More

    ಸರ್ಕಾರ ಮಾತು ತಪ್ಪಿದರೆ ಮತ್ತೆ ಹೋರಾಟ-ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಾಲಾಕ್ಷಿ ಹೇಳಿಕೆ

    ದಾವಣಗೆರೆ: ಸರ್ಕಾರಿ ನೌಕರರಿಗೆ ಶೇ.17ರಷ್ಟು ಮಧ್ಯಂತರ ಭತ್ಯೆ ಹಾಗೂ ಸಮಿತಿ ರಚಿಸುವ ಮೂಲಕ ಹಳೆಯ ಮಾದರಿಯ ಪಿಂಚಣಿ ಜಾರಿಗೆ ತರಲು ಮುಂದಿನ ಎರಡು ತಿಂಗಳೊಳಗಾಗಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ನೀಡಿರುವ ಭರವಸೆ ಆಧಾರದ ಮೇಲೆ ಮುಷ್ಕರ ಹಿಂಪಡೆಯಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಾಲಾಕ್ಷಿ ಹೇಳಿದರು.
    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸದ್ಯಕ್ಕೆ ಮುಷ್ಕರ ಹಿಂಪಡೆಯುತ್ತಿದ್ದೇವೆ. ಆದರೆ ಪೂರ್ಣ ಪ್ರಮಾಣದ ಭರವಸೆ ಈಡೇರುವವರೆಗೆ ನಮ್ಮ ಹೋರಾಟವನ್ನು ಸಂಘಟಿಸುವ ಮೂಲಕ ಜೀವಂತ ಇರಿಸಲಾಗುವುದು ಎಂದರು.
    ಮುಷ್ಕರದಿಂದ ಜನಸಾಮಾನ್ಯರು, ರೈತರು ಹಾಗೂ ರೋಗಿಗಳಿಗೆ ಆದ ತೊಂದರೆ ಬಗ್ಗೆ ವಿಷಾದವಿದೆ. ಕೆಲ ವರ್ಷಗಳಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುತ್ತಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ನಿರ್ಲಕ್ಷಿಸಿದ್ದರಿಂದ ಹೋರಾಟಕ್ಕೆ ಇಳಿಯಬೇಕಾಯಿತು ಎಂದು ತಿಳಿಸಿದರು.
    ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರಿದ್ದಾರೆ. ಈಗ ಸರ್ಕಾರ ನೀಡಿರುವ ಭರವಸೆ ತೃಪ್ತಿಯಾಗಿಲ್ಲ. ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರ ಸಮಿತಿ ರಚಿಸಿ ವರದಿ ನೀಡಿದ ಬಳಿಕ ನಿರ್ಧರಿಸುವುದಾಗಿ ಸರ್ಕಾರ ಹೇಳಿದೆ. ಈ ಸಂಬಂಧ ಸರ್ಕಾರ ಮಾತು ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ತಿಪ್ಪೇಸ್ವಾಮಿ, ಡಾ. ಉಮೇಶ್, ಪರಶುರಾಮಪ್ಪ, ರಾಮಪ್ಪ, ಹಾಲಪ್ಪ, ಮುಬಾರಕ್ ಅಲಿ, ಜಗದೀಶ್, ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts