More

    ಕ್ಷೇತ್ರದ ಅಬಿವೃದ್ಧಿಗೆ ಸಂಬಂಧಿಸಿದಂತೆ ನೇರ ಚರ್ಚೆಗೆ ಬರಲಿ

    ನಂಜನಗೂಡು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಮುಂಬರುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ನಂಜನಗೂಡಿನಲ್ಲಿ ಹೊಸ ಯೋಜನೆಗಳ ಜಾರಿಯಾಗಿಲ್ಲ ಎಂದು ಆರೋಪ ಮಾಡುವ ಬದಲಾಗಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನರ ಮುಂದೆ ನೇರ ಚರ್ಚೆಗೆ ಬರಲಿ ಎಂದು ಶಾಸಕ ಬಿ.ಹರ್ಷವರ್ಧನ್ ಆಹ್ವಾನಿಸಿದರು.


    ನಂಜನಗೂಡಿನ ಶಾಸಕರು ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಆರ್.ಧ್ರುವನಾರಾಯಣ ಅವರು ಮಾಡಿದ್ದ ಆರೋಪಕ್ಕೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಶಾಸಕರು ತಿರುಗೇಟು ನೀಡಿದರು.


    ಸ್ಥಳೀಯ ರೈತರ ಹಲವು ದಶಕಗಳ ಕನಸಾಗಿದ್ದ ನುಗು ಏತ ನೀರಾವರಿ ಯೋಜನೆ ಟೆಂಡರ್ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಬೆಳ್ಳಿರಥ ನಿರ್ಮಾಣ ಹಾಗೂ ನುಗು ಯೋಜನೆಗೆ ಚಾಲನೆ ಕೊಡಿಸಲಾಗುವುದು. ಜತೆಗೆ ನಂಜನಗೂಡಿನಲ್ಲಿ ಒಳಚರಂಡಿ ಯೋಜನೆಯ ಎರಡನೇ ಹಂತದ ಕಾಮಗಾರಿ ಹಾಗೂ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ಬಸವ ಪುತ್ಥಳಿ ನಿರ್ಮಾಣ ಸೇರಿದಂತೆ ನೂರಾರು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕ್ಷೇತ್ರಕ್ಕೆ ಅನುದಾನ ತರುವಲ್ಲಿ ನಾನು ಹೆಚ್ಚಿನ ಶ್ರಮ ವಹಿಸಿದ್ದೇನೆ. ಆದರೆ ಇವೆಲ್ಲವನ್ನೂ ಬದಿಗೊತ್ತಿ ಚುನಾವಣೆಯ ಗುಂಗಿನಲ್ಲಿರುವ ಧ್ರುವನಾರಾಯಣ ಅವರು ಜನರನ್ನು ಗೊಂದಲಕ್ಕೆ ಸಿಲುಕಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.


    ಇನ್ನು ಪಾದಯಾತ್ರೆಗೆಂದು ಹಳ್ಳಿಗಳಿಗೆ ತೆರಳಿದ್ದ ವೇಳೆ ಮಾಜಿ ಸಂಸದರು ಸಾಮಾನ್ಯ ವರ್ಗದವರ ಬಡಾವಣೆಗಳಿಗೆ ತೆರಳಿಲ್ಲ ಕಳೆದ ಹಲವು ವರ್ಷಗಳಿಂದ ಹಳ್ಳಕೊಳ್ಳಗಳಿಂದ ಕೂಡಿದ್ದ ಸಾಮಾನ್ಯ ವರ್ಗದವರ ಬಡಾವಣೆಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇವೆಲ್ಲವೂ ಮಾಜಿ ಸಂಸದರ ಕಣ್ಣಿಗೆ ಬಿದ್ದಿಲ್ಲವೇ ಎಂದು ಪ್ರಶ್ನಿಸಿದರು.


    ನಂಜನಗೂಡು ಸರ್ವ ಜನಾಂಗದ ಜನರ ಸೌಹಾರ್ದತೆಯ ಬೀಡು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಆದರೆ ಧ್ರುವನಾರಾಯಣ ಅವರ ಹುಟ್ಟುಹಬ್ಬದ ನೆಪದಲ್ಲಿ ನಂಜನಗೂಡಿನಲ್ಲಿ ಕೋಮು ಪ್ರಚೋದನೆಯನ್ನುಂಟು ಮಾಡಲು ಪುಸ್ತಕಗಳನ್ನು ಹಂಚಲಾಗಿತ್ತು ಎಂದು ಆರೋಪಿಸಿದರು.


    ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಂಜನಗೂಡಿಗೆ 1,200 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಹೇಳುವ ಧ್ರುವನಾರಾಯಣ ಅವರು ಆ ಸಂದರ್ಭ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರ ಒತ್ತಾಸೆ ಮೇರೆಗೆ ಯೋಜನೆಗಳು ಜಾರಿಗೊಂಡಿದ್ದವು ಎಂಬುದನ್ನು ಮರೆತ್ತಿದ್ದಾರೆ ಎಂದರು.


    ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಪ್ರಬುದ್ಧ ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ನಿಮ್ಮ ಸ್ವಾರ್ಥಕ್ಕಾಗಿ ಕ್ಷೇತ್ರದ ಜನರನ್ನು ಗೊಂದಲಕ್ಕೆ ದೂಡಬೇಡಿ. ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದ್ದಲ್ಲಿ ದಾಖಲೆಗಳೊಂದಿಗೆ ನನ್ನೊಂದಿಗೆ ಬನ್ನಿ ಎಂದು ಆಹ್ವಾನಿಸಿದರು.
    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಹೊರಳವಾಡಿ ಮಹೇಶ್, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಸಿಂಧುವಳ್ಳಿ ಕೆಂಪಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts