More

    ಮಳೆ ಆರಂಭವಾದರೂ ರಸ್ತೆಗಿಲ್ಲ ದುರಸ್ತಿ ಭಾಗ್ಯ

    ಎನ್.ಮುನಿವೆಂಕಟೇಗೌಡ ಕೋಲಾರ

    ಜಿಲ್ಲೆಯಾದ್ಯಂತ ಮುಂಗಾರು ಶುರುವಾಗಿದ್ದು, ಮಳೆ ಹೆಚ್ಚಾಗುವ ಮೊದಲೇ ಜಿಲ್ಲಾಡಳಿತ ಕೋಲಾರ ಒಳಗೊಂಡಂತೆ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳು, ಕೆರೆ-ಕಟ್ಟೆಗಳು, ರಾಜಕಾಲುವೆಗಳನ್ನು ದುರಸ್ತಿಪಡಿಸಿ, ಮುಂದಾಗುವ ಅನಾಹುತ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.


    ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ರಸ್ತೆಗಳು ಗುಂಡಿ ಬಿದ್ದು ಕೆಸರುಗದ್ದೆಗಳಾಗಿ ಮಾರ್ಪಟ್ಟು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದವು. ಆಗ ಎಚ್ಚೆತ್ತಿದ್ದ ಜಿಲ್ಲಾಡಳಿತ ದುರಸ್ತಿಗೆ ಮುಂದಾಗಿತ್ತಾದರೂ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ತಾಲೂಕಿನಿಂದ ಮತ್ತು ಹೋಬಳಿ ಕೇಂದ್ರಗಳಿಗೆ ಜಿಲ್ಲೆಗೆ ಬರುವ ಸಂಪರ್ಕ ರಸ್ತೆಗಳ ದುರಸ್ತಿ ಸ್ವಲ್ಪಮಟ್ಟಿಗೆ ಆಗಿದೆ. ಇನ್ನು ಅನೇಕ ಕಡೆ ರಸ್ತೆಗಳ ದುರಸ್ತಿಯಾಗಬೇಕಿದ್ದು, ಕೋಲಾರ ನಗರದಲ್ಲಿ ಅರ್ಧದಷ್ಟು ರಸ್ತೆಗಳ ದುರಸ್ತಿ ಆಗಬೇಕಿದೆ. ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದಾಗಿ ದುರಸ್ತಿ ಕಾಮಗಾರಿ ಆಮಗತಿಯಲ್ಲಿ ಸಾಗಿತ್ತು. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.


    ಒಂದು ವಾರದಿಂದ ಮಳೆ ಚುರುಕುಗೊಂಡಿದೆ. ಆದರೆ ರಸ್ತೆಗಳಲ್ಲಿನ ಗುಂಡಿ ಹಾಗೆ ಇದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಆರಂಭ ಹಂತದಲ್ಲಿ ಮಳೆ ಆರ್ಭಟಿಸುತ್ತಿರುವುದರಿಂದ ಈ ವರ್ಷ ಉತ್ತಮ ಮಳೆ ಆಗುವ ನಿರೀಕ್ಷೆ ಇದ್ದು, ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ದುರಸ್ತಿಗೆ ಮುಂದಾಗಬೇಕಿದೆ.

    ಕೆರೆ-ಕಟ್ಟೆಗಳ ಪುನಶ್ಚೇತನಕ್ಕೂ ಮುಂದಾಗಲಿ
    ಈ ವರ್ಷ ಮುಂಗಾರು ಮಳೆ ಜೋರು ಇರುವುದರಿಂದ ಖಾಲಿಯಾಗಿರುವ ಕೆರೆಗಳೂ ಭರ್ತಿಯಾಗುವ ನಿರೀಕ್ಷೆ ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೆರೆ-ಕಟ್ಟೆಗಳ ಪುನಶ್ಚೇತನ, ಕೆರೆಗಳಿಗೆ ನೀರು ಬರುವ ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕಿದೆ. ಇದರಿಂದ ನೀರು ಶೇಖರಣೆಗೆ ಅನುಕೂಲವಾಗಲಿದೆ. ಇಲ್ಲವಾದರೆ ಕಳೆದ ವರ್ಷ ಅನುಭವಿಸಿದ ನೀರಿನ ಬವಣೆಯನ್ನು ಈ ವರ್ಷವೂ ಅನುಭವಿಸಬೇಕಾಗುತ್ತದೆ.

    ಕಳೆದ ವರ್ಷದಲ್ಲಿ ಟೆಂಡರ್ ಕರೆಯಲಾಗಿದ್ದ ರಸ್ತೆಗಳ ಡಾಂಬರಿಕರಣ ಶೇ. 95 ಪೂರ್ಣಗೊಂಡಿದೆ. ರಸ್ತೆ ನಿರ್ವಹಣೆ ಅನುದಾನದಲ್ಲಿ ಗುಂಡಿ ಮುಚ್ಚಲಾಗಿದೆ. ಮತ್ತೆ ಗುಂಡಿ ಬಿದ್ದಿರುವುದನ್ನು ನಿರ್ವಹಣೆ ಮಾಡಲು ಅನುದಾನ ಬಂದರೆ ಗುಂಡಿ ಮುಚ್ಚಲಾಗುವುದು. ಈ ವರ್ಷ ರಸ್ತೆಗಳ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದರೆ ದುರಸ್ತಿ ಮಾಡಲಾಗುವುದು. ಟೇಕಲ್ ರಸ್ತೆಯ ಕೋರಗಂಡಹಳ್ಳಿ ರಸ್ತೆ ಟೆಂಡರ್ ಆಗಿದೆ. ಶೀಘ್ರ ಕಾಮಗಾರಿ ಆರಂಭಿಸಲಿದ್ದಾರೆ. ಬೇತಮಂಗಲ ರಸ್ತೆಯ ಚಾಮರಹಳ್ಳಿ, ಪಾಟ್ನ ಬಳಿ ರಸ್ತೆ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಬೇಕಿದೆ.
    ರಾಮಮೂರ್ತಿ, ಕಾರ್ಯಪಾಲಕ ಅಭಿಯಂತ ಕೋಲಾರ

    ಕೋಲಾರ ನಗರದಲ್ಲಿ ಕಳೆದ 5 ವರ್ಷಗಳಿಂದ ರಸ್ತೆಗಳು ದುರಸ್ತಿಗೊಂಡಿಲ್ಲ. 2 ವರ್ಷಗಳ ಹಿಂದೆ ಸುರಿದ ಮಳೆಗೆ ನಗರದಲ್ಲಿ ರಸ್ತೆಗಳು ಹಾಳಾಗಿದ್ದರೂ ದುರಸ್ತಿ ಮಾಡಿಲ್ಲ. ಮಳೆ ಪ್ರಾರಂಭವಾಗಿದ್ದು, ಅಷ್ಟರೊಳಗಾಗಿ ನಗರದ ರಸ್ತೆಗಳು ದುರಸ್ತಿಯಾಗಬೇಕಾಗಿದೆ. ಮಳೆ ಹೆಚ್ಚಾಗುವ ಒಳಗಾಗಿ ಕರೆಕಟ್ಟೆಗಳ ರಿಪೇರಿ ಸೇರಿ ರಾಜುಕಾಲುವೆಗಳ ಒತ್ತುವರಿ ತೆರವುಗೊಳಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ.
    ನಾಗರಾಜ್, ಅಣ್ಣಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts