More

    ನರೇಗಾ ಮೂಲಕ ಬಲ್ನಾಡ್‌ನಲ್ಲಿ ಅತೀ ಹೆಚ್ಚು ಬಾವಿ ನಿರ್ಮಾಣ : ಜಿಲ್ಲೆಯ ಏಕೈಕ ಗ್ರಾಪಂ ಹೆಗ್ಗಳಿಕೆ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಜಿಲ್ಲೆಯಲ್ಲೇ ಅತೀ ಹೆಚ್ಚು ಶುದ್ಧ ಕುಡಿಯುವ ನೀರಿನ ಬಾವಿ ಹೊಂದಿರುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಬಲ್ನಾಡು ಪಾತ್ರವಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 21 ವರ್ಷಗಳ ಅವಧಿಯಲ್ಲಿ ಬಲ್ನಾಡು ಗ್ರಾಪಂ ವ್ಯಾಪ್ತಿಯಲ್ಲಿ 187 ತೆರೆದಬಾವಿ ನಿರ್ಮಿಸಿ ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ.

    ಉದ್ಯೋಗ ಖಾತ್ರಿಯ ಗುರಿ ಮೀರಿ ಸಾಧನೆ ತೋರುವ ಹೆಗ್ಗಳಿಕೆ ಹೊಂದಿರುವ ಬಲ್ನಾಡು ಗ್ರಾಪಂನಲ್ಲಿ 900ಕ್ಕೂ ಅಧಿಕ ಮನೆಗಳಿವೆ. 450 ಮನೆಗಳಲ್ಲಿ ಮನೆ ಮಂದಿಯೇ ನಿರ್ಮಿಸಿದ ಬಾವಿಗಳಿವೆ. ಉಳಿದಂತೆ 2009-10ರಿಂದ 2020-21ರವರೆಗೆ 187 ಮನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ನರೇಗಾದ ಮೂಲಕ ಬಾವಿ ತೋಡಲಾಗಿದೆ. ಇದರೊಂದಿಗೆ ಕೆರೆ ಅಭಿವೃದ್ಧಿ ಇಂಗುಗುಂಡಿ ನಿರ್ಮಾಣವನ್ನೂ ಮಾಡಲಾಗಿದೆ. ಮಳೆ ನೀರು ಇಂಗಿಸಲು ಪರಿಸರಸ್ನೇಹಿ ಚಿಂತನೆ ಯೋಜನೆ ಅನುಷ್ಠಾನಗೊಂಡಿದೆ.

    ಇನ್ನಷ್ಟು ನಿರ್ಮಾಣ ಯೋಜನೆ: ನರೇಗಾದ ಮೂಲಕ ಬಾವಿ ನಿರ್ಮಾಣಕ್ಕೆಂದು 61.9 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. 2009ರಲ್ಲಿ ನರೇಗಾದ ಮೂಲಕ 2 ಬಾವಿ ತೋಡುವ ಮೂಲಕ ಪ್ರಾರಂಭಗೊಂಡ ಪ್ರಯತ್ನ ಈಗಲೂ ಮುಂದುವರಿದಿದೆ. 2010ರಲ್ಲಿ 8, 2011ರಲ್ಲಿ 2, 2012ರಲ್ಲಿ 20, 2013ರಲ್ಲಿ 24, 2014ರಲ್ಲಿ 31, 2015ರಲ್ಲಿ 8, 2016ರಲ್ಲಿ 21, 2017ರಲ್ಲಿ 15, 2018ರಲ್ಲಿ 14, 2019ರಲ್ಲಿ 17, 2020ರಲ್ಲಿ 11 ಬಾವಿ ನಿರ್ಮಾಣಗೊಂಡಿದೆ. ಆರಂಭದ ದಿನಗಳಲ್ಲಿ 10 ಸಾವಿರ ರೂ.ನಲ್ಲಿದ್ದ ಅನುದಾನ ಈಗ 1 ಲಕ್ಷ ರೂ. ತನಕವೂ ವಿಸ್ತರಿಸಲಾಗಿದೆ. ಪ್ರಸ್ತುತ 2021-22ರಲ್ಲಿ 14 ಬಾವಿ ತೋಡಲಾಗಿದ್ದು, 5.70 ಲಕ್ಷ ರೂ. ಹಣ ಬಳಕೆ ಮಾಡಲಾಗಿದೆ. ಮಳೆ ಮುಗಿದ ಬಳಿಕ ಇನ್ನಷ್ಟು ಬಾವಿ ನಿರ್ಮಾಣಗೊಳ್ಳಲಿದೆ.
     
    ಬೋರ್‌ವೆಲ್‌ಗೆ ಯೋಗ್ಯವಲ್ಲ: ವರ್ಷದಿಂದ ವರ್ಷಕ್ಕೆ ನೀರಿನ ಬಳಕೆದಾರರ ಸಂಖ್ಯೆ ಹೆಚ್ಚಳ, ಮಳೆಯಾಗುವ ಕಾಲದ ವ್ಯತ್ಯಾಸ, ನೀರು ಮಿತ ಬಳಕೆಗೆ ಆದ್ಯತೆ ನೀಡದ ಕಾರಣ ಅಂತರ್ಜಲ ಕುಸಿತ ಕಂಡಿದೆ ಎಂಬುದು ಜಿಲ್ಲಾ ಅಂತರ್ಜಲ ಕಚೇರಿಯ ಮೌಲ್ಯಮಾಪನ ಆಧಾರದಲ್ಲಿ ಬಹಿರಂಗಗೊಂಡಿದೆ. ಜತೆಗೆ ಕೊಳವೆಬಾವಿ ಕೊರೆಯಲು ಯೋಗ್ಯ ಅಲ್ಲದ ತಾಲೂಕಿನ ಪಟ್ಟಿಯಲ್ಲಿ ಪುತ್ತೂರು ಸೇರಿದೆ. ಈ ಎಲ್ಲ ಕಾರಣದಿಂದ ಅಂತರ್ಜಲಕ್ಕಾಗಿ ಮಳೆ ನೀರು ಇಂಗಿಸುವ ಜರೂರು ಇದ್ದು, ತೆರೆದ ಬಾವಿ ಅದಕ್ಕೊಂದು ಉತ್ತಮ ಅವಕಾಶ ಒದಗಿಸಿದೆ.
     
    ನರೇಗಾದ ಮೂಲಕ 2009ರಿಂದ ಈ ತನಕ 187 ಬಾವಿ ನಿರ್ಮಿಸಲಾಗಿದೆ. ಈ ವರ್ಷವೂ ಕಾಮಗಾರಿ ಪ್ರಗತಿಯಲ್ಲಿದೆ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಬಲ್ನಾಡು ಗ್ರಾಪಂ ಪ್ರತಿ ವರ್ಷವು ಗುರಿ ಮೀರಿದ ಸಾಧನೆ ತೋರುತ್ತಿದೆ. ತೆರೆದ ಬಾವಿ ನಿರ್ಮಾಣದ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ.
    -ನವೀನ್ ಭಂಡಾರಿ, ಪುತ್ತೂರು ತಾಪಂ ಕಾರ್ಯನಿರ್ವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts