More

    ಕೆಡಿಪಿ ಸಭೆಗೆ ಮೇ 10 ಮುಹೂರ್ತ : 9 ತಿಂಗಳ ನಂತರ ಜಿಲ್ಲಾ ಸಚಿವ ಉಸ್ತುವಾರಿ ಸಚಿವ ಮುನಿರತ್ನ ನಡೆಸುತ್ತಿರುವ ಮೊದಲ ಸಭೆ

    ಪಾ.ಶ್ರೀ.ಅನಂತರಾಮ್​ ಕೋಲಾರ
    ಕೆಡಿಪಿ ಸಭೆಯನ್ನು ನಡೆಸಲು ಮೀನಮೇಷ ಎಣಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಜನರ ಟೀಕೆ ಟಿಪ್ಪಣಿಗೆ ಮಣಿದೋ ಅಥವಾ ಸಿಎಂ ನಿರ್ದೇಶನದ ಮೇರೆಗೋ ಮೇ.10ರಂದು ಬೆಳಗ್ಗೆ 11 ಗಂಟೆಗೆ ಕೆಡಿಪಿ ಸಭೆಯನ್ನು ಆಯೋಜಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.
    ಕಳೆದ ವರ್ಷ ಆಗಸ್ಟ್​ನಲ್ಲಿ ಕರೊನಾ ನಿಯಂತ್ರಣಕ್ಕಾಗಿ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡಿದ್ದ ಮುನಿರತ್ನ ಸರ್ಕಾರ ನೀಡಿದ್ದ ಟಾಸ್ಕ್​ಗಳನ್ನು ತಕ್ಕ ಮಟ್ಟಿಗೆ ನಿಬಾಯಿಸಿ ಜನರಲ್ಲಿ ವಿಶ್ವಾಸವನ್ನುಂಟು ಮಾಡಿದ್ದರು. ಈ ಸಂದರ್ಭದಲ್ಲಿ ಕೆಡಿಪಿ ಸಭೆ ಸೇರಿ ಇನ್ಯಾವುದೇ ಅಧಿಕೃತ ಚಟುವಟಿಕೆ ನಡೆಸಲು ಅವಕಾಶವಿಲ್ಲದೆ, ನಾಮಕೇವಾಸ್ತೆ ಸಚಿವರೆಂಬ ಟೀಕೆಗೆ ಗುರಿಯಾಗಿದ್ದರು.ತೋಟಗಾರಿಕೆ ಸಚಿವರಾಗಿರುವ ಮುನಿರತ್ನ ಅತಿ ಹೆಚ್ಚು ತರಕಾರಿ, ಹಣ್ಣು ಬೆಳೆಯುವ ಕೋಲಾರ ಜಿಲ್ಲೆಗೆ ಬಜೆಟ್​ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಕಟಣೆ ಮಾಡಿಸಲು ಆಗದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇಕ್ಕಟ್ಟಿಗೆ ಸಿಲುಕಬಹುದೆಂಬ ಕಾರಣಕ್ಕೆ ಕೋಲಾರ ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ಕಡಿಮೆ ಮಾಡಿದ್ದರು.
    ಗಣರಾಜ್ಯೋತ್ಸವ ದಿನದಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಗೆ ಯರಗೋಳ್​ ಡ್ಯಾಂನಿಂದ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಡ್ಯಾಂ ಪರಿಶೀಲನೆ ಮಾಡುವುದಾಗಿ ಹೇಳಿದ್ದರಾದರೂ ಮಾತು ಉಳಿಸಿಕೊಳ್ಳಲಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಏ.1ರಿಂದ ಜಿಲ್ಲೆಯ ಚಿತ್ರಣ ಬದಲಾಗಲಿದೆ, ಅಭಿವೃದ್ಧಿಯಲ್ಲಿ ಜಿಲ್ಲೆ ಮಾದರಿಯಾಗಲಿದೆ, ಆಡಳಿತ ಯಂತ್ರ ಸಂಪೂರ್ಣ ಕ್ರಿಯಾಶೀಲವಾಗಲಿದೆ ಎಂದು ಹೇಳಿದ್ದರಾದರೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗದೆ ಜನರ ಅಪಕೃಪೆಗೆ ಈಡಾಗಿದ್ದರು.
    ಎಂಎಲ್ಸಿ ಇಂಚರ ಗೋವಿಂದರಾಜು ಅವರೊಬ್ಬರು ಮಾತ್ರ ಧೈರ್ಯ ತೋರಿ ಆಸಕ್ತಿ ಇಲ್ಲದ ಮುನಿರತ್ನ ಉಸ್ತುವಾರಿ ಸಚಿವರಾಗಿ ಮುಂದುವರಿಯುವುದು ಬೇಡ ಎಂದು ಹೇಳಿದ್ದು ಹೊರತುಪಡಿಸಿದರೆ ಆಡಳಿತಾರೂಢ ಬಿಜೆಪಿಯ ಮುಖಂಡರ್ಯಾರು ಸಚಿವರ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿರಲಿಲ್ಲ. ಸಂಸದ ಮುನಿಸ್ವಾಮಿ, ವಿಧಾನ ಪರಿಷತ್​ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಸಹ ತಮ್ಮ ಪಾಡಿಗೆ ತಾವು ಇರುವುದರ ಬಗ್ಗೆಯೂ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
    ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತ ಮುನಿರತ್ನ ಅವರು, ತಡವಾದರೂ ಕೆಡಿಪಿ ಸಭೆ ನಡೆಸಲು ಸೂಚನೆ ನೀಡಿದ್ದು ಈ ಸಭೆ, ಜಿಲ್ಲೆಯ ಬಡ ಜನರಿಗೆ ಸಾಮಾಜಿಕ ನ್ಯಾಯ, ಸ್ವಾಭಿಮಾನದ ಬದುಕಿಗೆ ಭದ್ರತೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಟ್ಟ ನಿರ್ಧಾರ ಕೈಗೊಳ್ಳುವ ವೇದಿಕೆಯಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ.
    ಸಭೆಯನ್ನು ಕಾಟಾಚಾರಕ್ಕೆ ನಡೆಸಿ, ಊಟ ಮುಗಿದ ಮೇಲೆ ಮುಂದೂಡದೆ ಆರೋಗ್ಯ, ಆಹಾರ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ನಡೆಸಿ ಒಳ್ಳೆಯ ಲ ಸಿಗುವಂತೆ ಮಾಡಬೇಕು. ಸರ್ಕಾರದಿಂದ ಜಿಲ್ಲೆಗೆ ದೊರೆತಿರುವ ಅನುದಾನ, ಅಭಿವೃದ್ಧಿಗೆ ಆಗಿರುವ ಖರ್ಚು, ಉಳಿಕೆ ಹಣ, ಏ.1ರಿಂದ ಆಗಿರುವ ಸುಧಾರಣೆ, ಬಜೆಟ್​ನಲ್ಲಿ ಜಿಲ್ಲೆಗೆ ಆಗಿರುವ ಲಾಭ, ಇನ್ನೊಂದು ವರ್ಷದಲ್ಲಿ ಜಾರಿಗೊಳ್ಳುವ ಜನಪರ ಕಾರ್ಯಕ್ರಮಗಳ ಕುರಿತು ಕೆಡಿಪಿ ಸಭೆಯಲ್ಲಿ ಚಿಂತನ ಮಂಥನವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವರ ಮೇಲಿದ್ದು, ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ತಮ್ಮ ಪಾತ್ರ ನಿರ್ವಹಿಸುತ್ತಾರೋ ನೋಡಬೇಕು.

    ಕೆಡಿಪಿ ಸಭೆಗೆ ಜಿಪಂ ಸಿಬ್ಬಂದಿಯಿಂದ ಆಹ್ವಾನ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಈವರೆಗೆ ಸಂದೇಶ ಬಂದಿಲ್ಲ. ಕರ್ತವ್ಯ, ಜವಾಬ್ದಾರಿ ದೃಷ್ಟಿಯಿಂದ ಸಭೆಗೆ ಹಾಜರಾಗುತ್ತೇನೆ, ಕೆಡಿಪಿ ಸಭೆ ಶಿಷ್ಟಾಚಾರದ ಪ್ರಕಾರ ನಡೆದರೆ ಜನರ ನಿರೀೆಗೆ ನ್ಯಾಯ ದೊರಕಿಸಬಹುದು.
    ಕೆ.ವೈ.ನಂಜೇಗೌಡ, ಶಾಸಕ, ಮಾಲೂರು.

    ಮೇ 7ರಂದು ನಡೆಯಬೇಕಿದ್ದ ಕೆಡಿಪಿ ಸಭೆಯನ್ನು ಮಂದೂಡಿ ಮೇ 10ಕ್ಕೆ ನಿಗದಿ ಮಾಡಲಾಗಿದೆ. ಆದರೆ ಸಭೆ ನಡೆಯುವವರೆಗೆ ಅನಿಶ್ಚಿತತೆ ಕಾಡುತ್ತದೆ. ಕೋಲಾರ ಜಿಲ್ಲೆಯಲ್ಲಿ ನಡೆಯುವ ಸಭೆಗೆ ಮೊದಲ ಬಾರಿಗೆ ಹಾಜರಾಗುವ ಅವಕಾಶ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೋ ನೋಡಬೇಕು.
    ಎಂ.ಎಲ್​.ಅನಿಲ್​ ಕುಮಾರ್​, ಎಂಎಲ್​ಸಿ, ಕೋಲಾರ&ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts