More

    ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಖಚಿತ

    ಮದ್ದೂರು: ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೂ ಅನುಕೂಲವಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬರಬೇಕು. ಕಾಂಗ್ರೆಸ್‌ನಿಂದ ಮಾತ್ರ ದಕ್ಷ ಆಡಳಿತ ನೀಡಲು ಸಾಧ್ಯ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

    ತಾಲೂಕಿನ ಮರಳಿಗ ಗ್ರಾಮದ ಬಸವೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಕಾಂಗ್ರೆಸ್ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸುಳ್ಳು ಆಶ್ವಾಸನೆ ಹೇಳಿಕೊಂಡು ಅಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಯಾವುದೇ ಅನುಕೂಲ ಕಲ್ಪಿಸದೆ ಕಾಲಹರಣ ಮಾಡಿವೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜೆಡಿಎಸ್ ಪಕ್ಷ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಮೋಸ ಮಾಡಿಲ್ಲ. ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬಲಿಷ್ಠ ಮಾಡಿದ್ದು ನಾನು. ಅಂದು ಜಿ.ಮಾದೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದರು. ಅಂದು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರೆ ನಾನು ಇಂದು ರಾಜಕೀಯವಾಗಿ ಎಲ್ಲೋ ಇರುತ್ತಿದ್ದೆ ಎಂದು ಹೇಳಿದರು.

    ರಾಜ್ಯದಲ್ಲಿ ಶೇ.40 ಪರ್ಸೆಂಟ್ ಕಮಿಷನ್ ಸರ್ಕಾರ ನಡೆಯುತ್ತಿದೆ. ನಾಗಮಂಗಲ ಕೂಡ ಅದಕ್ಕೆ ಹೊರತಾಗಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಾಗಮಂಗಲದಲ್ಲಿ ಕಳೆದ 5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಬಿಟ್ಟರೆ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದರು.

    ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ ಗೆಲ್ಲಲೇಬೇಕು ಎಂದರು.
    ವಿಧಾನ ಪರಿಷತ್ ಸದಸ್ಯ ಮಧುಜಿ.ಮಾದೇಗೌಡ ಮಾತನಾಡಿ, ಜಿಲ್ಲೆ ಮತ್ತು ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬರುವುದು ಖಚಿತ. ಹೇಳಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

    ಕಾರ್ಯಕ್ರಮಕ್ಕೂ ಮುನ್ನ ಗುಡಿದೊಡ್ಡಿ ಗ್ರಾಮದಿಂದ ಚಲುವರಾಯಸ್ವಾಮಿ, ದಿನೇಶ್‌ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಅವರನ್ನು ತೆರೆದ ವಾಹನದಲ್ಲಿ ಕಾಂಗ್ರೆಸ್ ಮುಖಂಡರು ನೂರಾರು ಬೈಕ್ ಜಾಥಾ ಮೂಲಕ ಕರೆತಂದರು. ಮರಳಿಗ ಗ್ರಾಮದಲ್ಲಿ ಭಾರಿ ಗಾತ್ರದ ಸೇಬಿನ ಹಾರ ಹಾಕಿ ಸನ್ಮಾನಿಸಲಾಯಿತು. ಇದೇ ವೇಳೆ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
    ಚಿತ್ರನಟ ಸಚಿನ್ ಚೆಲುವರಾಯಸ್ವಾಮಿ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿಗೌಡ, ಯುವ ಮುಖಂಡ ಗಟ್ಟಳ್ಳಿ ಹರೀಶ್, ಮುಖಂಡರಾದ ಸ್ವಾಮಿ, ಎಂ.ಬಿ.ವೆಂಕಟೇಶ್. ಎಂ.ಸಿ.ಯೋಗಾನಂದ ಜವಹರ್‌ಲಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts