿದ್ದರೂ, ಬಾಂಡ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತು. ತಜ್ಞರು ಹೇಳುವಂತೆ ಬಾಂಡ್​ಗಳನ್ನು ರಾಜಕೀಯ ನಿಧಿಯ ಉದ್ದೇಶಕ್ಕಾಗಿ ‘ಶೆಲ್ ಕಂಪನಿ’ ಸ್ಥಾಪಿಸಲು ದೊಡ್ಡ ದೊಡ್ಡ ಕಾರ್ಪೊರೇಟ್​ ಕಂಪನಿಗಳಿಗೆ ಅನುಮತಿಸುತ್ತದೆ. ಹೀಗಾಗಿ ಪತ್ತೆಹಚ್ಚುವುದು ತುಂಬಾ ಕಷ್ಟ. ಒಂದು ವೇಳೆ ನೀವು ‘ಫ್ಲೆಮಿಂಗೊ’ ಎಂಬ ಹೆಸರಿನ ಕಂಪನಿಯು ದೊಡ್ಡ ದಾನಿ ಎಂದು ಹೇಳುವುದಾದರೆ, ಅದೇ ಸಮಯದಲ್ಲಿ ‘ಫ್ಲೆಮಿಂಗೊ’ ಒಂದು ಸ್ಥಾಪಿತ ಕಂಪನಿಯಲ್ಲ ಎಂದು ಮನವರಿಕೆ ಮಾಡಿದಾಗ ಫ್ಲೆಮಿಂಗೊ ಹಿಂದಿರುವ ಅಸಲಿ ದಾನಿ ಯಾರು ಎಂದು ಪತ್ತೆಹಚ್ಚುವುದು ತುಂಬಾ ಕಷ್ಟಕರವಾಗಿರುತ್ತದೆ. (ಏಜೆನ್ಸೀಸ್​)

    ಚುನಾವಣಾ ಬಾಂಡ್​ಗಳಿಗೆ ಬ್ರೇಕ್​ ಹಾಕಿದ ಸುಪ್ರೀಂಕೋರ್ಟ್​! ಅಸಂವಿಧಾನಿಕ ಎಂದು ತೀರ್ಪು

    ಚುನಾವಣಾ ಆಯೋಗಕ್ಕೆ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ!

    ಅಮೆರಿಕ​ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿ ಸ್ಥಾನ ಭದ್ರಪಡಿಸಿಕೊಂಡ ಬೈಡೆನ್, ಗೆಲುವಿನ ಸನಿಹದಲ್ಲಿ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts