More

    ಕರೊನಾ ತಡೆಗೆ ಲಾಕ್​ಡೌನ್ ಘೊಷಿಸಿ

    ರಾಣೆಬೆನ್ನೂರ: ಕರೊನಾ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸರ್ಕಾರ ಕೂಡಲೆ ಲಾಕ್​ಡೌನ್ ಘೊಷಿಸಬೇಕು. ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಸಾರ್ವಜನಿಕರು ಗುರುವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶಿರಸ್ತೇದಾರ್ ವಿ.ವಿ. ಕಲ್ಲಮ್ಮನವರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಅಧಿಕವಾಗತೊಡಗಿದೆ. ಆದರೆ, ಜನತೆ ಇದರ ಅರಿವಿಲ್ಲದಂತೆ ಓಡಾಡುತ್ತಿದ್ದಾರೆ. ಇದರಿಂದ ಇತರರಿಗೂ ಸೋಂಕಿನ ಭೀತಿ ಶುರುವಾಗಿದೆ.

    ರಾಜ್ಯ ಸರ್ಕಾರ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಲಾಕ್​ಡೌನ್ ಘೊಷಿಸಿದೆ. ಆದರೆ ನಗರದ ಹೋಟೆಲ್, ಬೀದಿ ಬದಿ ಅಂಗಡಿ ಸೇರಿ ಇತರೆಡೆ ಎಲ್ಲಿಯೂ ಈ ಆದೇಶ ಪಾಲನೆಯಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಕೂಡಲೆ ಮತ್ತೆ ಲಾಕ್​ಡೌನ್ ಘೊಷಿಸಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಹನುಮಂತಪ್ಪ ಕಬ್ಬಾರ, ಕರಬಸಪ್ಪ ದಾಸಪ್ಪನವರ, ಕಿರಣಕುಮಾರ ಉರಗಿ, ಸಿದ್ದಪ್ಪ ಸಂಗಾಪುರ, ಉಜ್ಜಪ್ಪ ಹಲಗೇರಿ, ಸಂತೋಷ ಗೊರವಜ್ಜಿ, ಸೋಮನಗೌಡ ಚೌಡಪ್ಪನವರ, ಗುರುಶಾಂತಪ್ಪ ಹೊಸಮನಿ, ಗಣೇಶ ದಾಸಪ್ಪನವರ, ಬಿ.ಕೆ. ದೇಸೂರ, ಹನುಮಂತಪ್ಪ ನಿಟ್ಟೂರು, ಬ್ರಹ್ಮಾನಂದ ಉಜ್ಜೇರ, ನಾಗರಾಜ ಹನುಮನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

    ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಆದೇಶ: ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆದೇಶ ಹೊರಡಿಸಿದ್ದಾರೆ.

    ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಯಾಣಿಸುವ ಸಂದರ್ಭಗಳಲ್ಲಿ ಹಾಗೂ ವಿವಾಹ ಕಾರ್ಯಕ್ರಮ, ಶವ ಸಂಸ್ಕಾರ ಸಂದರ್ಭದಲ್ಲಿ ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ವಿವಾಹಕ್ಕೆ ಅನುಮತಿ ಕೋರಿ ತಹಸೀಲ್ದಾರ್​ಗೆ ಅರ್ಜಿ ಸಲ್ಲಿಸುವಾಗ ಮುಚ್ಚಳಿಕೆ ಸಲ್ಲಿಸುವುದು ಕಡ್ಡಾಯ. ಶವಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮದ್ಯಪಾನ, ಪಾನ್​ಬೀಡಾ, ಗುಟ್ಖಾ ಹಾಗೂ ತಂಬಾಕು ಸೇವನೆ ನಿಷೇಧಿಸಲಾಗಿದೆ. ಮದ್ಯಮಾರಾಟ ಅಂಗಡಿ, ಪಾನ್​ಬೀಡಾ, ಗುಟ್ಖಾ, ತಂಬಾಕು ಮಾರಾಟದ ಅಂಗಡಿಗಳ ಬಳಿ ಸಾರ್ವಜನಿಕರು ಕನಿಷ್ಟ 6 ಅಡಿ ಅಂತರ ಕಾಪಾಡಬೇಕು. ಅಂಗಡಿಗಳ ಬಳಿ ಐದಕ್ಕಿಂತ ಹೆಚ್ಚಿನ ಜನತೆ ನಿಲ್ಲದಂತೆ ಮಾಲೀಕರು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

    ಕಂಟೇನ್ಮೆಂಟ್ ಜೋನ್​ಗಳಲ್ಲಿ ಶಾಲಾ-ಕಾಲೇಜ್​ಗಳು, ವಿವಿಧ ತರಬೇತಿ ಸಂಸ್ಥೆ ಆರಂಭಿಸುವುದನ್ನು ಜು. 31ರವರೆಗೆ ನಿಷೇಧಿಸಲಾಗಿದೆ. ಆದರೆ, ಆನ್​ಲೈನ್ ಶಿಕ್ಷಣ ಕೊಡಬಹುದಾಗಿದೆ. ಸರ್ಕಾರಿ ತರಬೇತಿ ಸಂಸ್ಥೆಗಳಿಗೆ ಜು. 15ರಿಂದ ಇಲಾಖೆ ಹೊರಡಿಸುವ ಮಾರ್ಗಸೂಚಿ ಆಧಾರದಲ್ಲಿ ಅನುಮತಿಸಲಾಗುವುದು. ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಚಟವಟಿಕೆಗಳನ್ನು ನಿರ್ಬಂಧಿಸಲಾಗಿದೆ

    65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಬೇಕು. ರಾಜ್ಯ ಸರ್ಕಾರದ ತುರ್ತು ಸೇವೆಗಳಲ್ಲಿ ತೊಡಗಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆ, ನಿಗಮ ಮಂಡಳಿಗಳು ಶನಿವಾರದ ದಿನ ಕಚೇರಿ ಆರಂಭ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇತು ಆಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಈ ಆಪ್​ನಿಂದ ಅನುಕೂಲವಾಗಲಿದೆ. ಕೋವಿಡ್ ನಿರ್ವಹಣೆಯ ಲಾಕ್​ಡೌನ್ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts