More

    ಜೇನಿಗೆ ಥೈಸಾಕ್ ಬ್ರೂಡ್ ರೋಗ

    ಶಿರಸಿ: ಹೊರ ರಾಜ್ಯಗಳಿಂದ ರೋಗ ಪೀಡಿತ ಜೇನು ಕುಟುಂಬಗಳನ್ನು ತಂದು ರಾಜ್ಯದ ಕೃಷಿಕರಿಗೆ ವಿತರಿಸಲಾಗುತ್ತಿದೆ. ಪರಿಣಾಮ ಇಲ್ಲಿನ ಜೇನು ಕುಟುಂಬಗಳಿಗೆ ಥೈಸಾಕ್ ಬ್ರೂಡ್ ರೋಗ ತಗುಲಿದೆ. ಈ ಸಾಂಕ್ರಾಮಿಕ ರೋಗವು ಸ್ಥಳೀಯ ಜೇನು ಪ್ರಬೇಧಗಳಿಗೆ ಕುತ್ತಾಗಿ ಪರಿಣಮಿಸಿದೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕರೊನಾ ಕಾಲಘಟ್ಟದಲ್ಲಿ ಜೇನು ಸಾಕಾಣಿಕೆ ಕ್ಷೇತ್ರ ನಿತ್ಯ ವಿಸ್ತಾರವಾಗುತ್ತಿದೆ. ಪ್ರತಿವರ್ಷ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಅಡಿ ರಾಜ್ಯಾದ್ಯಂತ ಒಂದು ಲಕ್ಷ ಜೇನು ಕುಟುಂಬ ಬೆಳೆಸಲು ರೈತರಿಗೆ ಸಹಾಯಧನ ನೀಡುತ್ತಿದೆ. ಇದರಿಂದ ರೈತರಿಗೆ ಆದಾಯ ಸಿಗುವುದಷ್ಟೇ ಅಲ್ಲದೆ, ರೈತರ ಕೃಷಿ ಬೆಳೆ ಶೇ. 25ರಷ್ಟು ಹೆಚ್ಚಲು ಕಾರಣವಾಗುತ್ತಿದೆ. ಆದರೆ, ಇಲಾಖೆಯೇ ಮುಂದಾಗಿ ನೀಡುವ ಸಹಾಯಧನದಲ್ಲಿ ರೈತರಿಗೆ ಸಿಗುವ ಜೇನು ಕುಟುಂಬಗಳು ರೋಗ ಹಿಡಿದು ನಾಶವಾಗುತ್ತಿವೆ.

    ಪರಿಶೀಲನೆಯಿಲ್ಲ: ಜೇನು ಕುಟುಂಬ, ಪೆಟ್ಟಿಗೆ ಸರಬರಾಜು ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುತ್ತಿದೆ. ಖಾಸಗಿಯವರು ಬೇಡಿಕೆ ಹೆಚ್ಚಿರುವ ಕಾರಣ ಕೇರಳ ಇನ್ನಿತರ ರಾಜ್ಯಗಳಿಂದ ಜೇನು ಕುಟುಂಬ ತಂದು ವಿತರಣೆ ಮಾಡುತ್ತಾರೆ. ಗುಣಮಟ್ಟ, ಪರಿಶೀಲನೆಯಿಲ್ಲದೆ ರೋಗ ಬಂದಿರುವ ಜೇನು ಕುಟುಂಬಗಳನ್ನು ಬೇರೆ ರಾಜ್ಯದಿಂದ ತಂದು ಇಲ್ಲಿನ ಸಾವಿರಾರು ಜೇನು ಕೃಷಿಕರಿಗೆ ವಿತರಿಸಲಾಗಿದೆ. ಇದರಿಂದ ಸ್ಥಳೀಯವಾಗಿರುವ ಜೇನು ಕುಟುಂಬಗಳಿಗೆ ರೋಗ ತಗುಲಿ ನಾಶವಾಗುತ್ತಿವೆ.

    ಶೇ. 50ರಷ್ಟು ರೋಗ ಪೀಡಿತ: ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಥೈಸಾಕ್ ಬ್ರೂಡ್ ರೋಗ ವ್ಯಾಪಕವಾಗಿದೆ. ಶೇ. 50ರಷ್ಟು ಜೇನು ಕುಟುಂಬಗಳು ನಾಶವಾಗಿರುವ ಬಗ್ಗೆ ಸರ್ವೆ ಕೈಗೊಂಡಿರುವ ಜೀವವೈವಿಧ್ಯ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಜೇನಿಗೆ ಸಾಂಕ್ರಾಮಿಕ ರೋಗ ಅಡರಿದ್ದು, ಇಡೀ ಜೇನು ಕುಟುಂಬ ನಾಶವಾಗುತ್ತಿವೆ. ಇದಕ್ಕೆ ಔಷಧ ಇಲ್ಲವಾಗಿದ್ದು, ಪ್ರತಿವರ್ಷ ಜೇನು ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತದೆ. ಆಗಾಗ್ಗೆ ಜೇನು ರೋಗ ಬರುವುದರಿಂದ ರೈತರಿಗೆ ನೀಡಿದ ಜೇನು ಸಾಕಾಣಿಕೆ ಯೋಜನೆ ನಿಷ್ಪಲವಾಗುತ್ತಿದೆ.

    ಏನಿದು ವೈರಸ್

    ಥೈಸಾಕ್ ಬ್ರೂಡ್ ಎಂಬ ವೈರಸ್ ಮೂಲದ ರೋಗ ಮೊದಲು ಜೇನಿನ ಮೊಟ್ಟೆಯನ್ನು ಆವರಿಸುತ್ತದೆ. ಮೊಟ್ಟೆ ಆಕಾರ ಪಡೆದು ಲಾರ್ವಾ ಹಂತಕ್ಕೆ ತಲುಪುವಾಗ ಕೊಳೆತು ಹೋಗುತ್ತದೆ. ಇದರಿಂದ ಗುಣಮಟ್ಟದ ಜೇನಿನ ಸಂತತಿ ನಾಶವಾಗುತ್ತಿದೆ. ಈ ರೋಗ 1992ರಲ್ಲಿ ರಾಜ್ಯದ ವಿವಿಧ ಕಡೆ ಕಂಡು ಬಂದಿತ್ತು. 2 ದಶಕದ ಹಿಂದೆಯೇ ಮಲೆನಾಡ ಜೇನುಗಳನ್ನು ಬಾಧಿಸಿತ್ತು. ಆದರೆ, ಬಳಿಕ ರೋಗ ನಿಯಂತ್ರಣಕ್ಕೆ ಬಂದಿತ್ತು. ಹೆಚ್ಚಾಗಿ ಚಿಕ್ಕ ತಳಿಯ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ತುಡವಿ ಜೇನಿಗೆ ಈ ರೋಗ ಕಂಟಕವಾಗಿದ್ದು, ಕಳೆದ 2-3 ವರ್ಷಗಳಿಂದ ಮತ್ತೆ ರೋಗದ ಪ್ರಮಾಣ ವ್ಯಾಪಕವಾಗಿದೆ.

    ಶಿರಸಿಯಲ್ಲಿ ಸಭೆ

    ಥೈಸಾಕ್ ಬ್ರೂಡ್ ರೋಗ ನಿಯಂತ್ರಣ ಸಂಬಂಧ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಜೇನು ತಜ್ಞರ ಜತೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಶುಕ್ರವಾರ ಶಿರಸಿಯಲ್ಲಿ ಸಭೆ ನಡೆಸಿದರು. ಮಲೆನಾಡಿನ ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ, ಕದಂಬ ಸಾವಯವ ಸಂಸ್ಥೆಯ ವಿಶ್ವೇಶ್ವರ ಭಟ್ಟ, ಜಿಲ್ಲಾ ತೋಟಗಾರಿಕೆ ಅಧಿಕಾರಿ ಬಿ.ಪಿ. ಸತೀಶ, ಕೃಷಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ, ಅರಣ್ಯ ಕಾಲೇಜ್ ವಿಜ್ಞಾನಿ ಜವರೇಗೌಡ, ತೋಟಗಾರಿಕೆ ಕಾಲೇಜ್ ವಿಜ್ಞಾನಿ, ರಘುನಾಥ ಇತರರು ಪಾಲ್ಗೊಂಡು ಸಮಾಲೋಚಿಸಿದರು.

    ಬೇರೆ ರಾಜ್ಯಗಳಿಂದ ಜೇನು ಕುಟುಂಬ ಆಮದು ಮಾಡಿಕೊಳ್ಳುವ ಪದ್ಧತಿ ಕೈಬಿಡಬೇಕು. ಕಾಡಿನ ಜೇನು ಕುಟುಂಬಗಳಿಗೆ ಈ ರೋಗ ತಗುಲಿದೆಯೇ ಎಂಬ ಬಗ್ಗೆ ಅರಣ್ಯ ವನ್ಯಜೀವಿ ಇಲಾಖೆ ತನಿಖೆ ನಡೆಸಬೇಕು. ಸ್ಥಳೀಯವಾಗಿ ಜೇನುಗೂಡು ಅಭಿವೃದಿ ್ಧಡಿಸುವ ಘಟಕಗಳು ಹೆಚ್ಚಬೇಕು ಮತ್ತು ಜೇನಿಗೆ ಬರುವ ಸಾಂಕ್ರಾಮಿಕ ರೋಗ ತಡೆಗಟ್ಟಲು ಬೇಕಾದ ಉಪಾಯ ಕಂಡುಹಿಡಿಯಲು ಕೃಷಿ ವಿಶ್ವ ವಿದ್ಯಾಲಯಗಳು ಮುಂದಾಗಬೇಕು. ರಾಜ್ಯ ತೋಟಗಾರಿಕೆ ಇಲಾಖೆ ಜೇನು ರೋಗ ತಡೆಗೆ ಮುಂದಾಗಬೇಕು.

    | ಅನಂತ ಅಶೀಸರ ಜೀವವೈವಿಧ್ಯ ಮಂಡಳಿ ಅಧ್ಯಕ್ಷ

    ಜೇನು ಸಾಕಾಣಿಕೆ ಗ್ರಾಮೀಣ ಗೃಹ ಉದ್ದಿಮೆಯಾಗಿದೆ. ಜೇನು ತುಪ್ಪ ಆಹಾರ-ಔಷಧ ಎಂದು ಮಾನ್ಯತೆ ಪಡೆದಿರುವಾಗ ಜೇನು ಸಂಕುಲ ರೋಗ ಮುಕ್ತವಾಗಲು ತೋಟಗಾರಿಕೆ ಇಲಾಖೆ ವಿಶೇಷ ಕ್ರಮ-ಯೋಜನೆ ರೂಪಿಸಬೇಕು. ಕೆಂಪು ಮತ್ತು ಕಪ್ಪು ತುಡವಿ ಜೇನುಗಳಲ್ಲಿ ಯಾವುದು ಹೆಚ್ಚು ರೋಗ ಪೀಡಿತವಾಗಿವೆ ಎಂಬುದು ಖಚಿತವಾಗಬೇಕು. ಸ್ಥಳೀಯ ಪ್ರಬೇಧಗಳನ್ನು ಉಳಿಸುವ ಪ್ರಯತ್ನ ನಡೆಸಬೇಕು.

    | ನಾಗೇಂದ್ರ ಹೆಗಡೆ ಜೇನು ಕೃಷಿಕ ಶಿರಸಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts