More

    ಮಳೆಗಾಲಕ್ಕೆ ನೆಡಲು 6.39 ಲಕ್ಷ ಸಸ್ಯ ಪಾಲನೆ -ವಿತರಣೆಗೆ ಸಾಮಾಜಿಕ ಅರಣ್ಯ ವಲಯ ಸಜ್ಜು

    ಡಿ.ಎಂ.ಮಹೇಶ್, ದಾವಣಗೆರೆ: ಮಳೆಗಾಲ ಶುರುವಾಗುತ್ತಿದ್ದಂತೆ ವನಮಹೋತ್ಸವದ ಪರ್ವವೂ ಆರಂಭವಾಗುತ್ತದೆ. ಜಿಲ್ಲೆಯ ಸಾಮಾಜಿಕ ಅರಣ್ಯ ವಲಯ ಕೂಡ ಇದಕ್ಕೆ ಅನುಗುಣವಾಗಿ 6,39,028 ಸಸಿಗಳನ್ನು ನೆಡಲು ಸಜ್ಜಾಗಿದೆ.

    ರಸ್ತೆ ಬದಿ, ಶಾಲಾವರಣ, ರೈತರ ಜಮೀನು, ನೆಡುತೋಪು ಇತ್ಯಾದಿ ಕಡೆಗಳಲ್ಲಿ ನೆಟ್ಟು ಪಾಲನೆ ಮಾಡುವ ಸಂಬಂಧ ಜಿಲ್ಲೆಯ ಆರು ಸಸ್ಯಪಾಲನಾ ಕ್ಷೇತ್ರಗಳಲ್ಲಿ ಈಗಾಗಲೆ ಗಿಡಗಳು ಸನ್ನದ್ಧವಾಗಿವೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1,76,930 ಹಾಗೂ ಇಲಾಖಾ ಯೋಜನೆಯಡಿ 4,62,098 ಗಿಡಗಳನ್ನು ಬೆಳೆಸಲಾಗಿದೆ.
    ದಾವಣಗೆರೆಯ ಕೊಗ್ಗನೂರು, ಶಿರಮಗೊಂಡನಹಳ್ಳಿ ನರ್ಸರಿಯಲ್ಲಿ ಒಟ್ಟು 1,18,990, ಚನ್ನಗಿರಿ ತಾಲೂಕಿನ ಬಸವರಾಜಪುರದಲ್ಲಿ 1,07,809, ಜಗಳೂರಿನ ಸಂಗೇನಹಳ್ಳಿಯಲ್ಲಿ 1,32,990, ಹೊನ್ನಾಳಿ ತಾಲೂಕಿನ ಸುಂಕದ ಕಟ್ಟೆಯಲ್ಲಿ 1,42,899, ಹರಿಹರ ತಾಲೂಕಿನಲ್ಲಿ 1,36,340 ಸಸಿಗಳನ್ನು ಬೆಳೆಸಲಾಗಿದೆ.
    ಇದರಲ್ಲಿ 6-9ರ ಅಳತೆಯ 82,500, 8-9ರ ಗಾತ್ರದ 1.48 ಲಕ್ಷ ಸಸಿಗಳನ್ನು ಜೂನ್ ತಿಂಗಳಿಂದ ರೈತರಿಗೆ ವಿತರಿಸಲು ಇಲಾಖೆ ತುದಿಗಾಲಲ್ಲಿದೆ. ರೈತರಿಗೆ ಮುಖ್ಯವಾಗಿ ಮಹಾಗನಿ, ಸಾಗುವಾನಿ, ರಕ್ತಚಂದನ, ಶ್ರೀಗಂಧ, ತೇಗ, ಹೆಬ್ಬೇವು ಇತರೆ ಮರಗಳನ್ನು ನೀಡಲಾಗುವುದು. ಪಹಣಿ ದಾಖಲೆಯೊಂದಿಗೆ ಬಂದಲ್ಲಿ ಪಡೆಯಬಹುದು.
    ಅರಣ್ಯ ಪ್ರದೇಶದಲ್ಲಿ ಬೆಳೆಸಲು ಬೇವು, ಆಲ, ಅರಳಿ, ಅತ್ತಿ, ಹುಣಸೆ, ಗೋಣಿ, ಹೊಳೆಮತ್ತಿ. ಸೀಮಾರೂಬ, ಹೊಂಗೆ, ನೆಲ್ಲಿ, ಇತರೆ ಕಾಡುಜಾತಿಯ ಗಿಡಗಳಿವೆ. ಶಾಲೆಗಳಿಗೆ ಹಣ್ಣು ಮತ್ತು ನೆರಳು ನೀಡುವ ಸಸಿಗಳನ್ನು ಹಂಚಿಕೆ ಮಾಡಲಾಗುತ್ತಿದೆ.
    ಕಳೆದ ಬಾರಿ ಜಿಲ್ಲೆಯಲ್ಲಿ 13 ಲಕ್ಷ ಸಸಿಗಳನ್ನು ವಿತರಿಸಲಾಗಿತ್ತು. ಈ ಪೈಕಿ ರೇಷ್ಮೆ ಬೆಳೆಗಾರರ ಬೇಡಿಕೆಯಂತೆ 2.5 ಲಕ್ಷ ಹಿಪ್ಪುನೇರಳೆ ಸಸಿಗಳನ್ನು ಸಂವರ್ಧಿಸಿ ವಿತರಿಸಲಾಗಿತ್ತು. ಇಲಾಖೆ ಸೂಚನೆಯಂತೆ ಈ ಬಾರಿ ಇದನ್ನು ಬೆಳೆಸಲಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಅಡಕೆಯಂತಹ ತೋಟಗಾರಿಕೆ ಬೆಳೆಗಳತ್ತ ರೈತರು ವಾಲಿದ್ದಾರೆ. ಮಾರಾಟ ದರ ಕೂಡ ವ್ಯತ್ಯಾಸವಾದ್ದರಿಂದ ಈ ಸಲ ಸಸ್ಯವರ್ಧನೆ ಕಡಿಮೆ ಎಂಬುದು ಅಧಿಕಾರಿಗಳ ಮಾತು.
    —-

    * ರಿಯಾಯ್ತಿ ದರದಲ್ಲಿ ಮಾರಾಟ
    ಈ ಬಾರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಸುತ್ತೋಲೆಯಂತೆ ಸಣ್ಣ ಅಳತೆಯ ಗಿಡಗಳಿಗೆ ತಗುಲಿದ ಉತ್ಪಾದನಾ ವೆಚ್ಚಕ್ಕೆ ಶೇ.30ರಿಂದ 50ರಷ್ಟು ರಿಯಾಯ್ತಿ ಕಲ್ಪಿಸಿ ಮಾರಾಟ ಮಾಡಲು ಆದೇಶವಿದೆ.
    6-9 ಸೆಂ.ಮೀ. ಗಾತ್ರದ (ಪಾಲಿಥೀನ್ ಚೀಲ) ಒಂದು ಗಿಡಕ್ಕೆ 6 ರೂ., 8-9ರ ಅಳತೆಯ ಗಿಡವೊಂದಕ್ಕೆ 23 ರೂ. ದರವಿದೆ. ಸಾರ್ವಜನಿಕರ ಬೇಡಿಕೆಯಂತೆ ನೀಡುವ ದೊಡ್ಡ ಗಾತ್ರದ ಗಿಡಗಳಿಗೆ ಉತ್ಪಾದನಾ ವೆಚ್ಚದಷ್ಟೇ ದರ ನಿಗದಿಯಾಗಿದೆ. 10-16ರ ಅಳತೆಯ ಗಿಡಕ್ಕೆ 72 ರೂ, 14-20ರ ಗಾತ್ರದ ಸಸಿಗೆ 111 ರೂ. ಮೀಸಲಿಡಲಾಗಿದೆ.

    * ಇಲ್ಲಿಗೆ ಸಂಪರ್ಕಿಸಿ
    ರೈತರು ಸಸಿಗಳನ್ನು ಪಡೆಯಲು ಸಸ್ಯಪಾಲನಾ ಕೇಂದ್ರಗಳಿಗೆ ಕರೆ ಮಾಡಿ ಸಂಪರ್ಕಿಸಬಹುದು. ಚನ್ನಗಿರಿ- 94819-99523, ದಾವಣಗೆರೆ 94819-99424, ಹರಿಹರ 94819-99425, ಹೊನ್ನಾಳಿ 94819-99427, ಜಗಳೂರು- 94819-99428.

    * ಸಣ್ಣ ಗಾತ್ರದ ಸಸಿಗಳಿಷ್ಟು..
    ಮಹಾಗನಿ-83947, ಹೊಂಗೆ-72184, ತೇಗ- 36750, ನುಗ್ಗೆ-20014, ಬಿದಿರು- 14915, ಹೆಬ್ಬೇವು- 13806, ಹೊಳೆಮತ್ತಿ- 12143, ಸೀಮಾರುಬಾ-11631, ನೆರಳೆ- 10749, ಸಿಲ್ವರ್- 10647, ತಪಸಿ- 9682, ಪೇರಲ- 9558, ಕರಿಬೇವು- 7210, ಹುಣಸೆ-5225, ಅರಳಿ- 4942, ಹೊನ್ನೆ- 2848, ನೆಲ್ಲಿ- 1547, ಸೀತಾಫಲ- 1836, ಪತ್ರೆ- 960, ಬೀಟೆ-404,

    * ಕೋಟ್
    1.36 ಕೋಟಿ ರೂ. ವೆಚ್ಚದಲ್ಲಿ, ಇಲಾಖೆ ನೀಡಿದ ಗುರಿಯಂತೆ ಸಸಿಗಳನ್ನು ಬೆಳೆಸಿದ್ದು ವಿತರಣೆಗೆ ಮುಂದಾಗಿದ್ದೇವೆ. ರೈತರು ಮತ್ತು ಸಾರ್ವಜನಿಕರ ಸ್ಪಂದನೆ ಗಮನಿಸಿ ಮುಂದಿನ ದಿನದಲ್ಲಿ ಹೆಚ್ಚಿನ ಸಸಿಗಳನ್ನು ಬೆಳೆಸಲಾಗುವುದು.
    ಎನ್.ಎಸ್.ರಾಘವೇಂದ್ರರಾವ್
    ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts