More

    2 ಸಾವಿರ ಕಿಮೀ ನಡೆದು ಅಯೋಧ್ಯಾ ರಾಮನ ದರ್ಶನ ಪಡೆದ ಭಕ್ತ

    ಕಾರವಾರ: ತಾಲೂಕಿನ ವ್ಯಕ್ತಿಯೊಬ್ಬರು ಕಾರವಾರದಿಂದ ಅಯೋಧ್ಯಾವರೆಗೆ ಸುಮಾರು 2 ಸಾವಿರ ಕಿಮೀ ಪಾದಯಾತ್ರೆ ನಡೆಸಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ.
    ಹಣಕೋಣದ ಮಹೇಶ ನಾಯ್ಕ ಗೋವಾ, ಶಿರಡಿ, ಶಿಗ್ಗಾಂವ್,ಬಾಗೇಶ್ವರಧಾಮ ಮಾರ್ಗವಾಗಿ ನಡೆದು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು, ಕಾರವಾರಕ್ಕೆ ವಾಪಸಾಗಿದ್ದಾರೆ. ಶನಿವಾರ ಹಣಕೋಣದಲ್ಲಿ ಅವರಿಗೆ ಸ್ವಗ್ರಾಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.
    ಗೋವಾದ ಮಾಪ್ಸಾದ ಸಾಯಿ ಭಕ್ತ ಪರಿವಾರ ಎಂಬ ತಂಡವೊಂದು ಕಳೆದ ಹಲವು ವರ್ಷಗಳಿಂದ ಶಿರಡಿಗೆ ಪಾದಯಾತ್ರೆ ನಡೆಸುತ್ತದೆ. ಈ ಬಾರಿ ಅದೇ ಪಾದಯಾತ್ರೆಯನ್ನು ಶಿರಡಿ ಹಾಗೂ ಅಲ್ಲಿಂದ ಅಯೋಧ್ಯೆವರೆಗೆ ಮುಂದುವರಿಸಿತ್ತು. ಕಾರವಾರದಿಂದ 7 ಪಾದಯಾತ್ರಿಗಳು ಸೇರಿದಂತೆ ಗೋವಾ ರಾಜ್ಯದಿಂದ ಒಟ್ಟೂ 120 ಯಾತ್ರಿಗಳು ಅಯೋಧ್ಯಾವರೆಗೂ ಪಾದಯಾತ್ರೆ ಮಾಡಿ ಸಾಹಸ ಮೆರೆದಿದ್ದಾರೆ.
    2023 ರ ಡಿಸೆಂಬರ್ 31 ರಂದು ಪಾದಯಾತ್ರೆ ಆರಂಭಿಸಿ ಸತತ 57 ದಿನಗಳ ವರೆಗೆ ನಡೆದು ಅಯೋಧ್ಯೆ ತಲುಪಿದರು. ಮಾರ್ಗ ನಡುವೆ ದೇವಸ್ಥಾನಗಳಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿಯೇ ಊಟ ತಿಂಡಿ ಮಾಡಿಕೊಂಡು ಯಾತ್ರೆ ಮುಂದುವರಿಯುತ್ತಿತ್ತು. ಪ್ರತಿ ದಿನ ತಂಡವು ಸುಮಾರು 40 ರಿಂದ 45 ಕಿಮೀ ಯಾತ್ರೆ ನಡೆಸುತ್ತಿತ್ತು.
    “ಕಳೆದ ಕೆಲ ವರ್ಷಗಳಿಂದ ಸಾಯಿ ಭಕ್ತ ಪರಿವಾರದ ಜತೆಗೆ ಶಿರಡಿಗೆ ಪಾದಯಾತ್ರೆ ನಡೆಸುತ್ತಿದ್ದೆ. ಈ ಬಾರಿ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಕೇಳಿ ಅಲ್ಲಿಗೆ ಹೊರಟೆವು. ಈ ಸಂಚಾರ ಅಭೂತಪೂರ್ವ ಅನುಭವ ನೀಡಿದೆ. ಶ್ರೀ ರಾಮಲಲ್ಲಾನ ದರ್ಶನ ಸಂತೋಷ ನೀಡಿದೆ” ಎಂದು ಮಹೇಶ ನಾಯ್ಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಇದನ್ನೂ ಓದಿ: ಅಯೋಧ್ಯೆ ರಾಮನಂಗಳದಲ್ಲಿ ತುಳಸಿ ಸಂಕೀರ್ತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts