More

    ಕುಷ್ಠರೋಗ ದೇವರ ಶಾಪವಲ್ಲ

    ಹುಣಸೂರು: ಗ್ರಾಮೀಣ ಭಾಗಗಳಲ್ಲಿ ಕುಷ್ಠರೋಗವನ್ನು ಇಂದಿಗೂ ಮೂಢನಂಬಿಕೆಯೊಂದಿಗೆ ಪರಿಗಣಿಸುವ ಪ್ರವೃತ್ತಿ ಇದೆ. ಕುಷ್ಠರೋಗ ಯಾವುದೇ ದೇವರ ಶಾಪವಲ್ಲ, ವ್ಯಕ್ತಿಯ ವೈಯಕ್ತಿಕ ಸ್ವಚ್ಛತೆ, ಆರೋಗ್ಯಪೂರ್ಣ ಬದುಕಿನಿಂದ ಗುಣವಾಗುವ ಕಾಯಿಲೆಯಾಗಿದೆ ಎಂದು ನಗರದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸರ್ವೇಶ್‌ರಾಜೇ ಅರಸ್ ಅಭಿಪ್ರಾಯಪಟ್ಟರು.


    ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಎಲ್‌ಸಿಡಿಸಿ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ 2022-23ರ ಅಂಗವಾಗಿ ಆರೋಗ್ಯ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


    ಸಮಾಜಕ್ಕೆ ಶಾಪವಾಗಿರುವ ಕುಷ್ಠರೋಗ ಪತ್ತೆಕಾರ್ಯದಲ್ಲಿ ಪಾಲ್ಗೊಳ್ಳುವುದು ಪುಣ್ಯಕಾರ್ಯವಾಗಿದೆ. ತಾಲೂಕಿನಲ್ಲಿ ಪ್ರಸ್ತುತ ಒಂದು ಕುಷ್ಠರೋಗ ಪ್ರಕರಣ ಮಾತ್ರ ದಾಖಲಾಗಿದ್ದು, ಆ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.


    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, ಸೆ.12ರಿಂದ 29ರವರೆಗೆ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ ನಡೆಯಲಿದೆ. ತರಬೇತಿ ಹೊಂದಿದ ಸಿಬ್ಬಂದಿ ಪ್ರತಿ ಮನೆಮನೆಗೆ ತೆರಳಿ ಕುಷ್ಠರೋಗ ಲಕ್ಷಣ ಹೊಂದಿರುವವರ ಪತ್ತೆಕಾರ್ಯ ನಡೆಸಲಿದ್ದಾರೆ. ಕುಷ್ಠರೋಗಕ್ಕೆ ಇಲಾಖೆಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಸ್ಪರ್ಶರಹಿತ ಮಚ್ಚೆ, ಕೈಕಾಲುಗಳಲ್ಲಿ ಜೋಮು ಕಂಡುಬಂದಲ್ಲಿ, ಬಹುವಿಧ ಔಷಧ ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸಬಹುದಾಗಿದೆ ಎಂದರು.


    ಮೈಸೂರಿನ ಡಿಎನ್‌ಟಿ ಮೇಲ್ವಿಚಾರಕ ಮತ್ತು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಂದೀಪ್ ಮಾತನಾಡಿ, ಪತ್ತೆಕಾರ್ಯದ ವೇಳೆ ವ್ಯಕ್ತಿಯ ಚರ್ಮದ ಮೇಲೆ ಯಾವುದೇ ತಿಳಿ, ಬಿಳಿ, ತಾಮ್ರವರ್ಣದ ಮಚ್ಚೆ ಕಂಡುಬಂದಲ್ಲಿ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪೆ ಮುಚ್ಚುವಲ್ಲಿ ತೊಂದರೆ, ಬೆರಳುಗಳು ಮಡಿಚಿಕೊಂಡಿದ್ದರೆ, ನಡೆಯುವಾಗ ಕಾಲು ಎಳೆಯುವುದು ಮುಂತಾದ ಲಕ್ಷಣಗಳನ್ನು ಕಡ್ಡಾಯವಾಗಿ ಗಮನಿಸಬೇಕೆಂದು ಕೋರಿದರು.


    ಮತ್ತೊಬ್ಬ ಸಂಪನ್ಮೂಲವ್ಯಕ್ತಿ ಸುಮಂತ್ ರೋಗ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.


    ಕಾರ್ಯಾಗಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ, ತಾಪಂ ಯೋಜನಾಧಿಕಾರಿ ರಾಜೇಶ್, ಇಸಿಒ ಕುಮಾರಸ್ವಾಮಿ, ವಿಶ್ವನಾಥ್, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
    ಇದೇ ಸಂದರ್ಭದಲ್ಲಿ ಅಭಿಯಾನ ಕುರಿತಾದ ಪೋಸ್ಟರ್‌ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts