More

    ನಿಷೇಧ ತೆರವಾದರೂ ನೀರಿಗಿಳಿಯಲ್ಲ ಬೋಟ್​ಗಳು

    ಕಾರವಾರ: ಅರವತ್ತೊಂದು ದಿನದ ನಿಷೇಧದ ಬಳಿಕ ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್ 1 ರಿಂದ ಅವಕಾಶ ಸಿಗುತ್ತಿದೆ. ಆದರೆ, ವಿವಿಧ ಕಾರಣಗಳಿಂದ ಬಹುತೇಕ ಬಂದರುಗಳ ಬೋಟ್​ಗಳು ಇದುವರೆಗೂ ನೀರಿಗಿಳಿಯಲು ಇದುವರೆಗೂ ಸಜ್ಜಾಗಿಲ್ಲ.

    ಜೂನ್, ಜುಲೈ ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದ್ದು, ಅವುಗಳಿಗೆ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ಎರಡು ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರುತ್ತದೆ. ಆಗಸ್ಟ್ 1 ರಿಂದ ಕಡಲಿಗಿಳಿಯುವ ಬೋಟ್​ಗಳಿಗೆ ಮೊದಲ ಒಂದೆರಡು ವಾರ ಶಿಗಡಿ ಮೀನುಗಳ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಆದರೆ, ಈ ಬಾರಿ ಶಿಗಡಿ ಬೆಲೆ ಕುಸಿದಿದೆ. ಈ ಹಿಂದೆಲ್ಲ ಕೆಜಿಗೆ 120 ರಿಂದ 300 ರೂಪಾಯಿವರೆಗೂ ದೊರಕಿದ್ದಿದೆ. ಸದ್ಯ ಪ್ರತಿ ಕೆಜಿಗೆ 90 ರೂಪಾಯಿ ನೀಡಲಾಗುತ್ತಿದೆ. ಇದರಿಂದ ವ್ಯಾಪಾರಸ್ಥರ ಜತೆ ರ್ಚಚಿಸಿ ಸಮರ್ಪಕ ಬೆಲೆ ನಿಗದಿ ಮಾಡಿಕೊಂಡ ನಂತರವೇ ಕಡಲಿಗಿಳಿಯಲು ನಿರ್ಧರಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ತಿಳಿಸಿದ್ದಾರೆ.

    ಕರ ರಹಿತ ಡೀಸೆಲ್:

    ಈ ಮೊದಲು ಇದ್ದಂತೆ ಮೀನುಗಾರಿಕೆ ಬೋಟ್​ಗಳಿಗೆ ಡೀಸೆಲ್​ಗೆ ಸಬ್ಸಿಡಿ ಹಣವನ್ನು ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಇನ್ನಿಲ್ಲ. ಆ. 1 ರಿಂದ ಬೋಟ್​ಗಳಿಗೆ ಕರ ರಹಿತವಾಗಿ, ಸಬ್ಸಿಡಿ ದರದಲ್ಲೇ ಡೀಸೆಲ್ ಲಭ್ಯವಾಗಲಿದೆ. ಪ್ರತಿ ಬೋಟ್ ಮಾಲೀಕ ತಿಂಗಳಿಗೆ 2100 ಲೀಟರ್​ವರೆಗೆ ಕರ ರಹಿತ ಡೀಸೆಲ್ ಪಡೆಯಬಹುದಾಗಿದೆ. ಈ ಹಿಂದಿನ ಬಳಕೆಯನ್ನು ಆಧರಿಸಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಬಂದರುಗಳ 13 ಪಂಪ್​ಗಳಿಗೆ ಸರ್ಕಾರ 2135 ಕೆಎಲ್ ಡೀಸೆಲ್ ಮಂಜೂರು ಮಾಡಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪಿ. ನಾಗರಾಜು ತಿಳಿಸಿದ್ದಾರೆ.

    ಚಿಪ್ ಅಳವಡಿಕೆಗೆ ಕಾಲಾವಕಾಶ:

    ಆಳ ಸಮುದ್ರದಲ್ಲಿ ಬೋಟ್​ಗಳ ಅಪಘಾತ ಸಂಭವಿಸಿದಲ್ಲಿ ರಕ್ಷಣೆಗೆ ಅವಕಾಶವಾಗುವಂತೆ ಬಿಎಸ್​ಎನ್​ಎಲ್ ಸ್ಕೈಲೋ ಕಂಪನಿಯ ದ್ವಿಮುಖ ಸಂವಹನ ಸಾಧನ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಕರ ರಹಿತ ಡೀಸೆಲ್ ಅಪ ಬಳಕೆ ತಪ್ಪಿಸಲು ಬೋಟ್​ಗಳ ಡೀಸೆಲ್ ಟ್ಯಾಂಕ್​ಗಳಿಗೆ ಚಿಪ್ ಒಂದನ್ನು ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಎರಡಕ್ಕೂ ಮೀನುಗಾರರೇ ಹಣ ಪಾವತಿಸಬೇಕಾಗಿದೆ. ಕರೊನಾದಿಂದ ನಷ್ಟ ಅನುಭವಿಸಿದ ತಮಗೆ ಇವುಗಳ ಅಳವಡಿಕೆ ಕಷ್ಟವಾಗಲಿದೆ ಎಂದು ಮೀನುಗಾರರು ಕೇಳಿಕೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಇವುಗಳ ಅಳವಡಿಕೆಗೆ ಅವಕಾಶ ನೀಡಲಾಗಿದೆ.

    ಜಿಲ್ಲೆಯ 890 ಪರ್ಸೀನ್ ಬೋಟ್​ಗಳ ಪೈಕಿ ಇದುವರೆಗೆ 268 ಬೋಟ್​ಗಳಿಗೆ ಡೀಸೆಲ್ ಪಾಸ್​ಬುಕ್ ನೀಡಲಾಗಿದೆ. ಹೊರ ರಾಜ್ಯದಿಂದ ಕಾರ್ವಿುಕರು ಬರುತ್ತಿದ್ದು, ಅವರ ಆರೋಗ್ಯ ತಪಾಸಣೆ ಮಾಡಿ, ಗುರುತಿನ ಚೀಟಿ ನೀಡುವ ಕಾರ್ಯ ಮಾಡಬೇಕಿದೆ.

    | ಪಿ. ನಾಗರಾಜು

    ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ

    ಶಿಗಡಿ ಬೆಲೆ ನಿಗದಿ ಮಾಡಿಕೊಂಡು ಒಂದೆರಡು ದಿನದಲ್ಲೇ ಟ್ರಾಲರ್ ಬೋಟ್​ಗಳನ್ನು ಮೀನುಗಾರಿಕೆಗೆ ಇಳಿಸಲಾಗುವುದು. ಪರ್ಸೀನ್ ಬೋಟ್​ಗಳಿಗೆ ಒಡಿಶಾ ಕಡೆಯಿಂದ ಕಾರ್ವಿುಕರು ಬರಬೇಕಿದ್ದು, ಅವು ಮೀನುಗಾರಿಕೆಗೆ ಇಳಿಯಲು ಇನ್ನಷ್ಟು ದಿನ ವಿಳಂಬವಾಗಲಿದೆ.

    | ರಾಜು ತಾಂಡೇಲ

    ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ

    ತದಡಿ ಬಂದರಿನಲ್ಲಿ ಮೀನುಗಾರಿಕೆಗೆ ತಯಾರಿ

    ಗೋಕರ್ಣ: ಮಳೆಗಾಲದ ಬಿಡುವಿನ ನಂತರ ಆ. 1ರಿಂದ ಮೀನುಗಾರಿಕೆ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ತದಡಿ ಬಂದರಿನಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮೀನುಗಾರಿಕೆಗೆ ತೆರಳುವವರಿಗೆ ಮೀನುಗಾರಿಕೆ ಇಲಾಖೆಯಿಂದ ಲಸಿಕೆ ನೀಡಲಾಯಿತು. ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಮತ್ತು ಸಿಬ್ಬಂದಿ ನೇತೃತ್ವದಲ್ಲಿ 303 ಮೀನುಗಾರರು ಲಸಿಕೆ ಪಡೆದುಕೊಂಡರು.

    ಹೊರ ರಾಜ್ಯದಿಂದ 47 ಮೀನುಗಾರರು ಬಂದರಿಗೆ ಬಂದಿದ್ದು, ಅವರ ಕೋವಿಡ್ ಮತ್ತು ಇತರ ಆರೋಗ್ಯ ಸಂಬಂಧಿ ಪರೀಕ್ಷೆ ನಡೆಸಲಾಯಿತು. ವಾರ್ಷಿಕ ರಜೆ ತರುವಾಯದ ಮೀನುಗಾರಿಕೆ ಆರಂಭಿಸಲು 60ರಿಂದ 70 ಬೋಟ್​ಗಳು ಬಂದರಿನಲ್ಲಿ ಬೀಡು ಬಿಟ್ಟಿದ್ದು ಮೀನುಗಾರಿಕೆ ಪೂರ್ವದ ವಿವಿಧ ತಯಾರಿ ನಡೆಸಿವೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಸಂತ ಹೆಗಡೆ ಇತರರು ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts