More

    ಬಾಲ್ಯವಿವಾಹದ ಸುಳಿಗೆ ಸಿಲುಕದಿರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಚ ರಾಮುಜೋಗಿಹಳ್ಳಿ ಎಚ್ಚರಿಕೆ, ತೆರೆದ ಮನೆ ಕಾರ್ಯಕ್ರಮಕ್ಕೆ ಚಾಲನೆ

    ನೆಲಮಂಗಲ: ಪ್ರತಿಯೊಬ್ಬ ಪಾಲಕರೂ ಮಕ್ಕಳು ಬಾಲ್ಯವಿವಾಹದ ಸುಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್. ರಾಮುಜೋಗಿಹಳ್ಳಿ ಮನವಿ ಮಾಡಿದರು.

    ತಾಲೂಕಿನ ಸೋಲದೇವನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೆಮ್ಮದಿ ಸಂಸ್ಥೆ, ಮಕ್ಕಳ ಸಹಾಯವಾಣಿ ಬುಧವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದಾದ್ಯಂತ ಬಾಲ್ಯವಿವಾಹದ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಕಾನೂನುಬಾಹಿರವಾಗಿದೆ. ಮಕ್ಕಳು ಆಸ್ತಿ, ಉದ್ಯೋಗ ಸೇರಿ ಆರ್ಥಿಕ ಲಾಭದ ಆಸೆಗೆ ಮಾರುಹೋಗಿ ಮಕ್ಕಳಿಗೆ ಒತ್ತಾಯದಿಂದ ಪಾಲಕರು ಮದುವೆ ಮಾಡಬಾರದು ಎಂದರು.

    ಬಾಲ್ಯವಿವಾಹ ಮಾಡಿದವರಿಗೆ ಹಾಗೂ ಅಂತಹ ವಿವಾಹದಲ್ಲಿ ಪಾಲ್ಗೊಂಡವರ ವಿರುದ್ಧ ಕಾನೂನು ರೀತಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳಿಗೆ ಯಾವುದೇ ಸಮಸ್ಯೆಗಳು ಎದುರಾದರೆ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ದಿನದ 24 ಗಂಟೆ ಸಹಾಯವಾಣಿ ಕರ್ತವ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

    ಗ್ರಾಪಂ ಅಧ್ಯಕ್ಷೆ ಪುಷ್ಪಾ ಮಾತನಾಡಿ, ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಮನುಷ್ಯ ದುರಾಸೆಗಳಿಂದ ಕೆಲ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಬೇಸರದ ಸಂಗತಿ. ಮಕ್ಕಳಿಗೆ ಬಾಲ್ಯವಿವಾಹ ಮಾಡಿದ್ದಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಪಾಲಕರು ಎಚ್ಚೆತ್ತುಕೊಂಡು ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಹಲವು ಮಕ್ಕಳ ರಕ್ಷಣೆ: ಈಗಾಗಲೇ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಮಕ್ಕಳನ್ನು ಬಾಲ್ಯವಿವಾಹದ ಸುಳಿಯಿಂದ ರಕ್ಷಿಸಿದ್ದಾರೆ. ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯದ ಕಾರಣ ಕೆಲವೆಡೆ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದರು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜನೆ ಮಾಡಿಕೊಂಡ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಳೀಯವಾಗಿ ಮಕ್ಕಳು ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಅವರನ್ನು ರಕ್ಷಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕ ಧನಪಾಲ್‌ನಾಯಕ್ ತಿಳಿಸಿದರು.

    ಗ್ರಾಪಂ ಸದಸ್ಯರಾದ ನಾರಾಯಣ್, ವೈ.ಆರ್. ಶ್ರೀನಿವಾಸ್, ಶಿವಕುಮಾರ್, ರಾಮಕೃಷ್ಣಯ್ಯ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯೋಜಕ ಕರಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಹೇಮಾವತಿ, ಮಕ್ಕಳ ಸಹಾಯವಾಣಿ ಕೋಲಾರ ಜಿಲ್ಲಾ ಸಂಯೋಜಕ ಮುರಳಿ, ಹ್ಯಾಂಡ್ ಇನ್ ಹ್ಯಾಂಡ್ ಸಂಸ್ಥೆ ಸಂಯೋಜಕಿ ಸವಿತಾ, ವಿಕಾಸ ಸಂಸ್ಥೆಯ ನಿರ್ದೇಶಕ ನಾಗರಾಜ್, ಶಾಲಾ ಮುಖ್ಯಶಿಕ್ಷಕಿ ದೇವಕಿ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts