ವರ್ಚಸ್ಸು ವೃದ್ಧಿ, ಚುನಾವಣೆ ತಯಾರಿಗೆ ಕಾಂಗ್ರೆಸ್ ಒತ್ತು

2 Min Read
dk

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಲಿತಾಂಶ ಬಾರದಿರುವುದರಿಂದ ಚಡಪಡಿಕೆಯಲ್ಲಿರುವ ಕಾಂಗ್ರೆಸ್ ಇದೀಗ ಸಂಘಟನೆ ಬಲವರ್ಧನೆ ಹಾಗೂ ಮುಂಬರುವ ಸಾಲುಸಾಲು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ತಯಾರಿ ಆರಂಭಿಸಿದೆ.

ಸರ್ಕಾರದ ಯೋಜನೆ ಲಾನುಭವಿಗಳನ್ನು ಮತವಾಗಿ ಪರಿವರ್ತಿಸುವುದು, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ, ಸ್ಥಳೀಯವಾಗಿ ಜವಾಬ್ದಾರಿ ವಹಿಸಿಕೊಳ್ಳುವುದು, ಗುರಿ ನಿಗದಿ ಮಾಡಿ ಅದನ್ನು ತಲುಪುವುದು ಸೇರಿ ವಿವಿಧ ವಿಚಾರದಲ್ಲಿ ಎಲ್ಲಾ ಹಂತ, ಎಲ್ಲಾ ವರ್ಗದ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಕೆಪಿಸಿಸಿ ಕೈಹಾಕಿದೆ.

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರು ಪಕ್ಷದ ಹಿರಿಯ ಮುಖಂಡರ ಸಭೆ ನಡೆಸಿದರು. 

ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಅನುಭವ ಹೊಂದಿರುವರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ ಸ್ವೀಕರಿಸಿದರು. ಬಳಿಕ ಸಭೆ ಬಗ್ಗೆ ಮಾಹಿತಿ ಹಂಚಿಕೊಂಡ ಡಿ.ಕೆ.ಶಿವಕುಮಾರ್, ಪಕ್ಷದ ಮೂಲ ಸಿದ್ಧಾಂತವನ್ನು ಯಾವ ಕಾರಣಕ್ಕೂ ಕೈ ಬಿಡಬಾರದು ಎಂದು ಹಿರಿಯ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾರ್ಯಕರ್ತರ ಪಕ್ಷವಾಗಿ ಮಾಡಲು ಹಾಗೂ ತಳಮಟ್ಟದಿಂದ ಪಕ್ಷ ಬಲಪಡಿಸುವ ಬಗ್ಗೆ ನಮ್ಮ ನಾಯಕರು ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆ ಬಗ್ಗೆಯೂ ಮಾರ್ಗದರ್ಶನಗಳನ್ನು ನೀಡಿದ್ದಾರೆ ಎಂದರು.

ಈ ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಿ.ಎಲ್.ಶಂಕರ್, ಪ್ರೊ.ರಾಜೀವ್ ಗೌಡ, ವಿ.ಎಸ್.ಉಗ್ರಪ್ಪ, ಲಕ್ಷ್ಮಣ ಸವದಿ, ಬಿ.ಎಲ್ ಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಂತರ ನಡೆದ ನಿಗಮ, ಮಂಡಳಿ ಅಧ್ಯಕ್ಷರ ಜತೆಗಿನ ಸಭೆಯಲ್ಲಿ ಅಧ್ಯಕ್ಷರು ಎಚ್ಚರಿಕೆ ಪಾಠ ಮಾಡಿದರಲ್ಲದೇ, ಪಕ್ಷಕ್ಕೆ ಕೊಡುಗೆ ನೀಡುವಂತೆ ಸೂಚನೆ ನೀಡಿದರು.

ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಜನರ ಬಳಿ ವರ್ತನೆ ಹೇಗಿರಬೇಕು, ಕೆಲಸಗಳನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಲ್ಲದೇ, ಕೆಲವೊಂದಷ್ಟು ಜನ ಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

See also  11 ಗಂಟೆ ನಂತರ ಹೆದ್ದಾರಿ ಬಳಿ ಹೋಟೆಲ್‌ಗಳು ಬಂದ್

ಮುಂದೆ ಮಹಿಳಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಹಿಳಾ ಮತದಾರರನ್ನು ಸೆಳೆಯಲು ಯಾವ ರೀತಿ ಕಾರ್ಯಕ್ರಮ ರೂಪಿಸಿದರೆ ಉತ್ತಮ ಎಂದು ಅಭಿಪ್ರಾಯ ಸಂಗ್ರಹಿಸಲಾಗುತ್ತದೆಯಲ್ಲದೇ ಪಕ್ಷದ ಚಿಂತನೆಯನ್ನು ಅವರಿಗೆ ತಿಳಿಸಲಾಗುತ್ತದೆ. ಬಳಿಕ ಮುಂಚೂಣಿ ಘಟಕಗಳ ಸಭೆ ನಡೆಸಿ ಅವರ ಜವಾಬ್ದಾರಿಯನ್ನು ತಿಳಿಸಲಾಗುತ್ತದೆ. ಶಾಸಕರ ಸಭೆಯನ್ನೂ ಕರೆದು ಪಕ್ಷದ ಕೇಡರ್ ಬಲಪಡಿಸುವ ಗುರಿ ನೀಡಲು ಉದ್ದೇಶಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಈ ಭಾಗದ ವಿವಿಧ ಘಟಕದ ಅಧ್ಯಕ್ಷರ ಸಭೆ ಕರೆದು ಚುನಾವಣೆ ತಯಾರಿಗೆ ಸೂಚನೆ ನೀಡಲಾಗುತ್ತದೆ. ಎಲ್ಲೆಲ್ಲಿ ಸಂಘಟನೆ ಸಕ್ರಿಯವಾಗಿಲ್ಲವೋ ಅಲ್ಲೆಲ್ಲ ಸಂಘಟನೆ ಪುನಾರಚನೆಗೂ ಒತ್ತು ನೀಡುವ ಕೆಲಸ ಈ ವೇಳೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ವಿವರಿಸಿದರು.

ಪಕ್ಷವನ್ನು ತಳಮಟ್ಟದಿಂದ ಹೊಸ ರೂಪದಲ್ಲಿ ಡೆವಲಪ್ ಮಾಡುವ ನಿಟ್ಟಿನಲ್ಲಿ ಸರಣಿ ಸಭೆ ನಡೆಯುತ್ತಿದೆ. ಅಭಿಪ್ರಾಯ ಸಂಗ್ರಹಿಸುವ ಜತೆಗೆ ಸಂಬಂಧಪಟ್ಟವರಿಗೆ ಅವರ ಜವಾಬ್ದಾರಿ ಬಗ್ಗೆ ಎಚ್ಚರಿಸಲಾಗುತ್ತಿದೆ. 

– ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ

Share This Article