More

    ತವರು ಮನೆಗೆ ಬಂದಷ್ಟು ಖುಷಿಯಾಗಿದೆ

    ಹಾವೇರಿ: ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದು ತವರು ಮನೆಗೆ ಬಂದಂತೆ ಭಾಸವಾಗಿದೆ. ಉತ್ತರ ಕರ್ನಾಟಕದವನಾದ ನನಗೆ ಹಾವೇರಿ ಜಿಲ್ಲೆ ಹೊಸದಲ್ಲ. ಹಿಂದೆ ಇಲ್ಲಿ ಎಸಿ ಹಾಗೂ ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಈಗ ಜಿಲ್ಲಾಧಿಕಾರಿಯಾಗಿ ಬಂದಿದ್ದು ಖುಷಿಯಾಗಿದೆ. ಉತ್ತಮ ಕೆಲಸ ಮಾಡುವ ಆಶಯ ಹೊಂದಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ 3 ವರ್ಷ ಜಿಪಂ ಸಿಇಒ, ವಿಜಯಪುರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸದ್ಯ ಮೈಸೂರಿನ ಪೇಪರ್ ಮಿಲ್ಸ್​ನ ವ್ಯವಸ್ಥಾಪಕ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೆ ಎಂದರು.

    ಕರೊನಾ ಪ್ರಕರಣಗಳ ಕುರಿತು ಬುಧವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೋವಿಡ್ ಆಸ್ಪತ್ರೆ, ಕ್ವಾರಂಟೈನ್ ಸೆಂಟರ್​ಗಳಲ್ಲಿನ ಊಟೋಪಚಾರ, ಚಿಕಿತ್ಸೆಗೆ ಸಂಬಂಧಿಸಿದ ದೂರುಗಳು ಬಂದರೆ ಶೀಘ್ರದಲ್ಲಿಯೇ ಸ್ಪಂದಿಸುತ್ತೇನೆ. ಅಧಿಕಾರಿಗಳು ತಪ್ಪು ಮಾಡಿದರೆ ಅದನ್ನು ಎಚ್ಚರಿಸುವುದು ಮಾಧ್ಯಮದವರ ಕರ್ತವ್ಯವಾಗಿದೆ. ಅಂತಹ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಜಿಲ್ಲಾಡಳಿತದಿಂದ ಶೀಘ್ರ ಕ್ರಮವಹಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದರು.

    ಜಿಲ್ಲೆಯಲ್ಲಿ ಕರೊನಾ ಹೊರತುಪಡಿಸಿ ಬೇರೆ ಬೇರೆ ಅಭಿವೃದ್ಧಿ ಕೆಲಸಗಳತ್ತ ಹೆಚ್ಚು ಗಮನಹರಿಸುತ್ತೇನೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಮರಣ ಪ್ರಕರಣ ಕಡಿಮೆಯಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು. ಜಿ.ಪಂ. ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts