More

    ಕಲಬುರಗಿ ಇಂದು ಸಂಪೂರ್ಣ ಸ್ತಬ್ಧ

    ಕಲಬುರಗಿ: ಹತೋಟಿಗೆ ಬಾರದೆ ತನ್ನ ರಣಕೇಕೆ ಮುಂದುವರಿಸಿರುವ ಮಹಾಮಾರಿ ಕರೊನಾವನ್ನು ಕಟ್ಟಿ ಹಾಕುವ ಭಾಗವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರ ಸಂಪೂರ್ಣ ಲಾಕ್ಡೌನ್ ಮತ್ತು ಕರ್ಫೂ ಮಹಾನಗರ ಸೇರಿ ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸರು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಶನಿವಾರ ಸಂಜೆಯಿಂದಲೇ ಕಾರ್ಯೋನ್ಮುಖರಾದರು. ತುರ್ತು ಮತ್ತು ಅಗತ್ಯ ಸೇವೆಗಳಿಗೆ ರಿಯಾಯಿತಿ ಇರಲಿದೆ.
    ಶನಿವಾರ ಮಧ್ಯಾಹ್ನದಿಂದಲೇ ಸಂಡೇ ದಿನ ಹೊರಗೆ ಬಂದ್ರೆ ಹುಷಾರ್ ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದರು. ಅನಗತ್ಯವಾಗಿ ಹೊರಗೆ ಓಡಾಡಿದ್ದು ಕಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ., ಪೊಲೀಸ್ ಆಯುಕ್ತ ಸತೀಶಕುಮಾರ್ ಮತ್ತು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಎಚ್ಚರಿಕೆ ನೀಡಿದ್ದಾರೆ.
    ಶನಿವಾರ ರಾತ್ರಿ ನಗರದ ಪ್ರಮುಖ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ವಾಹನಗಳಲ್ಲಿ ಖಾಕಿಧಾರಿಗಳು ಸಿಟಿ ರೌಂಡ್ಸ್ ಮಾಡುವ ಮೂಲಕ ಪಥ ಸಂಚಲನ ನಡೆಸಿದರು.
    ಪೊಲೀಸ್ ಆಯುಕ್ತ ಸತೀಶಕುಮಾರ್ ಮತ್ತು ಡಿಸಿಪಿ ಕಿಶೋರಬಾಬು ಮಾರ್ಗದರ್ಶನದಲ್ಲಿ ಎಸಿಪಿಗಳಾದ ವಿಜಯಕುಮಾರ, ಎಸ್.ಎಚ್. ಸುಬೇದಾರ, ವೀರೇಶ ಕರಡಿಗುಡ್ಡ, ಗಿರೀಶ, ಇನ್ಸ್ಪೆಕ್ಟರ್ಗಳಾದ ಪಂಡಿತ ಸಗರ, ಎಲ್.ಎಚ್. ಗೌಂಡಿ, ಕಪೀಲ್ದೇವ, ಅರುಣಕುಮಾರ ಮುರಗುಂಡಿ, ಸಂಗಮನಾಥ ಹಿರೇಮಠ ಇತರರು ವಾಹನಗಳಲ್ಲಿ ಸೈರನ್ ಹಾಕಿಕೊಂಡು ನಗರ ಸಂಚಾರ ಮೂಲಕ ಭಾನುವಾರದ ಕರ್ಫ್ಯೂ ನಿಯಮಗಳನ್ನು ಪಾಲಿಸಬೇಕು. ಮನೆಯಿಂದ ಅಗನತ್ಯವಾಗಿ ಯಾರೂ ಹೊರಗೆ ಬರದಂತೆ ಸಂದೇಶ ರವಾನಿಸಿದರು.
    ಎಸ್ವಿಪಿ ವೃತ್ತ, ಬಸ್ ನಿಲ್ದಾಣ, ಜೇವರ್ಗಿ ಮತ್ತು ಹಳೆಯ ಜೇವರ್ಗಿ ರಸ್ತೆ, ಸೂಪರ್ ಮಾರ್ಕೆಟ್, ಗಂಜ್, ಶಹಾಬಜಾರ್, ಸೇಡಂ ರಸ್ತೆ ಮೊದಲಾದ ಕಡೆ ಪೊಲೀಸರು ರೌಂಡ್ ಹಾಕಿದರು. ಹತ್ತಾರು ವಾಹನಗಳು ಒಮ್ಮೆಲೆ ಸೈರನ್ ಹಾಕಿಕೊಂಡು ಬಡಾವಣೆಗಳಲ್ಲಿ ಓಡಾಡಿದ್ದರಿಂದ ಜನರು ಕೆಲಹೊತ್ತು ಬೆಚ್ಚಿದರು. ಬೆನ್ನಲ್ಲೇ ಮೈಕ್ ಮೂಲಕ ಸಂದೇಶ ನೀಡಿದರು.

    ಕರೊನಾ ಹತೋಟಿಗೆ ತರಲು ಸರ್ಕಾರದ ನಿರ್ದೇಶನದಂತೆ ಸಂಡೇ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಕರ್ಫ್ಯೂ ಸಹ ಇರಲಿದೆ. ಆದೇಶ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
    | ಬಿ.ಶರತ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts