More

    ಬಡಕುಟುಂಬದ ಸಂತಸ ಕಸಿದುಕೊಂಡ ತೆರೆದ ಬಾವಿ

    ಯಲ್ಲಾಪುರ: ಒಂದೆಡೆ ತಾಯಿ-ತಂದೆ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಗ, ಇನ್ನೊಂದೆಡೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಒಂದೂವರೆ ವರ್ಷದ ಪುಟ್ಟ ಮಗು. ಇಬ್ಬರಿಗೂ ಆಸರೆಯಾಗಬಹುದಾದ ಅಜ್ಜಿಯನ್ನೂ ಕಳೆದುಕೊಂಡ ವೇದನೆ. ಮನೆಯ ಮೂರು ಮಹಿಳೆಯರನ್ನು ಒಂದೇ ದಿನ ಕಳೆದುಕೊಂಡು ರೋದಿಸುವ ಕುಟುಂಬದವರು. ಇಂತಹ ಮನಕಲಕುವ ಘಟನೆ ನಡೆದದ್ದು ತಾಲೂಕಿನ ಜಕ್ಕೊಳ್ಳಿ ಸಮೀಪದ ದೊಡ್ಡಬೇಣದಲ್ಲಿ.

    ತೋಟದಲ್ಲಿದ್ದ ಬಾವಿಯಿಂದ ನೀರು ತರಲು ಹೋದ ಸರಿತಾ ಆದಿತ್ಯ ನಾಯ್ಕ(26) ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಅವರನ್ನುರಕ್ಷಿಸಲು ಅತ್ತಿಗೆ ಶ್ವೇತಾ ದಿನೇಶ ನಾಯ್ಕ (30) ಸಹ ನೀರಿಗೆ ಧುಮುಕಿದ್ದು, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.

    ನೀರು ತರಲು ಹೋದ ಸೊಸೆ, ಆಕೆಯನ್ನು ರಕ್ಷಿಸಲು ಹೋದ ಮಗಳು ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ಆಘಾತವನ್ನು ತಡೆದುಕೊಳ್ಳಲಾಗದೇ ತಾಯಿ ಗೌರಿ ಶಿವಾ ನಾಯ್ಕ(55 ) ಮೃತಪಟ್ಟಿದ್ದಾರೆ.

    ಏಳೆಂಟು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಶ್ವೇತಾ ತನ್ನ ಮಗನೊಂದಿಗೆ ತವರಿಗೆ ಬಂದು, ತಂದೆ-ತಾಯಿ, ಅಣ್ಣ-ಅತ್ತಿಗೆಯೊಂದಿಗೆ ನೆಲೆಸಿದ್ದರು. ಜೀವನೋಪಾಯಕ್ಕೆಂದು ಸಮೀಪದ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದರು. ಮಗನ ಭವಿಷ್ಯ ರೂಪಿಸಲು ಎಲ್ಲ ನೋವನ್ನೂ ಮರೆತು ಬದುಕು ಸಾಗಿಸುತ್ತಿದ್ದ ಅವರನ್ನು ವಿಧಿ ನೀರಿನ ರೂಪದಲ್ಲಿ ಸೆಳೆದುಕೊಂಡಿದೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಗ ಈಗ ಅಕ್ಷರಶಃ ಅನಾಥನಾಗಿದ್ದಾನೆ.

    ಸರಿತಾ ಅವರ ಒಂದೂವರೆ ವರ್ಷದ ಹೆಣ್ಣು ಮಗು ತಾಯಿಯ ಮಮತೆಯನ್ನು ಕಳೆದುಕೊಂಡಿದೆ. ಅಜ್ಜಿ ಗೌರಿ ಸಹ ಸೊಸೆ, ಮಗಳು ಸಾಗಿದ ದಾರಿಯಲ್ಲೇ ಸಾಗಿದ್ದು, ತಾಯಿಯನ್ನು ಕಳೆದುಕೊಂಡ ಪುಟಾಣಿಗಳಿಬ್ಬರಿಗೆ ಅಜ್ಜಿಯ ಆಸರೆಯಲ್ಲಿ ಬೆಳೆಯುವ ಅವಕಾಶವನ್ನೂ ವಿಧಿ ಕಿತ್ತುಕೊಂಡಿದೆ.

    ಇಷ್ಟೆಲ್ಲ ನೋವಿನ ನಡುವೆ ವಯಸ್ಸಾದ ತಂದೆ, ಪ್ರಪಂಚದ ಅರಿವಿಲ್ಲದ ಮುಗ್ಧ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಸರಿತಾ ಪತಿ ಆದಿತ್ಯ ಅವರ ಹೆಗಲೇರಿದೆ. ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಅವರ ನೋವು ಹೇಳತೀರದ್ದು.

    ಆನಂದದಿಂದ ಕೂಡಿದ್ದ ಕುಟುಂಬ ಕೆಲವೇ ಕ್ಷಣಗಳಲ್ಲಿ ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ. ಎಷ್ಟೇ ಸಾಂತ್ವನ ಹೇಳಿದರೂ ಕುಟುಂಬಕ್ಕೆ ಆವರಿಸಿದ ಶೂನ್ಯ, ಮಕ್ಕಳು ಕಳೆದುಕೊಂಡ ಮಮತೆ ಮರಳದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts