More

    ಶೈಕ್ಷಣಿಕ ಪರಿಕರ ಅಕ್ರಮ ಮಾರಾಟ?; ಕೆಜಿಎಫ್ ಖಾಸಗಿ ಶಾಲೆಗೆ ಬಿಇಒ ಭೇಟಿ ನೀಡಿ, ನೋಟಿಸ್ ಜಾರಿ

    ಕೆಜಿಎಫ್: ನಗರದ ಪ್ರತಿಷ್ಠಿತ ಶಾಲೆಯೊಂದರ ಆಡಳಿತ ಮಂಡಳಿಯವರು ಅಕ್ರಮವಾಗಿ ಶಾಲೆಯಲ್ಲಿ ಮಕ್ಕಳ ಶಾಲಾ ಪರಿಕರಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಬಂದ ಹಿನ್ನೆಲೆಯಲ್ಲಿ ಬಿಇಒ ಮುನಿವೆಂಕಟರಾಮಾಚಾರಿ ಅವರು ಶುಕ್ರವಾರ ಶಾಲೆಗೆ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವುದು ಮರುಕಳಿಸಿದರೆ ಶಾಲೆಯ ಮಾನ್ಯತೆ ರದ್ದು ಮಾಡುವುದಾಗಿ ಎಚ್ಚರಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಸರ್ಕಾರದ ಆದೇಶದಂತೆ ಶಾಲೆಯಲ್ಲಿ ಕೇವಲ ಸರ್ಕಾರದಿಂದ ಪೂರೈಕೆಯಾಗಿರುವ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನಷ್ಟೇ ಉಚಿತವಾಗಿ ಮಕ್ಕಳಿಗೆ ವಿತರಿಸಬೇಕು. ಇದನ್ನು ಹೊರತುಪಡಿಸಿ ನೋಟ್ ಪುಸ್ತಕವಾಗಲೀ, ಬ್ಯಾಗ್, ಸಮವಸ್ತ್ರ, ಶೂ ಸೇರಿದಂತೆ ಇನ್ನಿತರ ಪರಿಕರಗಳನ್ನು ಯಾವುದೇ ಕಾರಣಕ್ಕೂ ಶಾಲೆಯಲ್ಲಿ ಮಾರಾಟ ಮಾಡುವಂತಿಲ್ಲ. ಆದರೆ ಈ ಖಾಸಗಿ ಶಾಲೆಯ ಆಡಳಿತ ಮಂಡಳಿ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಪಾಲಕರನ್ನು ಶಾಲೆಗೆ ಕರೆಸಿಕೊಂಡು ದುಪ್ಪಟ್ಟು ಹಣ ಪಡೆದುಕೊಂಡು ಪರಿಕರಗಳನ್ನು ವಿತರಣೆ ಮಾಡುತ್ತಿರುವುದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.

    ಹಿಂಬಾಗಿಲಿನಿಂದ ಮಾರಾಟ: ಶಾಲೆಯ ಮುಂಬಾಗಿಲಿಗೆ ಬೀಗವನ್ನು ಜಡಿದು ಹಿಂಬಾಗಿಲಿನಿಂದ ಪಾಲಕರನ್ನು ಕರೆಸಿಕೊಂಡು ಪಾಲಕರ ಬಳಿ ದುಪ್ಪಟು ಹಣ ಪಡೆದುಕೊಂಡು ಪುಸ್ತಕ ಮತ್ತಿತರ ವಸ್ತುಗಳನ್ನು ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದು, ನಾವು ನಮ್ಮ ಮಕ್ಕಳಿಗೆ ಶಾಲಾ ಪರಿಕರಗಳನ್ನು ಕದ್ದುಮುಚ್ಚಿ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪಾಲಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
    ಅನಧಿಕೃತ ಶಾಲೆ: ತಾಲೂಕಿನಾದ್ಯಂತ ಅಧಿಕೃತ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳ ಮಾಹಿತಿಯನ್ನು ಪಾಲಕರಿಗೆ ಅಧಿಕಾರಿಗಳು ನೀಡಬೇಕೆಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಅಧಿಕಾರಿಗಳು ಮಾತ್ರ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಶಾಲೆಯು ಅನುಮತಿ ಪಡೆದುಕೊಂಡಿರುವ ಮೂಲಸ್ಥಾನ ಬಿಟ್ಟು ಬೇರೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅನಧಿಕೃತ ಶಾಲೆ ಎಂದು ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದರೂ ಆಡಳಿತ ಮಂಡಳಿ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಕಾರ್ಯನಿರ್ವಹಿಸುತ್ತಿದೆ.

    ಶಾಲೆಯಲ್ಲಿ ಅನೈರ್ಮಲ್ಯ: ಶಾಲೆಯಲ್ಲಿ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡುತ್ತಿದ್ದು ಬರೋಬ್ಬರಿ 2,500 ಮಕ್ಕಳಿಗೆ ಕೇವಲ 15 ಶೌಚಗೃಹಗಳನ್ನು ಮಾತ್ರ ಒದಗಿಸಿದೆ. ಇರುವ ಶೌಚಗೃಹಗಳಲ್ಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲಿ ಕಲಿಯುವ ಮಕ್ಕಳ ಪರಿಸ್ಥಿತಿ ಹೇಗೆ ಇರಬೇಕು? ಶಾಲೆಯು ಬಿಇಒ ಕಚೇರಿಗೆ ಹೊಂದಿಕೊಂಡಿದ್ದರೂ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ದೂರು ನೀಡಿದಾಗ ನಾಮ್‌ಕೇವಾಸ್ತೆಗೆ ಶಾಲೆಗೆ ಭೇಟಿ ನೀಡಿ ನೊಟೀಸ್ ನೀಡುತ್ತಾರೆಯೇ ಹೊರತೂ ಸಮಸ್ಯೆಗೆ ಪರಿಹಾರವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಪಾಲಕರ ದೂರು.

    ಶಾಲಾ ಪರಿಕರಗಳನ್ನು ಮಹಾವೀರ್ ಜೈನ್ ಶಾಲೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ ಆಡಳಿತ ಮಂಡಳಿಗೆ ನೊಟೀಸ್ ಜಾರಿ ಮಾಡಿ, ಉಪನಿರ್ದೇಶಕರಿಗೆ ಪ್ರತಿ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಉಪ ನಿರ್ದೇಶಕರೂ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
    ಮುನಿವೆಂಕಟರಾಮಾಚಾರಿ, ಬಿಇಒ, ಕೆಜಿಎಫ್

    ಶಾಲೆಯಲ್ಲಿ ಸಮವಸ್ತ್ರ, ನೋಟ್ ಪುಸ್ತಕ ಮತ್ತಿತರ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡು ತ್ತಾರೆ. ಈ ಕುರಿತು ಬಿಇಒಗೆ ದೂರು ನೀಡಲಾಗಿದೆ.
    ಶಾಲಿನಿ ನಂದಕುಮಾರ್, ನಗರಸಭೆ ಸದಸ್ಯೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts