More

    ಕೋಟೆನಾಡಲ್ಲಿ ಮೊಳಗಲಿದೆ ಕನ್ನಡದ ರಣಕಹಳೆ ಇಂದು

    ಚಿತ್ರದುರ್ಗ: ಕರ್ನಾಟಕದ ಪರಂಪರೆ, ಕನ್ನಡ ಸಾಹಿತ್ಯದ ಇತಿಹಾಸ, ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ನ. 1ರ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಕೋಟೆನಾಡಿನಲ್ಲೂ ಭರದ ಸಿದ್ಧತೆಗಳು ನಡೆದಿವೆ.

    ಆಚರಣೆಗೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದಿಂದಲೂ ಮಂಗಳವಾರ ಸಿದ್ಧತೆಗಳು ನಡೆದವು.

    ವೇದಿಕೆಯ ಮುಂಭಾಗ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಹಳದಿ ಮತ್ತು ಕೆಂಪು ವರ್ಣದ ಬಟ್ಟೆಯಿಂದಲೂ ಅಲಂಕರಿಸಿದ್ದು, ನಾಡು-ನುಡಿ ಪ್ರತಿಬಿಂಬಿಸಿ, ಕನ್ನಡ ಪ್ರೇಮ ಮೆರೆಯಲು ಮೈದಾನ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

    ಜಿಲ್ಲಾ ಮಟ್ಟದ ಈ ಉತ್ಸವದ ಅಂಗವಾಗಿ ಬೆಳಗ್ಗೆ 7.30ಕ್ಕೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ನಗರದ ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗದಿಂದ ಚಾಲನೆ ದೊರೆಯಲಿದೆ. ವೈವಿಧ್ಯಮಯ ಜನಪದ ಕಲಾತಂಡಗಳು ಮೆರುಗು ಹೆಚ್ಚಿಸಲಿದ್ದು, ಸಾರ್ವಜನಿಕರು, ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

    ರಾಜ್ಯ ಸರ್ಕಾರದ ಐದು ಗ್ಯಾರಂಟಿ ಸೇರಿ ಹಲವು ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಮುಖ್ಯ ರಸ್ತೆಯಲ್ಲಿ ಸಂಚರಿಸಿ ಮೈದಾನ ತಲುಪಲಿದೆ.

    ಬೆಳಗ್ಗೆ 9ಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ರಾಷ್ಟ್ರ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ.

    ಕನ್ನಡಾಂಬೆಗೆ ನುಡಿ ನಮನ: ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಎಲ್ಲಾದರು ಇರು ಎಂತಾದರು ಇರು’, ದ.ರಾ.ಬೇಂದ್ರ ಅವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕರ ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ಚನ್ನವೀರ ಕಣವಿ ಅವರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ 5 ಗೀತೆಗಳನ್ನು ಗೀತಗಾಯನ ತಂಡ ಪ್ರಸ್ತುತ ಪಡಿಸಲಿದೆ. ಜಿಲ್ಲೆಯ ಎಲ್ಲೆಡೆ ಈ ಗೀತೆಗಳು ಮಾರ್ದನಿಸಲಿವೆ.

    ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ವಕ್ಫೃ್ ಮಂಡಳಿ ರಾಜ್ಯ ಅಧ್ಯಕ್ಷ ಕೆ.ಅನ್ವರ್ ಭಾಷಾ, ಎಂಎಲ್ಸಿಗಳಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಎಲ್ಲಾ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಜೆ 6ಕ್ಕೆ ತರಾಸು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

    ಸಂಘ-ಸಂಸ್ಥೆಗಳಿಂದಲೂ ಆಚರಣೆ: ಜಿಲ್ಲಾಡಳಿತ ಅಷ್ಟೇ ಅಲ್ಲದೆ, ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ, ಸಂಘ-ಸಂಸ್ಥೆಗಳಿಂದ, ಕನ್ನಡಪರ ಸಂಘಟನೆಗಳಿಂದ, ಖಾಸಗಿ ಶಾಲಾ-ಕಾಲೇಜುಗಳಿಂದಲೂ ಈ ಬಾರಿಯ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts