More

    ಮಹಿಳೆ ಮನೆ ಬೆಳಗುವ ಸೂರ್ಯ

    ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ಮೂಲಕ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಪಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಹಳಷ್ಟು ಸಹಾಯ ಮಾಡುತ್ತಿದೆ. ಅದರ ಮೂಲಕ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅವಕಾಶಗಳು ಬಾಗಿಲು ತಟ್ಟಿದಾಗ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು.

    aniske ಅ ಜಡವಾಗಿ ಮಲಗಿರುವ ಜಗತ್ತಿಗೆ ಚೈತನ್ಯ ಶಕ್ತಿಯನ್ನು ಸೂರ್ಯ ನೀಡುತ್ತಾನೆ. ಜಗತ್ತಿನ ಚರಾಚರ ವಸ್ತುಗಳನ್ನು ಎಚ್ಚರಿಸುವವನೇ ಸೂರ್ಯ. ಸೂರ್ಯೋದಯ ಆದ ಕೂಡಲೇ ಹೂವು ಅರಳುತ್ತದೆ, ಹಕ್ಕಿ ಹಾಡುತ್ತದೆ, ಜಗತ್ತಿನ ಎಲ್ಲಾ ಜೀವಿಗಳಿಗೂ ನವಜೀವ ಬಂದ ಅನುಭವವಾಗುತ್ತದೆ. ಅದೇ ರೀತಿ, ಮನೆ ಬೆಳಗುವ ಸೂರ್ಯ ಯಾರೆಂದರೆ ಮಹಿಳೆ. ಅವಳು ಎದ್ದರೆ ಮಾತ್ರ ಮನೆಯಲ್ಲಿ ಬೆಳಕಾಗುತ್ತದೆ. ಆಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ಶಾಂತವಾಗಿ ಅವಿಶ್ರಾಂತವಾಗಿ ದುಡಿಯುತ್ತಾಳೆ. ಅದು ಯಾರಿಗೂ ಗೋಚರವಾಗುವುದಿಲ್ಲ.

    ಮಹಿಳೆಯರಲ್ಲಿ ವಿಶೇಷ ಶಕ್ತಿಯಿದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು. ಆ ಸಾಮರ್ಥ್ಯ ಅವಳಲ್ಲಿದೆ. ಇಂದು ಮನೆ ನಿರ್ವಹಣೆಗೆ ಮಾತ್ರ ಮಹಿಳೆ ಸೀಮಿತವಾಗಿಲ್ಲ. ಅನೇಕ ಹಿಂದುಳಿದ ಪ್ರದೇಶಗಳಲ್ಲಿ ಮಾರುಕಟ್ಟೆ, ಕೃಷಿ, ಅಂಗಡಿಗಳು ಸೇರಿದಂತೆ ಎಲ್ಲದರಲ್ಲೂ ಮಹಿಳೆಯರೇ ಇರುತ್ತಾರೆ. ಹಳ್ಳಿಯ ಮಹಿಳೆಯರು ಎಂದಿಗೂ ನಿರುದ್ಯೋಗಿಗಳಾಗಿರಲಿಲ್ಲ. ಕೂಲಿ ಕೆಲಸ, ಕೃಷಿ ಯಾವುದಾದರೊಂದು ಕೆಲಸ ಮಾಡುತ್ತಲೇ ಬಂದಿರುವರು. ಆಗ ಅವರ ದುಡಿತಕ್ಕೆ ಸರಿಯಾದ ಮೌಲ್ಯವಿರಲಿಲ್ಲ. ಇಡೀ ದಿವಸ ಕೂಲಿ ಕೆಲಸ, ಗದ್ದೆ ಕೆಲಸ ಮಾಡಿದರೂ, ಇವತ್ತು ದುಡಿದು ಎಷ್ಟು ಆದಾಯ ಬಂತು ಅನ್ನೋ ವಿಷಯ ಮತ್ತು ಲೆಕ್ಕಾಚಾರ ಇರಲಿಲ್ಲ. ಆದರೆ ಯಾವಾಗ ಮಹಿಳೆ ಒಂದು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುವಳೋ, ಅಲ್ಲಿ ಲಾಭ ಮತ್ತು ಖರ್ಚುಗಳ ಜೊತೆಗೆ ಎಷ್ಟು ಬಂಡವಾಳ ಹಾಕಿದ್ದೇನೆ? ಈ ಯಂತ್ರಕ್ಕೆ ಎಷ್ಟು ಖರ್ಚು ಮಾಡಿದ್ದೇನೆ? ಅದರಿಂದ ಎಷ್ಟು ಲಾಭ ಪಡೆಯಬೇಕು? ಎಂಬೆಲ್ಲ ಸಂಗತಿಗಳನ್ನು ತಿಳಿದುಕೊಳ್ಳಲು ಶುರುಮಾಡುತ್ತಾಳೆ. ಈ ರೀತಿಯ ತರಬೇತಿ ಸಿಗದ ಕಾರಣ ನಮ್ಮ ರುಡ್ಸೆಟ್ ಸಂಸ್ಥೆ ಲಕ್ಷಾಂತರ ಜನರಿಗೆ ತರಬೇತಿ ಜೊತೆಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ. ಸುಮಾರು 58 ಸಾವಿರ ಜನ ವೈವಿಧ್ಯಮಯ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಸ್ವಉದ್ಯೋಗದಿಂದ ಆರ್ಥಿಕ ಲಾಭ ಒಂದೆಡೆಯಾದರೆ, ವ್ಯವಹಾರ ಹೇಗೆ ಮಾಡುವುದು ಎಂಬ ಕೌಶಲವನ್ನು ಗಳಿಸುವ ದೊಡ್ಡ ಲಾಭ ಮತ್ತೊಂದೆಡೆ. ಇಂದು ಮಹಿಳೆಯರಿಗೆ ಉದ್ಯೋಗ ಮಾಡಲು ಸಿಡ್ಬಿಯ ಮೂಲಕ ಸಾಲ ಸಿಗುತ್ತದೆ. ವ್ಯಾಪಾರದಲ್ಲಿ ಏಳಿಗೆ ಕಾಣುತ್ತ, ಸಾಲ ಮರಳಿಸುವ ಸಾಮರ್ಥ್ಯ ಬಂದರೆ ನಿಜವಾಗಿಯೂ ಇದು ಒಂದು ವರವಾಗಬಲ್ಲದು. ಯಾವಾಗ ಮಹಿಳೆಯ ಕೈಯಲ್ಲಿ ಸ್ವಲ್ಪ ಹಣವಿರುತ್ತದೋ, ಆಗ ಆಕೆಗೆ ಸಮಾಜ, ಮನೆ ಮತ್ತು ಗಂಡ-ಮಕ್ಕಳ ದೃಷ್ಟಿಯಲ್ಲಿ ಗೌರವ ಸಿಗುತ್ತದೆ.

    ಓರ್ವ ಕುಬ್ಜ ಮಹಿಳೆ ನಮ್ಮ ಕೃಷಿ ಮೇಳಕ್ಕೆ ಬಂದಿದ್ದಳು. ಅವಳಿಗೆ ನಾವು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದ ಸಂದರ್ಭದಲ್ಲಿ ತನ್ನ ಕಥೆ ಹೇಳಿದಳು. ಅವಳು ದಿನವೂ ಮನೆಯಲ್ಲಿ ಊಟ ಮಾಡುವಾಗ ‘ಈ ಅನ್ನ ನನ್ನದಲ್ಲ ನಾನು ಯಾರದ್ದೋ ಋಣದಲ್ಲಿದ್ದೇನೆ’ ಎನ್ನುವ ಭಾವನೆ ಬರುತ್ತಿತ್ತಂತೆ! ಏಕೆಂದರೆ ಪ್ರತಿನಿತ್ಯ ಅಪ್ಪ ಅಮ್ಮ ಕಣ್ಣೀರು ಹಾಕ್ತಾ ‘ನಾವಿರುವವರೆಗೆ ಸರಿ, ಆಮೇಲೆ ನಿನಗೆ ಯಾರು ಗತಿ’ ಅಂತ ಹೇಳ್ತಾ ಇದ್ರು, ಜೊತೆಗೆ ಅಣ್ಣ-ತಮ್ಮಂದಿರು ಕೂಡ ‘ನಿನಗೆ ಮದುವೆ ಆಗಲ್ಲ, ನೀನು ನಮಗೆ ಯಾವತ್ತಿಗೂ ಒಂದು ಹೊರೆ’ ಎನ್ನುತ್ತಿದ್ದರು. ಹಾಗಾಗಿ ಅನ್ನ ಗಂಟಲಲ್ಲಿ ಇಳಿತಾ ಇರಲಿಲ್ಲ. ಆಮೇಲೆ ಯೋಜನೆಯವರು ಮನೆಗೆ ಬಂದು ನೀನ್ಯಾಕೆ ಸಂಘಕ್ಕೆ ಸೇರಬಾರದು? ಅಂತ ಕೇಳಿದ್ರು. ನಂತರ ನಾನು ಸಂಘಕ್ಕೆ ಸೇರಿದೆ. ಮೆಣಸಿನಹುಡಿ ಮಾಡುವ ಸಣ್ಣ ಮೆಷಿನ್ ತೆಗೆದುಕೊಂಡೆ. ಅಕ್ಕ ಪಕ್ಕದ ಮನೆಯವರಿಗೆ ಪ್ಯಾಕ್ ಮಾಡಿಕೊಡಲು ಶುರುಮಾಡಿದೆ. ಆಮೇಲೆ 2-3 ಜನರನ್ನು ಕೆಲಸಕ್ಕೆ ಇಟ್ಟುಕೊಂಡೆ. ದೊಡ್ಡ ಅಂಗಡಿಗಳಿಗೆ ಪ್ಯಾಕ್ ಮಾಡಿಕೊಡಲು ಆರಂಭಿಸಿದೆ. ಈಗ ನನ್ನ ಖರ್ಚು, ಮನೆ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಬಹಳ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೇಳಿದಳು. ಈ ರೀತಿಯ ಹೆಮ್ಮೆ, ಆತ್ಮವಿಶ್ವಾಸ ಬರಬೇಕಾದರೆ ಮಹಿಳೆಗೆ ಉದ್ಯೋಗ ಅವಶ್ಯ.

    ಧರ್ಮಸ್ಥಳದಲ್ಲಿ ಸಮೃದ್ಧಿ ಸಂತೃಪ್ತಿ ಎಂಬ ಮಹಿಳಾ ಉದ್ದಿಮೆದಾರರ ಕಾರ್ಯಾಗಾರ ನಡೆದಿತ್ತು. ಅದರಲ್ಲಿ ಸ್ವಉದ್ಯೋಗ ಮಾಡಿರುವ, ಮಾಡುತ್ತಿರುವ ಅನೇಕ ಮಹಿಳೆಯರು ಭಾಗಿಯಾಗಿದ್ದರು. ಅವರ ಉದ್ದಿಮೆಗಳನ್ನು ನೋಡಿ ಸಂತೋಷವಾಗಿತ್ತು. ಕಾರ್ಯಾಗಾರಕ್ಕೆ ಬಂದ ಹೆಚ್ಚಿನವರು ಸೋಲಾರ್ ಯಂತ್ರ ಬಳಸಿ ಉದ್ದಿಮೆ ಮಾಡುತ್ತಿದ್ದಾರೆಂದು ತಿಳಿದು ಆಶ್ಚರ್ಯವಾಯಿತು.

    ಸುಮಾರು 16 ಸಾವಿರ ಮಹಿಳೆಯರು ಸೋಲಾರ್ ಅಳವಡಿಸಿಕೊಂಡಿದ್ದರು. ಇನ್ನಷ್ಟು ಮಹಿಳೆಯರು ಅದರ ಮಾಹಿತಿ ಪಡೆಯಲು ಕಾರ್ಯಾಗಾರಕ್ಕೆ ಬಂದಿದ್ದರು. ಸೂರ್ಯನ ಬೆಳಕಿನಿಂದ ನಡೆಯುವ ಹೊಲಿಗೆ ಯಂತ್ರ, ರೊಟ್ಟಿ ಯಂತ್ರ, ಕಬ್ಬಿನ ಜ್ಯೂಸ್, ಹಪ್ಪಳ, ಮೊಸರು ಕಡಿಯುವುದು… ಇದನ್ನೆಲ್ಲಾ ಪ್ರಾತ್ಯಕ್ಷಿಕೆಯಲ್ಲಿ ನೋಡಿ ಬಹಳ ಸಂತೋಷವಾಯಿತು. ಒಂದು ಕಾಲದಲ್ಲಿ, ಕಾಡಿನಿಂದ ಕಟ್ಟಿಗೆ ತಂದು ಒಲೆ ಉರಿಸಿ ಅಡುಗೆ ಮಾಡಬೇಕಾಗಿತ್ತು. ಆಮೇಲೆ ಗ್ಯಾಸ್, ಕರೆಂಟ್ ಬಂತು. ಇನ್ನೇನಾದರೂ ಸೋಲಾರ್ ಬಳಕೆ ಮಾಡುವ ಮೂಲಕ ನಮ್ಮ ಹೆಣ್ಣುಮಕ್ಕಳಿಗೆ ಅನುಕೂಲ ಆಗಬಹುದು. ನಮ್ಮ ಸಂಸ್ಥೆಯಿಂದ ಈಗಾಗಲೇ 5,720 ಅಧಿಕ ಮಂದಿ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

    ವಿದೇಶದಲ್ಲಿ ಯಶಸ್ವಿ ಪ್ರಯೋಗ: ನಾವು ವಿದೇಶಕ್ಕೆ ಹೋದಾಗ ಅಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿ ಸೋಲಾರ್ ಪ್ಯಾನಲ್​ಗಳನ್ನು ಹಾಕಿರುವುದನ್ನು ಗಮನಿಸುತ್ತಿದ್ದೆವು. ಅವರು ಅದಾಗಲೇ ವಿದ್ಯುತ್​ಗೆ ಪರ್ಯಾಯವಾಗಿ ಸೌರಶಕ್ತಿಯನ್ನು ಬಳಸುತ್ತಿದ್ದರು. ಇತ್ತೀಚೆಗೆ ತುಮಕೂರಿನಲ್ಲಿ ಕೆಲವಾರು ಬರಡು ಪ್ರದೇಶಗಳನ್ನು ಈ ರೀತಿಯ ಸೋಲಾರ್ ಪ್ಯಾನಲ್ ಅಳವಡಿಸಲು ಬಿಟ್ಟುಕೊಟ್ಟಿದ್ದಾರೆ. ಅದರಿಂದ ರೈತರಿಗೆ ಆದಾಯವೂ ಬಂದಿದೆ ಅಂತ ಕೇಳಿದ್ದೇನೆ. ನಮ್ಮ ಹಿರಿಯರು ಬೇಸಿಗೆಯಲ್ಲಿ ಸೂರ್ಯನ ಬೆಳಕನ್ನು ಸ್ವಲ್ಪವೂ ಹಾಳು ಮಾಡುತ್ತಿರಲಿಲ್ಲ. ನಾವೆಲ್ಲಾ ಚಿಕ್ಕವರಿರುವಾಗ ಹಪ್ಪಳ ಮಾಡಿ ಬಿಸಿಲಿಗೆ ಹಾಕಿ ಒಣಗಿಸುವುದೇ ಒಂದು ದೊಡ್ಡ ಗೌಜಿ. ಇಡೀ ವರ್ಷಕ್ಕೆ ಬೇಕಾಗುವಷ್ಟು ಪದಾರ್ಥಗಳನ್ನು ಅವರು ಸೂರ್ಯನ ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದರು. ಜೊತೆಗೆ ಕೃಷಿಕರಿಗೆ ಅಡಕೆ, ಭತ್ತ ಒಣಗಿಸಲು ಸೂರ್ಯನ ಬೆಳಕು ಬೇಕು. ಸೂರ್ಯನ ಬೆಳಕಿನಲ್ಲಿ ಸೋಲಾರ್ ಮೂಲಕ ರಬ್ಬರ್ ಒಣಗಿಸುವ ಉಪಾಯವನ್ನು ಕಂಡುಹುಡುಕಿದ್ದಾರೆ.

    ಸೌರಶಕ್ತಿ ಖಾಲಿಯಾಗುವುದಲ್ಲ, ನಾವು ಎಷ್ಟು ಉಪಯೋಗ ಮಾಡುತ್ತೇವೆ, ಅಷ್ಟು ಒಳ್ಳೆಯದು. ವಿದ್ಯುತ್ ಮೂಲಕ ಬೆಳಗ್ಗೆಯಿಂದ ಯಂತ್ರ ಓಡ್ತಾ ಇದ್ರೆ ತಗುಲುವ ವೆಚ್ಚ ಜಾಸ್ತಿ ಆಗಬಹುದು. ಆದರೆ ಸೌರಶಕ್ತಿಯಾಧಾರಿತ ಯಂತ್ರ ಉಪಯೋಗ ಮಾಡಿ ಜಾಸ್ತಿ ಲಾಭ ಪಡೆದುಕೊಳ್ಳಬಹುದು. ಯಾವುದೇ ಹೊಸ ಉದ್ದಿಮೆ ಮಾಡುವ ಮೊದಲು ಹತ್ತು ಸಲ ಯೋಚಿಸಬೇಕು. ಮನೆ ಮಂದಿಯ ಅಭಿಪ್ರಾಯ, ಸಹಕಾರ ತೆಗೆದುಕೊಳ್ಳಬೇಕು. ದೊಡ್ಡ ಮೊತ್ತದ ಲೋನ್ ತೆಗೆದುಕೊಳ್ಳುವ ಮುಂಚೆ ಗಂಡ, ಮಗನಿಗೆ ಕೇಳಿ ವಾಪಸ್ ಕಟ್ಟುವಾಗ ನೀವು ಇದ್ದೀರಾ? ಅಂತ ವಿಚಾರಿಸಬೇಕು. ಇಲ್ಲವಾದಲ್ಲಿ ವಾಪಸ್ ಕಟ್ಟುವಾಗ ಮಹಿಳೆಯರೇ ಕಷ್ಟಪಡಬೇಕಾಗುತ್ತದೆ. ಸಾಲ ಪಡೆದು ವಾಪಸ್ ಕಟ್ಟುವುದರಲ್ಲಿ ನಮ್ಮ ಯೋಜನೆಯ ಮಹಿಳೆಯರು ಬಹಳ ಬುದ್ಧಿವಂತರು. ಮಹಿಳೆಯರ ಸಾಲ ಬಾಕಿ ಅಂತ ಹೇಳುವುದನ್ನು ನಾನು ಕೇಳಿಲ್ಲ. ಎಲ್ಲರೂ ಸಾಲವನ್ನು ಕ್ರಮವತ್ತಾಗಿ ಕಟ್ಟುತ್ತಾರೆ. ಆದ್ದರಿಂದ ಮಹಿಳೆಯರನ್ನು ಎಲ್ಲರೂ ನಂಬುವರು. ಯಾಕೆಂದರೆ ಅವಳಿಗೆ ಮತ್ತೆ ಮತ್ತೆ ಸಾಲ ಬೇಕು. ಅವಳಿಗೆ ನಿರಂತರವಾಗಿ ಇಂತಹ ಸಂಸ್ಥೆಯ ಪ್ರಯೋಜನ ಬೇಕು. ಓರ್ವ ಮಹಿಳೆ ದುಡಿದರೆ ಅದರ ಲಾಭ ಮನೆ ಮಂದಿಗೆ ಹೋಗುವುದಲ್ಲದೇ, ಅನ್ಯವಾಗಿ ಸ್ವಲ್ಪವೂ ಖರ್ಚಾಗುವುದಿಲ್ಲ. ಅವಳು ಏನು ದುಡಿಯುತ್ತಾಳೋ ಅದು ಮನೆಗೆ ಬರುತ್ತದೆ, ಮಕ್ಕಳಿಗೆ ಬರುತ್ತದೆ, ಅವರ ವಿದ್ಯಾಭ್ಯಾಸಕ್ಕೆ ಹೋಗುತ್ತದೆ. ಒಂದು ಪೈಸೆಯೂ ಆಚೆ-ಈಚೆ ಆಗುವುದಿಲ್ಲ. ಹಾಗಾಗಿ ನಮ್ಮಲ್ಲಿ ಮಹಿಳಾ ಸಂಘಗಳು ಇವತ್ತು ಪುರುಷ ಸಂಘಕ್ಕಿಂತ ಜಾಸ್ತಿ ಇದೆ.

    ಬದುಕೆಂಬ ಸೈಕಲ್ ಬ್ಯಾಲೆನ್ಸ್: ಸಂಸಾರ ಎನ್ನುವುದು ಸೈಕಲ್ ಬ್ಯಾಲೆನ್ಸ್ ಇದ್ದ ಹಾಗೆ. ನಮಗೆ ಅಂಗಡಿಯಲ್ಲಿ ಸೈಕಲ್ ಕೊಡ್ತಾರೆ, ಆದರೆ ಬ್ಯಾಲೆನ್ಸ್ ಮಾಡುವುದನ್ನು ನಾವೇ ಕಲಿಯಬೇಕು. ಹಾಗೆ, ಮಹಿಳೆಯರು ಸಂಸಾರ ಮತ್ತು ಉದ್ಯೋಗಗಳ ಮಧ್ಯೆ ವ್ಯವಹಾರ ಮತ್ತು ಸಂಬಂಧಗಳನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಇದನ್ನು ಮಹಿಳೆಯರು ಬಾಲ್ಯದಿಂದಲೇ ಕಲಿತಿದ್ದಾರೆ. ಬಾಲ್ಯ ಮತ್ತು ವೃದ್ಧಾಪ್ಯ ಎರಡೂ ಪರಾವಲಂಬಿ. ಆಗ ಯಾರದ್ದಾದರೂ ಆಶ್ರಯ ಬೇಕು. ಮಧ್ಯದ ಪ್ರಾಯ ಯೌವ್ವನ. ಅದು ಮಾತ್ರ ನಮಗೆ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುತ್ತದೆ. ಈ ಅವಧಿಯಲ್ಲಿ ವೃದ್ಧಾಪ್ಯಕ್ಕೆ ಬೇಕಾದಷ್ಟು ಮಾಡಿಟ್ಟುಕೊಂಡರೆ ನಾವು ಯಾರಿಗೂ ಹೊರೆಯಾಗುವ ಅವಕಾಶ ಇರುವುದಿಲ್ಲ. ಹಾಗಾಗಿ ನಾವು ನಮ್ಮ ಯೌವ್ವನವನ್ನು ಬಲು ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಸಾಕಷ್ಟು ಕೆಲಸ ಮಾಡಿ ನಮ್ಮದೇ ಆದ ಬ್ಯಾಂಕ್ ಬ್ಯಾಲೆನ್ಸನ್ನು ಇಟ್ಟುಕೊಳ್ಳಬೇಕು. ಕೆಲವರು ನಮ್ಮನ್ನು ನಾಳೆ ಮಕ್ಕಳು ನೋಡ್ತಾರೆ ಎಂದೆನ್ನುತ್ತಾರೆ. ನೋಡಿದರೆ ಒಳ್ಳೆಯದೇ, ಆದರೆ ನೋಡದಿದ್ದರೆ? ನಾವು ಯಾರಿಗೂ ಹೊರೆಯಾಗದೆ ಬದುಕುವಂತಿರಬೇಕು. ಯಾವಾಗಲೂ ನಾವು ದೇವರು ಕೊಡ್ತಾರೆ ಅಂತ ಯೋಚನೆ ಮಾಡುತ್ತಾ ಇರಬಾರದು. ಅವಕಾಶಗಳು ಬಂದಾಗ ಕಣ್ಣು ಮುಚ್ಚಿಕೊಂಡಿದ್ದರೆ ಮತ್ತೆ ಅವಕಾಶಗಳು ಸಿಗುವುದಿಲ್ಲ.

    ನಾರದ ಭೂಮಿಗೆ ಬಂದಾಗ..: ನಾರದರು ಒಮ್ಮೆ ಭೂಮಿಗೆ ಬಂದಿದ್ದರಂತೆ. ಅವರು ಎಲ್ಲವನ್ನೂ ನೋಡುತ್ತಾ ಬರುವಾಗ ಒಂದು ಕಸಬರಿಕೆಯನ್ನು ಮನೆಯಲ್ಲಿ ನೋಡಿದರಂತೆ. ಪಾಪ ಇಡೀ ದಿವಸ ಕೆಲಸ ಮಾಡುತ್ತೆ, ಮತ್ತೆ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುತ್ತೆ ಎಂದು ವಿಷಾದಿಸುತ್ತ ನಾರದರು ಕಸಬರಿಕೆಗೆ ‘ನಿನ್ನನ್ನು ನಾನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತೇನೆ ಬರುತ್ತೀಯಾ?’ ಎಂದು ಕೇಳಿದರಂತೆ. ಕಸಬರಿಕೆಗೆ ಬಹಳ ಖುಷಿಯಾಯಿತಂತೆ. ಮರುದಿವಸ ಸೀರೆ, ಬಂಗಾರ ತೊಟ್ಟು ನಾರದರು ಬರುವುದನ್ನು ಕಾಯುತ್ತಿತ್ತಂತೆ. ಆಗ ನಾರದರು ಬಂದು ಸ್ವರ್ಗ ಲೋಕಕ್ಕೆ ಹೋಗಲು ರೆಡಿಯಾಗಿದ್ದಿ ಅಲ್ವಾ? ಎಂದಾಗ ಕಸಬರಿಕೆ ಬಹಳ ನಾಚಿಕೆಯಿಂದ ಕೇಳುತ್ತದೆ, ನನಗೆ ಅಲ್ಲಿ ಗುಡಿಸುವ ಕೆಲಸ ಇದೆಯಾ?’ ಅಂತ. ಅದಕ್ಕೆ ಅವರು ‘ಅಯ್ಯೋ ಸ್ವರ್ಗ ಲೋಕದಲ್ಲಿ ಧೂಳೇ ಇಲ್ಲ! ಅಲ್ಲಿ ಗುಡಿಸುವ ಕೆಲಸವೇ ಇಲ್ಲ’ ಎಂದು ನುಡಿದರಂತೆ. ಆಗ ಅದು ‘ಹಾಗಿದ್ದರೆ ನಾನು ಬರುವುದಿಲ್ಲ’ ಅಂತ ಮತ್ತೆ ಮೂಲೆ ಸೇರಿತಂತೆ! ಹಾಗೆಯೇ ನಮ್ಮ ಮಹಿಳೆಯರು ಕಸ, ಮುಸುರೆ ಮಾಡುವುದು, ಅಡುಗೆ ಮಾಡುವುದಕ್ಕೆ ತಾವು ಸೀಮಿತರು ಅಂದುಕೊಂಡಿದ್ದಾರೆ. ಅದಕ್ಕಿಂತ ದೊಡ್ಡ ಸ್ವರ್ಗವನ್ನು ತೋರಿಸಿದರೂ, ಅವರಿಗೆ ಬೇಡವಾಗಿದೆ. ಸಿಗುವ ಅವಕಾಶವನ್ನು ಬಾಚಿಕೊಳ್ಳಬೇಕು.

    ಹೆಣ್ಣು ಮಕ್ಕಳ ಸ್ವಾವಲಂಬನೆ

    ನಾನು ನಮ್ಮ ಸಂಘದವರಿಗೆ ಯಾವತ್ತೂ ಒಂದು ಕಿವಿಮಾತನ್ನು ಹೇಳಬಯಸುತ್ತೇನೆ. ನೀವು ನಿಮ್ಮ ಹೆಣ್ಣು ಮಕ್ಕಳನ್ನು ಮದುವೆಗಾಗಿ ಬೆಳೆಸಬೇಡಿ, ಅವರನ್ನು ಜೀವನಕ್ಕಾಗಿ ಬೆಳೆಸಿ. ಕಾರಣ ನಾವೆಲ್ಲರೂ ಹೆಣ್ಣು ಮಗು ಹುಟ್ಟಿದ ಕೂಡಲೇ ಅವಳ ಮದುವೆಯೆಡೆಗೆ ಯೋಚನೆ ಹರಿಸುತ್ತೇವೆ. ಹೆಣ್ಣಿನ ಕೆಲಸ ಮದುವೆಯಾಗಿ ಮಕ್ಕಳನ್ನು ಬೆಳೆಸುವುದಲ್ಲ. ಅವಳಿಗೂ ಒಂದು ಜೀವನ ಇದೆ, ಆ ಜೀವನಕ್ಕಾಗಿ ಬೆಳೆಸಬೇಕು. ಅವಳಿಗೆ ವಿದ್ಯೆ, ಉದ್ಯೋಗ ಎಂಬ ಎರಡು ರೆಕ್ಕೆಗಳನ್ನು ಕೊಟ್ಟು ತನ್ನ ಕಾಲ ಮೇಲೆ ತಾನು ನಿಂತ ಬಳಿಕ ಮದುವೆ ಮಾಡಬೇಕು. ಏಕೆಂದರೆ ತಾಯಿ ಮನೆಯಲ್ಲಿ 20 ವರ್ಷ ಸುಖವಾಗಿ ಬೆಳೆದ ಹುಡುಗಿ, ಅಲ್ಲಿಂದ ತಕ್ಷಣ ಗಂಡನ ಮನೆಗೆ ಹೋದಾಗ ಅಲ್ಲಿಯ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಲಾರಳು. ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲೊಂದು ಜನ್ಮವಾದರೆ ಗಂಡನ ಮನೆಯಲ್ಲಿ ಹೋಗಿ ಮತ್ತೆ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಮತ್ತೊಂದು ಜನ್ಮವಿದೆ. ಅದು ಬೇರೆಯೇ ಜನ್ಮ. ಅಲ್ಲಿಯ ಪರಿಸರ, ಮಂದಿ ಬಗ್ಗೆ ಅವಳಿಗೆ ಗೊತ್ತಿರುವುದಿಲ್ಲ. ಒಂದು ಗಿಡವನ್ನು 20 ವರ್ಷ ನಾವು ಬೆಳೆಸಿದ ಸ್ಥಳದಿಂದ ಕಿತ್ತು ಬೇರೊಂದು ಕಡೆ ಬೆಳೆಸಿದರೆ ಆ ಪರಿಸರಕ್ಕೆ ಆ ಗಿಡ ಹೊಂದಿಕೊಳ್ಳಬೇಕಾದರೆ ಅಲ್ಲಿ ಸಾಕಷ್ಟು ಆರೈಕೆ ಮಾಡಬೇಕಾಗುತ್ತದೆ. ಆಗ ಮಾತ್ರ ಮತ್ತೆ ಆ ಗಿಡ ಚಿಗುರಲು ಸಾಧ್ಯ. ನಮ್ಮಲ್ಲಿ ಒಂದು ವಿದ್ಯೆ, ಇನ್ನೊಂದು ಕೌಶಲ (ಉದ್ಯಮ, ಕೈ ಕೆಲಸ, ಹೊಲಿಗೆ) ಇವೆರಡು ಕೂಡ ನಮಗೆ ರೆಕ್ಕೆ ಇದ್ದ ಹಾಗೆ. ನಾವು ಸ್ವತಂತ್ರವಾಗಿ ಬದುಕಲು ಸರ್ವಹಂತಗಳಲ್ಲಿಯೂ ಸಹಾಯ ಮಾಡುತ್ತವೆ.

    ಟಿ20 ವಿಶ್ವಕಪ್‌: ಅಮೆರಿಕಕ್ಕೆ ಹಾರಿದ ಟೀಂ ಇಂಡಿಯಾದ ಮೊದಲ ಬ್ಯಾಚ್: ಐಪಿಎಲ್ ಬಳಿಕ 2ನೇ ಬ್ಯಾಚ್ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts