More

    ಬಿಬಿಎಂಪಿ ವ್ಯಾಪ್ತಿಯಲ್ಲಿ 1.01 ಕೋಟಿ ಮಂದಿಗೆ ಮತ ಹಕ್ಕು

    ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 1.01 ಕೋಟಿ ಮಂದಿ ಮತ ಚಲಾಯಿಸಲು ಅವಕಾಶ ಹೊಂದಿದ್ದಾರೆ. 52.16 ಲಕ್ಷ ಪುರುಷರು, 49.09 ಲಕ್ಷ ಮಹಿಳೆಯರು ಹಾಗೂ 1,820 ಇತರ ಮತದಾರರಿದ್ದು, ಶುಕ್ರವಾರ (ಏ.26) ನಡೆಯಲಿರುವ ಮತದಾನಕ್ಕೆ ಎಲ್ಲ ಸಿದ್ಧತೆಯನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ.

    ಈ ಬಾರಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಸುವ ಹಿನ್ನೆಲೆಯಲ್ಲಿ ಮಹಾನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವ 8,984 ಮತಗಟ್ಟೆಗಳ ಪೈಕಿ ಅರ್ಧದಷ್ಟು ಕಡೆ (4,492 ಮತಗಟ್ಟೆ) ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ನಿಯಮದಂತೆ ಶೇ.25 ಮತಗಟ್ಟೆಗಳಲ್ಲಿ ಈ ವ್ಯವಸ್ಥೆ ಮಾಡಬೇಕಿದ್ದರೂ, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳು ಹೆಚ್ಚಿರುವ ಕಾರಣ ಇಲ್ಲೆಲ್ಲಾ ಮತದಾನದ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,564 ಮತಗಟ್ಟೆ ಕೇಂದ್ರಗಳಿದ್ದು, ಇಲ್ಲೆಲ್ಲ 8,984 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 2,003 ಸೂಕ್ಷ್ಮ, 253 ಅತಿ ಸೂಕ್ಷ್ಮ ಹಾಗೂ 30 ಎಕ್ಸೆಪೆಂಡೀಚರ್ ಸೆನ್ಸಿಟಿವ್ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರವಾರು ಮಸ್ಟರಿಂಗ್ ಕೇಂದ್ರವನ್ನು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಮತಗಟ್ಟೆಗಳಲ್ಲಿ 43,123 ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.

    ಹಿರಿಯರಿಗೆ ಸೌಲಭ್ಯ:

    ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲದೆ ಮತ ಹಾಕಲು ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಅವಕಾಶ ಇದೆ. ‘ಸಕ್ಷಮ್’ ತಂತ್ರಾಂಶದ ಮೂಲಕ ಸಾರಿಗೆ ಸೌಲಭ್ಯವನ್ನು ಪಡೆಯಲು ಮತದಾನದ ಹಿಂದಿನ ದಿನವೇ ಈ ಎರಡೂ ವರ್ಗದವರು ಹೆಸರು ನೋಂದಣಿ ಮಾಡಿಕೊಳ್ಳಬಹುದು. ಇಂತಹವರು ಮತದಾನದ ದಿನ ನೇರವಾಗಿ ಬಂದು ಮತ ಚಲಾಯಿಸಬಹು.

    ಐವಿಆರ್‌ಎಸ್ ಹಾಗೂ ಬಲ್ಕ್ ಎಸ್‌ಎಂಎಸ್ ಮೂಲಕ ಏ.26ರಂದು ತಪ್ಪದೇ ಮತದಾನ ಮಾಡಲು ಮೊಬೈಲ್ಗಳಿಗೆ ಸಂದೇಶಗಳನ್ನು ಕಳುಹಿಸಲಾಗುವುದು ಎಂದು ತುಷಾರ್ ಗಿರಿನಾಥ್ ವಿವರಿಸಿದರು.

    ರಾಜಧಾನಿಯಲ್ಲಿರುವ ಮತದಾರರ ವಿವರ:
    ಒಟ್ಟು ಮತದಾರರು: 1,01,27,869
    ಪುರುಷ ಮತದಾರರು: 52,16,091
    ಮಹಿಳಾ ಮತದಾರರು: 49,09,958
    ಇತರ ಮತದಾರರು: 1,820
    ಯುವ ಮತದಾರರು: 1,60,232
    ಎನ್‌ಆರ್‌ಐ ಮತದಾರರು: 2,158
    ಸೇವಾ ಮತದಾರರು: 1,665

    224 ವಿಶೇಷ ಬೂತ್ ಸ್ಥಾಪನೆ:

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆಗಲು ಆಯೋಗ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಬಾರಿ ಶೇ.65 ಮತ ಚಲಾವಣೆಯಾಗುವ ನಿರೀಕ್ಷೆ ಇದೆ. ಮತದಾನದ ದಿನ ಕೆಲವೆಡೆ ಥೀಮ್ ಆಧಾರಿತ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ಮತಗಟ್ಟೆಗಳು ಮಹಿಳಾ ಮತದಾರರಿಗೆ ಮೀಸಲಿರುತ್ತವೆ. ಜತೆಗೆ ಕ್ಷೇತ್ರಕ್ಕೊಂದರಂತೆ ತಲಾ ಒಂದು ಯುವ ಮತಗಟ್ಟೆ, ಅಂಗವಿಕಲರ ಮತಗಟ್ಟೆ ಮತ್ತು ಎಥ್ನಿಕ್ ಮತಗಟ್ಟೆ ಸೇರಿ ಒಟ್ಟು 224 ವಿಶೇಷ ಬೂತ್‌ಗಳು ಕಾರ್ಯಾಚರಣೆ ಮಾಡಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts