More

    ಕನ್ನಡದಿಂದ ಜಾತಿ, ಧರ್ಮ ಸಮನ್ವಯ

    ಕೊಳ್ಳೇಗಾಲ: ಜಾತಿ, ಧರ್ಮಗಳನ್ನು ಮೀರಿ ನಾವೆಲ್ಲರೂ ಒಂದೇ ಎಂಬುದನ್ನು ತೋರಿಸುವುದೇ ಭಾಷೆ ಎಂದು ಸಾಹಿತಿ ವೆಂಕಟರಾಜ್ ಹೇಳಿದರು.

    ತಾಲೂಕಿನ ಕುಂತೂರು ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಸೋಮವಾರ ಕಾರ್ಮಿಕರ ಸಂಘ ಆಯೋಜಿಸಿದ್ದ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಕನ್ನಡ ಭಾಷೆಯೇ ಒಂದು ಸಂಸ್ಕೃತಿ. ನಮ್ಮ ತಾಯಿ ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಕನ್ನಡಿಗರಾದ ನಾವು ಕನ್ನಡದ ಕಂಪನ್ನು ವಿಸ್ತರಿಸಬೇಕು. ಅದರ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕು ಎಂದರು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕನ್ನಡ ಉಳಿಯಬೇಕಾದರೆ ಅದರ ಮಹತ್ವವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು. ಎಳವೆಯಲ್ಲೇ ಮಕ್ಕಳಿಗೆ ಕನ್ನಡದ ಶ್ರೇಷ್ಠತೆ ಬಗ್ಗೆ ಜಾಗೃತಿ ಉಂಟಾಗುವಂತೆ ಮಾಡಬೇಕು. ಕನ್ನಡದಲ್ಲೇ ಎಲ್ಲರೂ ಮಾತನಾಡಬೇಕು. ವ್ಯವಹಾರಿಕ ಜೀವನಕ್ಕೆ ಅನ್ಯಭಾಷೆ ಮಾತನಾಡಿದರೂ ಮೊದಲ ಪ್ರಾಶಸ್ತ್ಯ ಕನ್ನಡಕ್ಕೆ ಕೊಡಬೇಕು ಎಂದರು.

    ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಗೌರವಾಧ್ಯಕ್ಷ ಚಂದ್ರಶೇಖರ್ ಮೇಟಿ ಮಾತನಾಡಿ, ಕನ್ನಡದ ರಾಜ್ಯೋತ್ಸವ ಕಾರ್ಯಕ್ರಮಗಳು ರಾಜ್ಯಾದ್ಯಂತ ನವೆಂಬರ್ ತಿಂಗಳಿನಲ್ಲಿ ನಿರಂತರ ಆಚರಣೆಯಲ್ಲಿವೆ. ಇದು ವರ್ಷಪೂರ್ಣ ನಡೆಯಬೇಕು. ಆಗ ಮಾತ್ರ ಕನ್ನಡಿಗರನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕೆ.ಎಸ್ ಭೃಂಗೇಶ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ಮೂರ್ತಿ, ಕಾರ್ಮಿಕರಾದ ಭಾರ್ಗವ್, ಬಸವರಾಜು, ಹರೀಶ್, ಲಿಂಗರಾಜು, ಜಗದೀಶ್, ದಿಲೀಪ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts