More

    ತುಮಕೂರು ಜಿಲ್ಲೆಯಲ್ಲಿ ಕರೊನಾ ರಣಕಹಳೆ ; ಒಂದೇ ದಿನ 20 ಸೋಂಕು ಪ್ರಕರಣ ದಾಖಲು, 6ಕ್ಕೇರಿದ ಸಾವಿನ ಸಂಖ್ಯೆ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ರಣಕಹಳೆ ಊದಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಅಪಘಾತಕ್ಕೀಡಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಮಂಗಳವಾರ ಸಾವನ್ನಪ್ಪಿದ್ದು ಆತನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಡೀ ಆಸ್ಪತ್ರೆ ವೈದ್ಯಕೀಯ, ಶುಶ್ರೂಷಕ ಹಾಗೂ ಇತರ ಸಿಬ್ಬಂದಿ ಈಗ ಸಹಜವಾಗಿ ಆತಂಕಕ್ಕೊಳಗಾಗಿದ್ದಾರೆ.

    ಮರಳೂರು ದಿಣ್ಣೆ ನಿವಾಸಿ, 29 ವರ್ಷದ ಯುವಕ ಜೂ.26ರಂದು ಅಪಘಾತಕ್ಕೀಡಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದ. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕೋವಿಡ್ ಮಾರ್ಗಸೂಚಿ ಅನ್ವಯ ಮೃತನ ಅಂತ್ಯಕ್ರಿಯೆಯನ್ನು ಸುರಕ್ಷಿತವಾಗಿ ನೆರವೇರಿಸಲಾಗಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ವಿಜಯವಾಣಿಗೆ ಮಾಹಿತಿ ನೀಡಿದರು. ಮಂಗಳವಾರ ಜಿಲ್ಲೆಯಲ್ಲಿ 20 ಪ್ರಕರಣ ದಾಖಲಾಗಿದ್ದು ತುಮಕೂರು 6, ಪಾವಗಡ 5, ಕುಣಿಗಲ್ 3, ಕೊರಟಗೆರೆ 1, ಮಧುಗಿರಿ 2 ಹಾಗೂ ಶಿರಾದಲ್ಲಿ 3 ಪ್ರಕರಣ ದಾಖಲಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 113ಕ್ಕೇರಿದೆ, 6 ಮಂದಿ ಮೃತಪಟ್ಟಿದ್ದಾರೆ.

    ಬಿಎಂಟಿಸಿ ಡ್ರೈವರ್‌ಗೂ ಸೋಂಕು: ಬೆಂಗಳೂರಿನ ಯಶವಂತಪುರ ಡಿಪೋದಲ್ಲಿ ಕಾರ್ಯನಿರ್ವಹಿಸುವ ತುಮಕೂರಿನ ಶ್ರೀನಗರ ನಿವಾಸಿ, 55 ವರ್ಷದ ವ್ಯಕ್ತಿಗೂ ಕರೊನಾ ಸೋಂಕು ತಗುಲಿದೆ. ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾಗ ಗಂಟಲುದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ಇರುವುದು ದೃಢವಾಗಿದೆ. ಆತನ ಪ್ರಾಥಮಿಕ 4, ದ್ವಿತೀಯ ಸಂಪರ್ಕದಲ್ಲಿದ್ದ ಮೂವರನ್ನು ಪತ್ತೆ ಹಚ್ಚಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈತ ಚಾಲಕ ಕಂ ನಿರ್ವಾಹಕ ಆಗಿದ್ದು, ಇದು ಸಾಕಷ್ಟು ಆತಂಕಕ್ಕೂ ಕಾರಣವಾಗಿದೆ.

    ದಂಪತಿಗೂ ಕರೊನಾ: ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಬಂದಿದ್ದ ಪತಿ, ಪತ್ನಿಗೂ ಸೋಂಕು ತಗುಲಿದೆ. ಚಿಕ್ಕಪೇಟೆ ನಿವಾಸಿಗಳಾದ ಈ ದಂಪತಿಗೂ ಕರೊನಾ ದೃಢವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಪತ್ತೆಹಚ್ಚಲಾಗಿದೆ.

    ರೈಲ್ವೆ ಉದ್ಯೋಗಿಗೂ ಪಾಸಿಟಿವ್: ರೈಲ್ವೆ ಉದ್ಯೋಗಿ, ಗಾಂಧಿನಗರ ನಿವಾಸಿ 33 ವರ್ಷದ ವ್ಯಕ್ತಿ ಆಂಧ್ರ, ತಮಿಳುನಾಡಿಗೆ ಹೋಗಿ ಜೂ.26ರಂದು ಬಂದಿದ್ದರು. ಅವರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಯನ್ನು ಪತ್ತೆಹಚ್ಚಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರದ ಬುದ್ಧಿಮಾಂದ್ಯ 53 ವರ್ಷದ ವ್ಯಕ್ತಿಯೊಬ್ಬನಿಗೂ ಸೋಂಕು ದೃಢಪಟ್ಟಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

    ಸಹೋದರರಿಗೆ ಸೋಂಕು : ಮಧುಗಿರಿ ತಾಲೂಕಿನ ಬಂದ್ರೇಹಳ್ಳಿಯ ತೋಟದ ಮನೆಯಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿದ್ದ ಪೂನಾದಿಂದ ಆಗಮಿಸಿದ ಅಣ್ಣ, ಅತ್ತಿಗೆಯನ್ನು ಜೂ.20ರಂದು ಗೌರಿಬಿದನೂರು ರೈಲ್ವೆ ನಿಲ್ದಾಣದಿಂದ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ 25 ವರ್ಷದ ತಮ್ಮನಿಗೂ ಹಾಗೂ 28 ವರ್ಷದ ಅಣ್ಣನಿಗೂ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅತ್ತಿಗೆಗೆ ನೆಗೆಟಿವ್ ಬಂದಿದೆ. ಕಳೆದ ವಾರ ಪುಣೆಯಿಂದ ಆಗಮಿಸಿದ್ದರಿಂದ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಹೊರರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಅಂದೇ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೊದಲ ಬಾರಿ ನೆಗಟಿವ್ ಬಂದಿತ್ತು. ಜೂ.26 ರಂದು 2ನೇ ಬಾರಿ ಕಳುಹಿಸಿದ್ದು, ಅಣ್ಣ, ತಮ್ಮ ಇಬ್ಬರಲ್ಲೂ ಸೋಂಕು ದೃಢಪಟ್ಟಿದೆ. ಇಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ 7, ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರನ್ನು ಪತ್ತೆಹಚ್ಚಲಾಗಿದೆ.

    ಪಾವಗಡದಲ್ಲಿ ಟ್ರಾವಲ್ ಹಿಸ್ಟರೀ ಸಿಗುತ್ತಿಲ್ಲ!: ಪಾವಗಡದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದೆ, ಮಂಗಳವಾರ 5ಜನರಿಗೆ ಸೋಂಕು ದೃಢವಾಗಿದ್ದು ಯಾರೊಬ್ಬರಿಗೂ ಹೊರ ಜಿಲ್ಲೆ, ರಾಜ್ಯದ ಟ್ರಾವಲ್ ಹಿಸ್ಟರಿಯೇ ಇಲ್ಲ. ಎಸ್.ಆರ್.ಪಾಳ್ಯದಲ್ಲಿಯೇ 38, 63 ಹಾಗೂ 5 ವರ್ಷದ ಮಗು ಸೇರಿ ಮೂರು ಜನರಿಗೆ ಸೋಂಕು ಕಾಣಿಸಿದೆ, ಪಾವಗಡ ಪಟ್ಟಣದ ಸಾಯಿರಾಮ್ ಛತ್ರದ ಮುಂಭಾಗದಲ್ಲಿ 28 ವರ್ಷದ ಪುರುಷನಿಗೆ ಹಾಗೂ ಸೋಲಾನಾಯಕನಹಳ್ಳಿಯಲ್ಲಿ 75 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದ್ದು ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲು ಹರಸಾಹಸ ನಡೆಸಲಾಗುತ್ತಿದೆ.

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೂ ಕರೊನಾ : ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಒಂದರಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸೇರಿ ಮೂರು ಮಂದಿಗೆ ಕರೊನಾ ಸೋಂಕು ತಗುಲಿರುವುದು ತಾಲೂಕಿನ ಜನರನ್ನು ಬೆಚ್ಚು ಬೀಳಿಸಿದೆ. ಅಮೃತೂರು ಹೋಬಳಿ ದೊಡ್ಡಕಲ್ಲಹಳ್ಳಿಯ 17 ವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹಾಗೂ ಶೆಟ್ಟಿಪುರದ 36 ವರ್ಷದ ವ್ಯಕ್ತಿ ಹಾಗೂ ಸೆಣಬದ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಯಾಣ ಹಿನ್ನೆಲೆಯಿಲ್ಲದವರಿಗೆ ಸೋಂಕು ಬೆಂಗಳೂರಿನಿಂದ ಬಂದ ವ್ಯಕ್ತಿಗಳಿಂದ ಹರಡಿರಬಹುದು ಎಂದು ಹೇಳಲಾಗುತ್ತಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 5ಕ್ಕೇರಿದೆ.

    ಖಾಸಗಿ ಚಿಕಿತ್ಸೆ ಪಡೆದ ಮೂವರಿಗೆ ಸೋಂಕು: ಶಿರಾದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಾಲೂಕಿನ ಕರಿಕಂಬದಹಳ್ಳಿಯ 18 ವರ್ಷದ ಯುವಕ, ಸೊಪ್ಪಿನಹಟ್ಟಿನ 64 ವರ್ಷದ ವೃದ್ಧ ಹಾಗೂ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದ ಖರಡಿ ಮೊಹಲ್ಲಾದ 73 ವರ್ಷದ ವೃದ್ಧನಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಶಿರಾ ತಾಲೂಕಿನಲ್ಲಿ ನಿರಂತರವಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಗ್ರಾಮಗಳಿಗೂ ಹಬ್ಬಿರುವುದು ಆತಂಕ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts